ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಲ್ಯಾಣ ಕರ್ನಾಟಕಕ್ಕೆ ವರ್ಷ: ಹೆಸರು ಬದಲಾದರೂ ಕಳಚದ ‘ಸಂಕೋಲೆ’

Last Updated 15 ಸೆಪ್ಟೆಂಬರ್ 2020, 2:34 IST
ಅಕ್ಷರ ಗಾತ್ರ

‘ಹೈದರಾಬಾದ್‌ ಕರ್ನಾಟಕ’ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ರಾಜ್ಯ ಸರ್ಕಾರ ಮರು ನಾಮಕರಣ ಮಾಡಿ ಸೆ.17ಕ್ಕೆ ಒಂದು ವರ್ಷ ತುಂಬುತ್ತಿದೆ. ‘ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ’ವನ್ನು ‘ಕಲ್ಯಾಣ ಕರ್ನಾಟಕ ಉತ್ಸವ’ವನ್ನಾಗಿ ಆಚರಿಸಲಾಗುತ್ತಿದೆ. ಈ ಉತ್ಸವದ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ‘ಈ ಭಾಗದ ಜನ ಸಂಕೋಲೆಯಿಂದ ಮುಕ್ತವಾದರೇ?, ಅಭಿವೃದ್ಧಿಯ ಸುಳಿಗಾಳಿ ಬೀಸುತ್ತಿದೆಯೇ ಎಂದು ಪ್ರಶ್ನಿಸಿದರೆಸ್ಪಷ್ಟ ಉತ್ತರವೇ ಸಿಗುತ್ತಿಲ್ಲ!

ಬೀದರ್‌ ಮತ್ತು ಅವಿಭಜಿತ ಕಲಬುರ್ಗಿ, ರಾಯಚೂರು ಜಿಲ್ಲೆಗಳು ಹಿಂದೆ ಹೈದರಾಬಾದ್‌ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. 1947ರ ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಆದರೆ, ಹೈದರಾಬಾದ್‌ ನಿಜಾಮ ತನ್ನ ಸಂಸ್ಥಾನವನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲು ಒಪ್ಪದ ಕಾರಣ ಹೈದರಾಬಾದ್‌ ಕರ್ನಾಟಕದ ಈ ಭಾಗಕ್ಕೆ ಆಗ ಸ್ವಾತಂತ್ರ್ಯ ದೊರೆಯಲೇ ಇಲ್ಲ!

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಬಿಗಿ ನಿಲುವಿನಿಂದಾಗಿ ಹೈದರಾಬಾದ್‌ ನಿಜಾಮ ಸಂಸ್ಥಾನವು 1948ರ ಸೆಪ್ಟೆಂಬರ್ 17 ರಂದು ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನವಾಯಿತು. ಹೀಗಾಗಿ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಸೆ.17ರಂದು. ಈ ಕಾರಣಕ್ಕಾಗಿಯೇ ಪ್ರತಿ ವರ್ಷವೂ ಸೆಪ್ಟೆಂಬರ್‌ 17ನ್ನು ಈ ಜಿಲ್ಲೆಗಳಲ್ಲಿ ‘ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ’ ಎಂದು ಆಚರಿಸಲಾಗುತ್ತಿತ್ತು. ಹಿಂದೆ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿದ್ದ ಬಳ್ಳಾರಿ ಜಿಲ್ಲೆಯನ್ನೂ ಸೇರಿಸಿ ಕಲಬುರ್ಗಿ ಕಂದಾಯ ವಿಭಾಗಕ್ಕೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಎಂದೇ ಕರೆಯಲಾಗುತ್ತಿತ್ತು.

ಇದು ಕಲ್ಯಾಣ ನಾಡು. ಶರಣರ ಬೀಡು. ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದೇ ನಾಮಕರಣ ಮಾಡಬೇಕು ಎಂಬ ಬೇಡಿಕೆ ಆಗಿನಿಂದಲೂ ಇತ್ತು. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆಯೇ 2019ರಲ್ಲಿ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ಎಲ್ಲೆಲ್ಲಿ ಹೈದರಾಬಾದ್‌ ಕರ್ನಾಟಕ ಎಂದು ಕರೆಯಲಾಗುತ್ತಿದೆಯೋ ಅಲ್ಲಿ ‘ಕಲ್ಯಾಣ ಕರ್ನಾಟಕ’ ಎಂದೇ ಕರೆಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಸರೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಬದಲಾಯಿತು.

ವಿಶೇಷ ಸ್ಥಾನಮಾನ

ಸಂವಿಧಾನದ 371 ಕಲಂಗೆ ತಿದ್ದುಪಡಿ ತಂದು, ತೀರಾ ಹಿಂದುಳಿದಿರುವ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ, ಹೋರಾಟಗಳೂ ಸಾಕಷ್ಟು ನಡೆದಿದ್ದವು. 2013ರಲ್ಲಿ ಕೇಂದ್ರ ಸರ್ಕಾರಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಕಲ್ಪಿಸಿದೆ. ವಿಶೇಷ ಸ್ಥಾನಮಾನಕ್ಕೀಗ ಏಳು ವರ್ಷಗಳ ಪ್ರಾಯ.

ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ಕಾಯ್ದೆ ರೂಪಿಸಿದೆ. ಅದರಲ್ಲಿ ಬಹುಮುಖ್ಯ ಕೊಡುಗೆ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ. ಶೈಕ್ಷಣಿಕ ಮೀಸಲಾತಿಯು ಈ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದ ಹೆಬ್ಬಾಗಿಲನ್ನೇ ತೆರೆದಿದೆ. ಉದ್ಯೋಗಾವಕಾಶ ಸಿಗುತ್ತಿದ್ದರೂ ಕೆಲ ‘ಅಡೆ–ತಡೆ’ ನಿವಾರಣೆಯಾಗಿಲ್ಲ ಎಂಬ ಕೊರಗೂ ಇದೆ. ಈ ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಅನುಮೋದನೆ ಬೇಕಿಲ್ಲ ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರ ನಿಯಮ ರೂಪಿಸಿತ್ತು. ಆದರೆ, ಈ ಸರ್ಕಾರ ಕೊರೊನಾ ಆರ್ಥಿಕ ಸಂಕಷ್ಟದ ನೆಪವೊಡ್ಡಿ ನೇಮಕಾತಿಗೂ ತಡೆಯೊಡ್ಡಿದೆ.

ಕೆಕೆಆರ್‌ಡಿಬಿ ಮತ್ತು ಮಾನವ ಸಂಪನ್ಮೂಲ ಸಂಘ

‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಗೆ (ಕೆಕೆಆರ್‌ಡಿಬಿ) ರಾಜ್ಯ ಸರ್ಕಾರ ಪ್ರತಿ ವರ್ಷ ₹ 1,500 ಕೋಟಿ ವಿಶೇಷ ಅನುದಾನ ಮೀಸಲಿಡುತ್ತಿದೆ. ಈ ವರ್ಷವೂ ಅಷ್ಟೇ ಅನುದಾನ ಘೋಷಿಸಿದೆ.ಅದರ ಜತೆಗೆ ಈ ಭಾಗದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ರಾಜ್ಯ ಸರ್ಕಾರ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಂಸ್ಕೃತಿಕ ಸಂಘ’ವನ್ನು ಸ್ಥಾಪಿಸಿ ₹500 ಕೋಟಿ ಅನುದಾನ ಘೋಷಿಸಿದೆ. ರಾಜ್ಯಸಭೆಯ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಅಧ್ಯಕ್ಷರಾಗಿರುವ ಈ ಸಂಘಕ್ಕೆ ಆಡಳಿತ ಮಂಡಳಿಯ ನೇಮಕವೂ ಆಗಿದೆ. ಸಂಘದ ಕಚೇರಿ ಆರಂಭ ಬಿಟ್ಟರೆ ಅನುದಾನದ ಕೊರತೆಯಿಂದಾಗಿ ಸಂಘದ ಚಟುವಟಿಕೆ ಇನ್ನೂ ಆರಂಭಗೊಡಿಲ್ಲ.

ಇನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈಚೆಗಷ್ಟೇ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಕೊರೊನಾ ಸಂಕಷ್ಟದ ಕಾರಣ ಈ ಮಂಡಳಿಗೆ ಅಗತ್ಯದಷ್ಟು ಅನುದಾನ ಬಿಡುಗಡೆಯಾಗಿಲ್ಲ. ಕೆಕೆಆರ್‌ಡಿಬಿಯ ಬಜೆಟ್ ಹಂಚಿಕೆಯನ್ನು ರಾಜ್ಯ ಸರ್ಕಾರ ₹500 ಕೋಟಿ ಇಳಿಸಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಕೆಕೆಆರ್‌ಡಿಬಿಗೆ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ಆರಂಭಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಅರಂಭಿಸುವ ಹಾಗೂ 371 (ಜೆ) ಕೋಶವನ್ನು ಬೆಂಗಳೂರಿನಿಂದ ಕಲಬುರ್ಗಿಗೆ ಸ್ಥಳಾಂತರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿ ವರ್ಷವಾದರೂ ಅನುಷ್ಠಾನಗೊಂಡಿಲ್ಲ.

ಮಾನವ ಸಂಪನ್ಮೂಲ ಇದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ. ಅಪೌಷ್ಟಿಕತೆ, ರಕ್ತಹೀನತೆ, ಶಿಶು–ತಾಯಿ ಮರಣದಂತಹ ಪಿಡುಗು ನಿವಾರಣೆಯಾಗಿಲ್ಲ. ಜನ ಗುಳೆ ಹೋಗುವುದು ತಪ್ಪುತ್ತಿಲ್ಲ.

ಈ ಇಲ್ಲಗಳ ಮಧ್ಯೆಯೂ ಬೀದರ್‌ ಮತ್ತು ಕಲಬುರ್ಗಿಯಿಂದ ವಿಮಾನಯಾನ ಶುರುವಾಗಿದೆ. ರಸ್ತೆ ಸಂಪರ್ಕ ಜಾಲ ಸುಧಾರಣೆಯಾಗುತ್ತಿದೆ. ಹಾಸ್ಟೆಲ್‌ಗಳು, ಆಸ್ಪತ್ರೆ–ಶಾಲೆಗಳ ಕಟ್ಟಡಗಳು ನಿರ್ಮಾಣವಾಗುತ್ತಿವೆ.

ಆದರೂ, ‘ಸಮಗ್ರ ಅಭಿವೃದ್ಧಿಯ ಮೂಲಕ ಸಂಕೋಲೆ ಕಳಚುತ್ತೇವೆ’ ಎಂಬುದು ಇನ್ನಷ್ಟು ವೇಗವಾಗಿ ಕಾರ್ಯರೂಪಕ್ಕೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT