ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸಾಪ ಚುನಾವಣೆ: ರಾಜಕಾರಣಿಗಳ ಪ್ರಚಾರಕ್ಕೆ ಆಕ್ಷೇಪ’

Last Updated 23 ಅಕ್ಟೋಬರ್ 2021, 16:50 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರ ಬಿಜೆಪಿ ಶಾಸಕರು ಹಾಗೂ ಆರೆಸ್ಸೆಸ್‌ ಪ್ರಮುಖರು ಪ್ರಚಾರ ಮಾಡುತ್ತಿರುವುದು ಪರಿಷತ್ತಿನ ಪ್ರಜಾಸತ್ತಾತ್ಮಕ ಸ್ವಾಯತ್ತತೆಗೆ ಧಕ್ಕೆ ತರುವ ವರ್ತನೆ’ ಎಂದು ಸಾಹಿತಿಗಳು ಹಾಗೂ ಚಿಂತಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಸ್.ಜಿ. ಸಿದ್ಧರಾಮಯ್ಯ, ಕೆ. ಮರುಳಸಿದ್ಧಪ್ಪ, ಬಂಜಗೆರೆ ಜಯಪ್ರಕಾಶ್, ಮಲ್ಲಿಕಾ ಘಂಟಿ ಹಾಗೂ ರುದ್ರಪ್ಪ ಹನಗವಾಡಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರ ಹೇಳಿಕೆ ಹಾಗೂ ಆರ್.ಎಸ್.ಎಸ್.ನ ಕೆಲವು ಮುಖಂಡರ ಆಕ್ರಮಣಕಾರಿ ವರ್ತನೆ ಪರಿಷತ್ತಿನ ಪ್ರಜಾಸತ್ತಾತ್ಮಕ ಸ್ವಾಯತ್ತತೆಗೆ ಧಕ್ಕೆ ತರಲಿವೆ. ಆದ್ದರಿಂದ ಅವರುಗಳು ತಮ್ಮ ನಿಲುವುಗಳಿಗೆ ವಿಷಾದ ಸೂಚಿಸಿ, ಅಭಿಪ್ರಾಯವನ್ನು ಬದಲಿಸಿಕೊಳ್ಳಲಿ. ಅಭ್ಯರ್ಥಿ ಮಹೇಶ್ ಜೋಶಿ ಅವರು ಈ ಬಗ್ಗೆ ಹೊಣೆಯರಿತು, ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆ ಬಾರದಂತೆ ಜವಾಬ್ದಾರಿ ಮೆರೆಯಲಿ’ ಎಂದು ಹೇಳಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾಂಸ್ಕೃತಿಕ ಸಾಕ್ಷಿಪ್ರಜ್ಞೆಯಂತಿರಬೇಕಾದ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ.ಇದುವರೆಗಿನ ಅಧ್ಯಕ್ಷರ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ನೇರವಾಗಿ ಅಥವಾ ಪರೋಕ್ಷವಾಗಿ ಪ್ರವೇಶಿಸಿರಲಿಲ್ಲ.ಎಲ್ಲ ಪಕ್ಷಗಳೂ ಪರಿಷತ್ತಿನ ಸಾಂಸ್ಕೃತಿಕ ವಾತಾವರಣಕ್ಕೆ ರಾಜಕೀಯ ಸುಳಿಯದಂತೆ ಎಚ್ಚರವಹಿಸಿದ್ದವು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಶಾಸಕರು, ಆರ್‌.ಎಸ್‌.ಎಸ್‌.ನ ಪ್ರಮುಖರು ನೇರವಾಗಿ ವ್ಯಕ್ತಿಯೊಬ್ಬರಿಗೆ ಬೆಂಬಲ ಘೋಷಿಸಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ವೈಯಕ್ತಿಕವಾಗಿ ಯಾವುದೇ ರಾಜಕೀಯ ಸಿದ್ಧಾಂತದ ಜೊತೆಗೆ ಗುರುತಿಸಿಕೊಳ್ಳುವುದು ಅವರ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ, ಸ್ವಾಯತ್ತ ಸಂಸ್ಥೆಯನ್ನು ರಾಜಕೀಯ ಪಕ್ಷಕ್ಕೆ ಅಡವಿಟ್ಟಂತೆ ರಾಜಕಾರಣ ನಡೆಸುವುದು ಖಂಡನೀಯ ನಡವಳಿಕೆ. ಪಕ್ಷಗಳೂ ಈ ಬಗ್ಗೆ ಆರೋಗ್ಯಕರ ನಿಲುವು ತಾಳಿದಂತೆ ಅಂತರ ಕಾಯ್ದುಕೊಳ್ಳಬೇಕಾದ ಹೊಣೆಗಾರಿಕೆಯನ್ನು ತೋರುವ ಅವಶ್ಯಕತೆ ಇದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT