ಗುರುವಾರ , ಜುಲೈ 7, 2022
23 °C
ಸಿ.ಎಂ ಸಮರ್ಥನೆ l 6 ಸಾವಿರ ಎಕರೆ ಪ್ರದೇಶದಲ್ಲಿ ಪಾಳೇಕರ್‌ ನೈಸರ್ಗಿಕ ಕೃಷಿ ಪದ್ಧತಿ ಜಾರಿ

ಬೇರೆ ರಾಜ್ಯಗಳಿಗಿಂತಲೂ ಆರ್ಥಿಕ ಸ್ಥಿತಿ ಉತ್ತಮ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ನಂತರ ರಾಜ್ಯದ ಆರ್ಥಿಕ ಸ್ಥಿತಿ ಚೇತರಿಕೆ ಕಾಣುತ್ತಿದ್ದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ವ ಕೊರತೆ ಕಡಿಮೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಮರ್ಥಿಸಿಕೊಂಡರು.

ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ‘2022-23ನೇ ಸಾಲಿನಲ್ಲಿ ರಾಜಸ್ವ ಕೊರತೆ ₹14,699 ಕೋಟಿ ಇದೆ. ಆಂಧ್ರಪ್ರದೇಶದಲ್ಲಿ ₹ 17 ಸಾವಿರ ಕೋಟಿ, ಕೇರಳದಲ್ಲಿ ₹22,968 ಕೋಟಿ, ಮಹಾ
ರಾಷ್ಟ್ರದಲ್ಲಿ ₹24 ಸಾವಿರ ಕೋಟಿ, ರಾಜಸ್ಥಾನದಲ್ಲಿ ₹23ಸಾವಿರ ಕೋಟಿ ರಾಜಸ್ವ ಕೊರತೆ ಇದೆ’ ಎಂದರು.

‘ರಾಜ್ಯದ ಆರ್ಥಿಕ ಇತಿಹಾಸದಲ್ಲಿ ಹಲವು ಬಾರಿ ಸಂಕಷ್ಟ ಎದುರಿಸಿದ್ದರೂ ಬಜೆಟ್‌ ಗಾತ್ರ ಕುಗ್ಗಿಸಿರಲಿಲ್ಲ. ಈ ಬಾರಿಯೂ ಇದೇ ನೀತಿ ಅನುಸರಿಸಲಾಗಿದೆ. ಸಂಪನ್ಮೂಲಗಳ ಸಂಗ್ರಹಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಕಳೆದ ವರ್ಷ ನವೆಂಬರ್‌ನಿಂದ ಆರ್ಥಿಕತೆ ಸುಧಾರಣೆಯಾಗಿದೆ. ಕೋವಿಡ್‌ ಮೂರನೇ ಅಲೆಯೂ ಪರಿಣಾಮ ಬೀರಲಿಲ್ಲ. ಮೋಟಾರ್‌ ವಾಹನ ತೆರಿಗೆ ಹೊರತುಪಡಿಸಿ ಇತರ ತೆರಿಗೆಗಳ ಸಂಗ್ರಹದಲ್ಲಿ ಹೆಚ್ಚಳವಾಗಿದೆ’ ಎಂದು ತಿಳಿಸಿದರು.

‘ಸದ್ಯ ನಿಷ್ಕ್ರಿಯವಾಗಿರುವ ಕರ್ನಾಟಕ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಸಂಸ್ಥೆಯನ್ನು ಕ್ರಿಯಾಶೀಲಗೊಳಿಸಲು ₹50 ಕೋಟಿ ನೀಡಲಾಗುವುದು. ಈ ಸಂಸ್ಥೆ ಮೂಲಕ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗಲಿದೆ. ಕೃಷಿ ತಜ್ಞ ಸುಭಾಷ್‌ ಪಾಳೇಕರ್‌ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಆರು ಸಾವಿರ ಎಕರೆ ಪ್ರದೇಶದಲ್ಲಿ ಕೈಗೊಳ್ಳಲಾಗುವುದು. ಫಲಿತಾಂಶ ಆಧರಿಸಿ ರೈತರಿಗೆ ಉತ್ತೇಜನ ನೀಡಲಾಗುವುದು’ ಎಂದರು. 

’30 ಸಾವಿರ ಸ್ವಸಹಾಯ ಸಂಘಗಳಿಗಾಗಿ ಬ್ಯಾಂಕ್‌ ಸ್ಥಾಪಿಸಲು ₹500 ಕೋಟಿ ಒದಗಿಸಲಾಗುವುದು. ಇದರಿಂದ ನಾಲ್ಕು ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ’ ಎಂದರು.

ಮುಖ್ಯಮಂತ್ರಿ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು, ‘ಇದು ನಿರಾಶಾದಾಯಕ ಬಜೆಟ್‌. ಜನ ವಿರೋಧಿ’ ಎಂದು ಟೀಕಿಸಿ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.

ಕಾಂಗ್ರೆಸ್‌ ಸದಸ್ಯರ ನಡೆಗೆ ಕಟುವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ವಿರೋಧ ಪಕ್ಷದವರಿಗೆ ಬಜೆಟ್‌ ತಿರುಳು ಅರ್ಥವಾಗಿಲ್ಲ. ಕಾಂಗ್ರೆಸ್‌ನಿಂದ ಆರ್ಥಿಕತೆಯ ಮತ್ತು ನೈತಿಕತೆಯ ಪಾಠ ಕಲಿಯಬೇಕಾಗಿಲ್ಲ. ಪ್ರಗತಿದಾಯಕ ಬಜೆಟ್‌ ಇದಾಗಿದ್ದು, ಆರ್ಥಿಕ ಶಿಸ್ತು ತರಲು ಯತ್ನಿಸಲಾಗಿದೆ’ ಎಂದು ಪ್ರತಿಪಾದಿಸಿದರು.

‘ಯಾವುದೇ ಆಸ್ತಿ ಮಾರಾಟ ಇಲ್ಲ’
‘ರಾಜ್ಯದಲ್ಲಿ ಯಾವುದೇ ಆಸ್ತಿ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ನಷ್ಟದಲ್ಲಿರುವ ಸಾರಿಗೆ ನಿಗಮಗಳು ಮತ್ತು ಎಸ್ಕಾಂಗಳಿಗೆ ಶಕ್ತಿ ತುಂಬಲು ಕ್ರಮಕೈಗೊಳ್ಳಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘2021–22ರಲ್ಲಿ 352 ಯೋಜನೆಗಳನ್ನು ಘೋಷಿಸಲಾಗಿತ್ತು. ಇವುಗಳಲ್ಲಿ 261 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. 81 ಯೋಜನೆಗಳು ವಿವಿಧ ಹಂತದಲ್ಲಿವೆ. ನಾಲ್ಕು ಯೋಜನೆಗಳನ್ನು ಮಾತ್ರ ಕೈಬಿಡಲಾಗಿದೆ’ ಎಂದು ತಿಳಿಸಿದರು.

*

ಹೆಣ್ಣು ಮಕ್ಕಳು ಉಳಿತಾಯಕ್ಕೆ ಆದ್ಯತೆ ನೀಡುತ್ತಾರೆ. ನಮ್ಮ ದೇಶದಲ್ಲಿನ ಸಾಸಿವೆ, ಜೀರಿಗೆ ಡಬ್ಬಿಗಳು ಅಮೆರಿಕದ ಬ್ಯಾಂಕ್‌ಗಳಿಗಿಂತ ಶಕ್ತಿಯುತವಾಗಿವೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು