ಭಾನುವಾರ, ಜೂನ್ 13, 2021
25 °C
ಡಾ ಸಿ.ಎನ್‌.ಅಶ್ವತ್ಥನಾರಾಯಣ – ಸುಧಾಕರ್

ಕೋವಿಡ್‌: ಸುಧಾಕರ್, ಅಶ್ವತ್ಥನಾರಾಯಣ ಮಧ್ಯೆ ಸಮನ್ವಯ ಕೊರತೆ – ಬಿಜೆಪಿಯಲ್ಲಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕೋವಿಡ್‌ಗೆ ಸಂಬಂಧಿಸಿದಂತೆ ಪದೇ ಪದೇ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವುದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಚಿವರ ಮಧ್ಯೆ ಸಮನ್ವಯ ಇಲ್ಲದೇ ಇರುವುದು ಅಥವಾ ಸಚಿವರ ಮಧ್ಯೆ ಪೈಪೋಟಿ ಇರುವುದು ಈ ರೀತಿಯ ಗೊಂದಲಕಾರಿ ಹೇಳಿಕೆಗಳಿಗೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ. ಇಂತಹ ಹೇಳಿಕೆಯಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತಿದೆ. ಇದರಿಂದ ಸರ್ಕಾರದ ವರ್ಚಸ್ಸಿಗೂ ಧಕ್ಕೆ ಬರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಳೆದ ವಾರ ಲಸಿಕೆ ಕುರಿತಾಗಿ ಇಬ್ಬರೂ ವಿಭಿನ್ನ ಹೇಳಿಕೆ ನೀಡಿದ್ದರು. ‘ವಿದೇಶಗಳಿಂದ ಲಸಿಕೆ ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಟೆಂಡರ್‌ ಕರೆಯಲಾಗಿದೆ’ ಎಂದು ಅಶ್ವತ್ಥನಾರಾಯಣ ಹೇಳಿದ್ದರು. ಬೇರೊಂದು ಕಡೆ ಮಾತನಾಡಿದ್ದ ಸುಧಾಕರ್‌ ಅವರು, ‘ವಿದೇಶದಿಂದ ಲಸಿಕೆ ಆಮದು ಮಾಡಿಕೊಳ್ಳುವ ವಿಚಾರನನಗೆ ಗೊತ್ತಿಲ್ಲ’ ಎಂದು ಹೇಳಿದ್ದರು.

ಬಳಿಕ ಮುಖ್ಯಮಂತ್ರಿಯವರೇ ಸುದ್ದಿಗೋಷ್ಠಿಯಲ್ಲಿ ಲಸಿಕೆ ಆಮದು ಮಾಡಿಕೊಳ್ಳುವುದು ಖಚಿತ ಎಂದು ಸ್ಪಷ್ಟಪಡಿಸಬೇಕಾದ ಅನಿವಾರ್ಯ ಬಂದೊದಗಿತು.

ಇದೀಗ ಶಿಲೀಂಧ್ರ ಸೋಂಕಿಗೆ ಸಂಬಂಧಿಸಿದಂತೆ ಔಷಧಿಯ ಕೊರತೆ ಇಲ್ಲ ಎಂದು ಅಶ್ವತ್ಥನಾರಾಯಣ ಅವರು ಹೇಳಿದ್ದರೆ, ಕೊರತೆ ಇದೆ ಎಂದು ಸುಧಾಕರ್‌ ಹೇಳಿರುವುದು ಮತ್ತೊಮ್ಮೆ ಗೊಂದಲಕ್ಕೆ ಕಾರಣವಾಗಿದೆ.

ಡಿಸಿಎಂ ಹೇಳಿದ್ದೇನು?: ಸದ್ಯಕ್ಕೆ ಶಿಲೀಂದ್ರ ಸೋಂಕಿಗೆ ಬಳಸಲಾಗುವ ಔಷಧಿಯ ಕೊರತೆ ಇಲ್ಲ. ಕೇಂದ್ರದಿಂದ 1,000 ವಯಲ್ಸ್ ಬಂದಿದೆ. ಮುಂದಿನ ದಿನಗಳಲ್ಲಿ ಔಷಧಿಯ ಕೊರತೆ ನೀಗಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಶಿಲೀಂಧ್ರ ಸೋಂಕಿಗೆ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ. ಎಲ್ಲಿಯೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಕೇಂದ್ರದಿಂದ ಇನ್ನೂ ಹೆಚ್ಚಿನ ಔಷಧಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಆರೋಗ್ಯ ಸಚಿವರು ಹೇಳಿದ್ದೇನು?: ರಾಜ್ಯದಲ್ಲಿ ಶಿಲೀಂಧ್ರ ಸೋಂಕು ಚಿಕಿತ್ಸೆಗೆ ಔಷಧದ ಕೊರತೆ ಇದೆ. ಎಷ್ಟು ಲಭ್ಯವಿದೆಯೋ ಅಷ್ಟನ್ನು ಮಾತ್ರ ಚಿಕಿತ್ಸೆಗೆ ಬಳಸುತ್ತಿದ್ದೇವೆ. ಆರು ವಿಭಾಗಗಳಿಗೆ ಆಗುವಷ್ಟು ಮಾತ್ರ ಔಷಧಿ ಇದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ.ಸುಧಾಕರ್‌ ಸುದ್ದಿಗಾರರಿಗೆ ತಿಳಿಸಿದರು.

ಹೆಚ್ಚು ಔಷಧವನ್ನು ಪೊರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಔಷಧಿ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಔಷಧಿ ಕೊರತೆಯ ಕಾರಣ, ಯಾರಿಗೆಲ್ಲ ಅಗತ್ಯವಿದೆಯೋ  ಅವರಿಗೆ ಮಾತ್ರ ಡೋಸ್‌ ವಿತರಣೆ ಮಾಡಲಾಗುತ್ತಿದೆ. ವಿಜಯಪುರ
ದಲ್ಲಿ 30 ಜನರಿಗೆ ಶಿಲೀಂಧ್ರ ಸೋಂಕು ತಗುಲಿದೆ ಎಂದು ಅವರು ಹೇಳಿದರು.

ಗೊಂದಲ ಕಾರಣ: ಕೋವಿಡ್‌ ನಿರ್ವಹಣೆಯ ವಿವಿಧ ಜವಾಬ್ದಾರಿಗಳನ್ನು ಐವರು ಸಚಿವರಿಗೆ ವಹಿಸಲಾಗಿದೆ. ಆದರೆ, ಜಗದೀಶ ಶೆಟ್ಟರ್‌ ಬಿಟ್ಟು ಉಳಿದವರೆಲ್ಲ, ಪ್ರತಿ ದಿನ ಹೇಳಿಕೆ ನೀಡುತ್ತಾರೆ. ಇದರಲ್ಲಿ ಸಾಕಷ್ಟು ಗೊಂದಲಗಳಿರುತ್ತವೆ. ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಅರವಿಂದ ಲಿಂಬಾವಳಿ ಸ್ವತಂತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು