ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಡ್ಡಾಯ: ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಅತೃಪ್ತಿ

ಶಿಕ್ಷಣದಲ್ಲಿ ರಾಜಕೀಯ ಬೆರಕೆ ಏಕೆ?
Last Updated 12 ನವೆಂಬರ್ 2021, 3:54 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಕ್ರಮಕ್ಕೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ‘ಶಿಕ್ಷಣದಲ್ಲಿ ರಾಜಕೀಯವನ್ನು ಏಕೆ ಬೆರೆಸುತ್ತೀರಿ‘ ಎಂದು ಪ್ರಶ್ನಿಸಿದೆ.

ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶ ಪ್ರಶ್ನಿಸಿ, ‘ಸಂಸ್ಕೃತ ಭಾರತಿ ಟ್ರಸ್ಟ್’, ‘ಹಯಗ್ರೀವ ಟ್ರಸ್ಟ್’, ‘ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ ಫೌಂಡೇಷನ್’ ಹಾಗೂ ‘ಸಂಸ್ಕೃತ ಪ್ರಾಧ್ಯಾಪಕ ಸಂಘ’ಗಳು ಸಲ್ಲಿಸಿರುವಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಎಸ್‌. ನಾಗಾನಂದ ಅವರು, ‘ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಲ್ಲ. ವಿದ್ಯಾರ್ಥಿಗಳು ತಮಗೆ ಇಷ್ಟಬಂದ ಯಾವುದೇ ವಿಷಯ ಅಥವಾ ಕೋರ್ಸ್ ಅನ್ನು ಅಧ್ಯಯನ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ’ ಎಂದರು.

ಇದನ್ನು ಅಲ್ಲಗಳೆದ ಸರ್ಕಾರದ ಪರ ವಕೀಲರು ಕನ್ನಡ ಕಲಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ‘ಹತ್ತನೇ ತರಗತಿ ನಂತರ ಕನ್ನಡ ವಿಷಯವನ್ನು ವ್ಯಾಸಂಗ ಮಾಡದೇ ಇರುವವರಿಗೆ ಕನ್ನಡ ಕಲಿಯಲು ಇದರಿಂದ ಅನುಕೂಲವಾಗಿದೆ. ಈ ವಿಧಾನ ಯಶಸ್ವಿಯೂ ಆಗಿದೆ.ಕಳೆದ ಹತ್ತು ವರ್ಷಗಳಿಂದ ಎಂಜಿನಿಯರ್ ವ್ಯಾಸಂಗದಲ್ಲಿ ಕನ್ನಡ ಕಲಿಯುವ ವಿಧಾನ ಪರಿಚಯಿಸಲಾಗಿದೆ. ಅಂತೆಯೇ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಸರ್ಕಾರಕ್ಕೆ ಕನ್ನಡ ಕಡ್ಡಾಯಗೊಳಿಸುವ ಅವಕಾಶವಿದೆ’ ಎಂದರು.

‘ರಾಜ್ಯದಲ್ಲಿ ನೆಲೆಸುವವರಿಗೆ ಸ್ಥಳೀಯರೊಂದಿಗೆ ಚರ್ಚಿಸಲು ಅನುಕೂಲವಾಗುವಷ್ಟು ಮಾತ್ರವೇ ಕನ್ನಡ ಕಲಿಸಲಾಗುತ್ತದೆ.ಮೊದಲನೇ ತರಗತಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪಠ್ಯವನ್ನೇ ಇಲ್ಲಿ ಬೋಧಿಸಲಾಗುತ್ತದೆ. ಇದು ಕೇವಲ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವ ವಿಧಾನ.ಅದೂ ಆರು ತಿಂಗಳ ಕಾಲ ಮಾತ್ರ. ಅಷ್ಟಕ್ಕೂ, ಈಗಾಗಲೇ ಪಠ್ಯ ಪುಸ್ತಕ ಪೂರೈಸಲಾಗಿದೆ’ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ‘ಉನ್ನತ ಶಿಕ್ಷಣಕ್ಕಾಗಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂಬ ಅಂಶವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲಿದೆ, ಶಿಕ್ಷಣದಲ್ಲಿ ಏಕೆ ರಾಜಕೀಯ ಬೆರೆಸುತ್ತೀರಿ’ ಎಂದು ಪ್ರಶ್ನಿಸಿತು.

‘ನಮ್ಮ ತಿಳಿವಳಿಕೆ ಪ್ರಕಾರ ಕನ್ನಡ ಕಲಿಕೆಗೆ ಪ್ರೋತ್ಸಾಹಿಸಬಹುದೇ ಹೊರತು ಕಡ್ಡಾಯ ಮಾಡುವಂತಿಲ್ಲ ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿ. ಹಾಗಾದರೆ, ಕನ್ನಡ ಭಾಷೆ ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಡ್ಡಾಯ ಮಾಡಿರುವ ಕುರಿತು ಮತ್ತು ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಲು ಅವಕಾಶ ಎಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಿ’ ಎಂದು ಸೂಚಿಸಿ, ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿತು.

ಕೋರಿಕೆ ಏನು:‘ರಾಜ್ಯದಲ್ಲಿ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ 2021ರ ಆಗಸ್ಟ್ 7ರಂದು ಹೊರಡಿಸಿರುವ ಆದೇಶ, ಭಾಷೆ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಆದ್ದರಿಂದ, ಈ ಆದೇಶ ರದ್ದುಪಡಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT