ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ : 16 ಉಪಸಮಿತಿಗಳ ಪಟ್ಟಿ ಬಿಡುಗಡೆ

Last Updated 27 ನವೆಂಬರ್ 2022, 14:10 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಮನ್ವಯದಲ್ಲಿ ಹಾವೇರಿಯಲ್ಲಿ ಜನವರಿ 6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾಲಾವಧಿ ಕಡಿಮೆಯಿದ್ದು, ಕೆಲಸದ ವೇಗವನ್ನು ಅಧಿಕಾರಿಗಳು ಹೆಚ್ಚಿಸಬೇಕು. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸಭೆ ನಡೆಸಿ, ಸಮ್ಮೇಳನದ 16 ಉಪಸಮಿತಿಗಳ ಪಟ್ಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮ್ಮೇಳನ ಮುಗಿವವರೆಗೂ ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳದೇ ತಮ್ಮ ತಮ್ಮ ಸಮಿತಿಯ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಸರ್ಕಾರದಿಂದ ವಸತಿ, ಊಟ, ಸಾರಿಗೆ, ಪೆಂಡಾಲ್‌ ಸೇರಿದಂತೆ ಅಗತ್ಯ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮೆರವಣಿಗೆ, ಕನ್ನಡ ರಥ, ಗೋಷ್ಠಿಗಳು, ಸಾಹಿತಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಎರಡು ವಿಭಾಗಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದೆ ಅವರ ಜವಾಬ್ದಾರಿಯನ್ನು ಅವರೇ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

128 ಎಕರೆ ಜಾಗ ಗುರುತು:

ಸಾಹಿತ್ಯ ಸಮ್ಮೇಳನಕ್ಕೆ ಈ ಹಿಂದೆ ಗುರುತಿಸಲಾದ ಜಾಗದಲ್ಲಿ ತಕರಾರು ಇದ್ದ ಹಿನ್ನೆಲೆಯಲ್ಲಿ ಸ್ಥಳ ಬದಲಿಸಲಾಗಿದೆ. ಹಳೇ ಪಿಬಿ ರಸ್ತೆಗೆ ಹೊಂದಿಕೊಂಡಂತೆ ಹೆದ್ದಾರಿ ಸಮೀಪ ಇರುವ ಅಜ್ಜಯ್ಯನ ಗುಡಿ ಎದುರಿನ ವಿಶಾಲವಾದ 128 ಎಕರೆ ಜಾಗದಲ್ಲಿ ಸಮ್ಮೇಳನ ನಡೆಸಲು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.

30ರಿಂದ 40 ಸಾವಿರ ಆಸನ ಸಾಮರ್ಥ್ಯದ ಮುಖ್ಯ ವೇದಿಕೆ ಹಾಗೂ 3 ಸಾವಿರ ಆಸನ ಸಾಮರ್ಥ್ಯದ ತಲಾ ಎರಡು ಸಮನಾಂತರ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ವಸ್ತುಪ್ರದರ್ಶನ ಮಳಿಗೆ, ಆಹಾರ ಮಳಿಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಒಂದೇ ಆವರಣದಲ್ಲಿ ವ್ಯವಸ್ಥೆ ಮಾಡಲಾಗವುದು ಎಂದರು.

ಡಿ.1ರಿಂದ ರಥ ಸಂಚಾರ:

ಸಮ್ಮೇಳನದ ಪ್ರಚಾರ ಅಂಗವಾಗಿ ವಿಶೇಷವಾಗಿ ತಯಾರಿಸಲಾದ ‘ಕನ್ನಡ ರಥ’ ಸಂಚಾರ ಡಿ.1ರಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭುವನಗಿರಿ ಭುವನೇಶ್ವರಿ ದೇವಸ್ಥಾನದಿಂದ ಆರಂಭವಾಗಿ ರಾಜ್ಯದ 31 ಜಿಲ್ಲೆಗಳಲ್ಲೂ ಸಂಚರಿಸಲಿದೆ. ಜ.1ರಂದು ಹಾವೇರಿಗೆ ಆಗಮಿಸಲಿದೆ. ಜಿಲ್ಲೆಯಲ್ಲಿ ಸಂಚಿರಿಸಿ ಸಮ್ಮೇಳನ ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಈಗಾಗಲೇ ಸಂಚಾರ ಮಾರ್ಗ ರಚಿಸಲಾಗಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರಥವನ್ನು ಭವ್ಯವಾಗಿ ಸ್ವಾಗತಿಸಲು ಸೂಚಿಸಲಾಗಿದೆ ಎಂದರು.

86 ಸಾಧಕರಿಗೆ ಸನ್ಮಾನ:

ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ಮೈಸೂರು ದಸರಾಕ್ಕಿಂತ ಮಿಗಿಲಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಎಲ್ಲ ಜಿಲ್ಲೆಯಿಂದ ವಿವಿಧ ಕಲಾತಂಡಗಳು, ಸ್ಥಬ್ಧಚಿತ್ರಗಳನ್ನು ಆಹ್ವಾನಿಸಲಾಗಿದೆ. ಮೌಲಿಕವಾದ ಗೋಷ್ಠಿಯನ್ನು ಆಯೋಜಿಸಲಾಗುವುದು, ವಿಶ್ವದ ಎಲ್ಲೆಡೆಯಿಂದ 86 ಕನ್ನಡ ಸಾಧಕರನ್ನು ಆಹ್ವಾನಿಸಿ ಸನ್ಮಾನಿಸಲಾಗುವುದು ಎಂದರು.

ಸ್ಥಳ ಪರಿಶೀಲನೆ:

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿಯ ಸದಸ್ಯರೊಂದಿಗೆ ಸಮ್ಮೇಳನದ ಉದ್ದೇಶಿತ ಜಾಗಕ್ಕೆ ಭೇಟಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು.

ಶಾಸಕ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನ ಪರಿಷತ್‍ ಸದಸ್ಯರಾದ ಆರ್.ಶಂಕರ್, ಎಸ್.ವಿ. ಸಂಕನೂರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಂಸದರಾದ ಮಂಜುನಾಥ್ ಕುನ್ನೂರ, ಐ.ಜಿ.ಸನದಿ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನವರ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಜಾನಪದ ವಿವಿ ಕುಲಪತಿ ಡಾ.ಟಿ.ಭಾಸ್ಕರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT