ಶನಿವಾರ, ಜುಲೈ 2, 2022
25 °C
ಜವಾಹರಲಾಲ್ ನೆಹರೂ ಪುಣ್ಯಸ್ಮರಣೆ

ಆರೆಸ್ಸೆಸ್‌ನವರು ಭಾರತೀಯರೇ, ದ್ರಾವಿಡರೇ?: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆರೆಸ್ಸೆಸ್‌ನವರೇನು ಭಾರತೀಯರೇ? ಅದೇನು ನಮ್ಮ ದೇಶದ್ದಾ? ಅವರೇನು ದ್ರಾವಿಡರೇ? ದ್ರಾವಿಡರಷ್ಟೇ ಈ ದೇಶದವರು. ಈ ಪ್ರಶ್ನೆಗಳನ್ನೂ ನಾವು ಕೇಳಬೇಕಾಗುತ್ತದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯ ಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್‌ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್‌ಸಿಂಗ್‌ಗಿಂತ ದೇಶಭಕ್ತ ಬೇಕಾ?’ ಎಂದರು.

‘ಇಂತದನ್ನು ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತಾ? ಅದಕ್ಕಾಗಿಯೇ ಚರಿತ್ರೆ ಕೆದಕಲು ಹೋಗಬಾರದು. ಡಾ.ಅಂಬೇಡ್ಕರ್ ಅವರು, ‘ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು’ ಎಂದು ಹೇಳಿದ್ದರು. ಆರೆಸ್ಸೆಸ್‌ನವರಿಗೆ ನಿಜವಾದ ಚರಿತ್ರೆ ಬಗ್ಗೆ ಬಹಳ ಭಯ ಇದೆ. ಅದಕ್ಕಾಗಿಯೇ ಇತಿಹಾಸ ತಿರುಚುವ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ಹರಿಹಾಯ್ದರು.

ನೆಹರೂ ಅವರು ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಜಾತಂತ್ರದ ಆಧಾರದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಜ್ಞಾನಿಕ ಮನೋಧರ್ಮ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಈ ಕ್ಷೇತ್ರಗಳಲ್ಲಿನ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ಮತ್ತು ಜಾತಿ ಸಂಘರ್ಷಗಳ ಬಗ್ಗೆಯೇ ಮಾತನಾಡುತ್ತಾ ದೇಶದ ದಾರಿ ತಪ್ಪಿಸುತ್ತಾರೆ ಎಂದು ಟೀಕಿಸಿದರು.

ನಾಡಗೀತೆಗೆ ಅವಹೇಳನ– ಡಿಕೆಶಿ ಕಿಡಿ
‘ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದ ಕುವೆಂಪು ರಚಿಸಿರುವ ನಾಡಗೀತೆಯನ್ನು ಕಾರ್ಯಕ್ರಮಗಳಿಗೆ ಮುನ್ನ ಹಾಡುತ್ತೇವೆ. ಕೆಲವರು ಅದನ್ನೇ ತಿರುಚಿ ಅವಹೇಳನ ಮಾಡಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು, ‘ಜೂನ್ ಎರಡು ಹಾಗೂ ಮೂರರಂದು ಕಾಂಗ್ರೆಸ್ ಪ್ರಮುಖ ನಾಯಕರೆಲ್ಲ ಸೇರಿ ಚರ್ಚೆ ಮಾಡಿ, ಈ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ತೀರ್ಮಾನಿಸುತ್ತೇವೆ. ನಮ್ಮ ಸರ್ಕಾರ ಬಂದಾಗ ಈ ನಿರ್ಧಾರಗಳನ್ನೂ ವಾಪಸ್ ಪಡೆಯುತ್ತೇವೆ’ ಎಂದರು.

***

ನೆಹರೂ– ಗಾಂಧಿ ಪರಿವಾರದ ಓಲೈಸದಿದ್ದರೆ ಸಿದ್ದರಾಮಯ್ಯ ಅವರಿಗೆ ನೆಲೆಯೇ ಇಲ್ಲ. ದೇಶದಲ್ಲಿ ವಂಶಪಾರಂಪರ್ಯ ರಾಜಕಾರಣಕ್ಕೆ ಬೀಜ ಬಿತ್ತಿದವರೇ ನೆಹರೂ.
-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

*

ನಾವು ಯಾವತ್ತೂ ನೆಹರೂ ಅವರನ್ನು ಮೋದಿ ಅವರಿಗೆ ತುಲನೆ ಮಾಡಿಲ್ಲ. ಆದರೆ ರಾಹುಲ್‌ ಅವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಹಾಗೆ ಮಾತನಾಡುತ್ತಿದ್ದಾರೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

*

ಸೋನಿಯಾ ಗಾಂಧಿ ಸೆರಗು ಹಿಡಿದುಕೊಂಡು ಓಡಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಆರ್‌ಎಸ್‌ಎಸ್‌, ಮೋದಿ ಅವರನ್ನು ಟೀಕಿಸುವ ನೈತಿಕತೆ ಇಲ್ಲ.
ಕೆ.ಎಸ್. ಈಶ್ವರಪ್ಪ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು