ಮಂಗಳವಾರ, ಡಿಸೆಂಬರ್ 7, 2021
27 °C

ಕಸಾಪ: ಹಸ್ತಕ್ಷೇಪಕ್ಕೆ ಬಿಜೆಪಿಯಲ್ಲೇ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಯೊಬ್ಬರನ್ನು ಗೆಲ್ಲಿಸಲು ಸಕ್ರಿಯವಾಗಿ ಸಂಘಟನೆಗಳನ್ನು ತೊಡಗಿಸಿಕೊಂಡ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಒಂದು ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಮಹೇಶ್‌ ಜೋಶಿಗೆ ಪರ ಕೆಲಸ ಮಾಡದ ಕಾರಣ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ಜಿಲ್ಲಾ ಘಟಕದ ಕಾರ್ಯಕಾರಿಣಿ ಸದಸ್ಯ ಎಂ.ಮಹೇಂದ್ರಗೌಡ ಅವರನ್ನು ವಜಾ ಮಾಡಿರುವುದು ಪಕ್ಷದಲ್ಲಿ ಚರ್ಚೆ ಹುಟ್ಟುಹಾಕಿದೆ.

ಮೂಲಗಳ ಪ್ರಕಾರ, ಮಹೇಶ್‌ ಜೋಶಿ ಅವರು ಆರ್‌ಎಸ್‌ಎಸ್‌ನ ಹಿರಿಯ ನಾಯಕರೊಬ್ಬರನ್ನು ಸಂಪರ್ಕಿಸಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವೊಲಿಸಿದ್ದರು. ಸಂಘದ ಆ ನಾಯಕರ ಮೂಲಕವೇ ಬಿಜೆಪಿಯ ವರಿಷ್ಠರ ಮೇಲೂ ಒತ್ತಡ ಹೇರಿ ತಮ್ಮ ಪರವಾಗಿ ಇಡೀ ಪಕ್ಷವೇ ನಿಲ್ಲುವಂತೆ ಮಾಡಿದ್ದರು. ಹೀಗಾಗಿ ಸಂಘ ಮತ್ತು ಬಿಜೆಪಿ ತಮ್ಮೆಲ್ಲ ಶಕ್ತಿಯನ್ನು ಜೋಶಿಗೆ ಧಾರೆ ಎರೆದು ಗೆಲ್ಲಿಸಿವೆ ಎಂದು ಹೇಳಲಾಗುತ್ತಿದೆ.

ಸಾಹಿತ್ಯ ಪರಿಷತ್‌ ಚುನಾವಣೆಗೂ ಮೊದಲೇ ಬಿಜೆಪಿಯ ಎಲ್ಲ ಮಂಡಲ ಗಳಲ್ಲೂ ಜೋಶಿ ಪರವಾಗಿ ಪ್ರಚಾರ ಮಾಡಲು ಸೂಚನೆ ಹೋಗಿತ್ತು. ಚುನಾವಣೆಯಲ್ಲಿ ಮತದಾರರನ್ನು ಮತ ಗಟ್ಟೆಗೆ ಕರೆತರುವ ಕಾರ್ಯತಂತ್ರವನ್ನೂ ರೂಪಿಸಲಾಗಿತ್ತು. ಇದರಿಂದಾಗಿ ಸಾಕಷ್ಟು ಜಿಲ್ಲೆಗಳಲ್ಲಿ ಮತದಾನದ ಪ್ರಮಾಣ ಶೇ 70 ರಷ್ಟು ಆಗಿತ್ತು. ಮತದಾನದ ದಿನ ಬಿಜೆಪಿ ಕಾರ್ಯಕರ್ತರು ಸಾರ್ವತ್ರಿಕ ಚುನಾವಣೆಗಳಲ್ಲಿ ಕೆಲಸ ಮಾಡುವಂತೆ ಮತದಾರರ ಪಟ್ಟಿಯನ್ನು ತಯಾರು ಮಾಡಿಕೊಂಡು, ಪ್ರತಿಯೊಬ್ಬ ಮತದಾರನ ಮನೆಗೆ ಹೋಗಿ ಅವರನ್ನು ಮತಗಟ್ಟೆಗೆ ಕರೆ ತರುವ ಕೆಲಸ ಮಾಡಿದರು ಎಂದು ಮೂಲಗಳು ಹೇಳಿವೆ.

ಬೆಂಗಳೂರು ನಗರದಲ್ಲಿ ಬಹಿರಂಗವಾಗಿ ಕೆಲಸ ಮಾಡಿದರೆ ಮಾಧ್ಯಮಗಳಿಂದ ಟೀಕೆಗೆ ಒಳಗಾಗ ಬಹುದು ಎಂಬ ಕಾರಣಕ್ಕೆ ನಗರದಲ್ಲಿ ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ 28 ದಾಟಿರಲಿಲ್ಲ. ಸಾಹಿತ್ಯ ಪರಿಷತ್‌ನಂತಹ ಚುನಾವಣೆಯಲ್ಲಿ ಬಿಜೆಪಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಸರಿಯಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಮಹೇಶ್‌ ಜೋಶಿ ಅವರು ‘ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್‌ ಸಮ್ಮುಖದಲ್ಲಿಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತೇನೆ’ ಎಂದು ಹೇಳಿಕೊಂಡಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು