ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಎಂಎಲ್‌ಸಿಗಳಿಗೂ ₹ 50 ಕೋಟಿ ಅನುದಾನಕ್ಕೆ ಆಗ್ರಹ

Last Updated 3 ಅಕ್ಟೋಬರ್ 2022, 19:36 IST
ಅಕ್ಷರ ಗಾತ್ರ

ಬೆಂಗಳೂರು: ಕಲಾವಿದರ ಕೋಟಾದಡಿ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಸಿ.ಪಿ. ಯೋಗೇಶ್ವರ್‌ ಅವರಿಗೆ ನೀಡಿದಂತೆ ಪರಿಷತ್‌ನ ಎಲ್ಲ ಸದಸ್ಯರಿಗೂ ತಲಾ ₹ 50 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಜೆಡಿಎಸ್‌ ಆಗ್ರಹಿಸಿದೆ.

ಪಕ್ಷದ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಒಬ್ಬರಿಗೆ ₹ 50 ಕೋಟಿ ಅನುದಾನ ಕೊಟ್ಟಿರುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸರಿಯಲ್ಲ. ಎಲ್ಲ ಸದಸ್ಯರಿಗೂ ಅಷ್ಟೇ ಮೊತ್ತದ ಅನುದಾನ ನೀಡಬೇಕು. ಪಕ್ಷದ ಎಲ್ಲ ವಿಧಾನ ಪರಿಷತ್‌ ಸದಸ್ಯರ ನಿಯೋಗದೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿಮಾಡಿ ಈ ಬೇಡಿಕೆ ಮುಂದಿಡಲಾಗುವುದು’ ಎಂದರು.

‘ಕಲಾವಿದರ ಕೋಟಾದಲ್ಲಿ ಮೇಲ್ಮನೆಗೆ ನಾಮಕರಣಗೊಂಡ ಸದಸ್ಯರೊಬ್ಬರಿಗೆ ಮುಖ್ಯಮಂತ್ರಿಯವರು ಅನುದಾನ ನೀಡಿದ್ದಾರೆ. ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಮೇಲ್ಮನೆಗೆ ಆಯ್ಕೆಯಾದವರು ಮತ್ತು ವಿವಿಧ ಕ್ಷೇತ್ರಗಳಿಂದ ನಾಮಕರಣಗೊಂಡ ಇತರೆ ಸದಸ್ಯರೂ ಇದ್ದಾರೆ. ಅವರಿಗೂ ತಲಾ ₹ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿ’ ಎಂದು ಆಗ್ರಹಿಸಿದರು.

ಭೋಜೇಗೌಡ ಆಗ್ರಹ: ಇದೇ ವಿಷಯದ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ‘ಯೋಗೇಶ್ವರ್‌ ಅವರ ಕೋರಿಕೆಯನ್ನು ಮಾನ್ಯ ಮಾಡಿರುವ ಮುಖ್ಯಮಂತ್ರಿಯವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ₹ 50 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸಂತಸದ ಸಂಗತಿ. ಅದೇ ರೀತಿ ಪರಿಷತ್‌ನ ಎಲ್ಲ ಸದಸ್ಯರ ಕ್ಷೇತ್ರಗಳಿಗೂ ತಲಾ ₹ 50 ಕೋಟಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT