ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರ ಸಮಿತಿಯಲ್ಲಿ ಬಿಎಸ್‌ವೈಗೆ ಆದ್ಯತೆ?

ಆಂತರಿಕ ಸಮೀಕ್ಷೆಯಲ್ಲಿ ಬಿಎಸ್‌ವೈ ಪರ ಒಲವು l ಪ್ರಚಾರಕ್ಕೆ ಬಳಸಿಕೊಳ್ಳಲು ಕೆಲ ನಾಯಕರ ಹಿಂದೇಟು
Last Updated 22 ಜನವರಿ 2023, 21:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಆಡಳಿತ ದಲ್ಲಿದ್ದರೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಚುನಾವಣಾ ಪ್ರಚಾರದಲ್ಲಿ ಅವರಿಗೆ ಪ್ರಾಧಾನ್ಯತೆ ನೀಡುವುದು ನಿಚ್ಚಳವಾಗಿದೆ.

ಯಡಿಯೂರಪ್ಪ ಅವರಿಗೆ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷತೆ ನೀಡುವ ಸಾಧ್ಯತೆಯೂ ಇದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿವೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ತಮಗೆ ಬಂದಿಲ್ಲ ಎನ್ನುತ್ತವೆ ಯಡಿಯೂರಪ್ಪ ಅವರ ಆಪ್ತ ವಲಯದ ಮೂಲಗಳು.

ಬಿಜೆಪಿ ನಡೆಸಿರುವ ಹಲವು ಆಂತರಿಕ ಸಮೀಕ್ಷೆಗಳಲ್ಲಿ ಯಡಿಯೂರಪ್ಪ ನಾಯಕತ್ವದ ಬಗ್ಗೆ ರಾಜ್ಯದ ಜನತೆಯಲ್ಲಿ ಇನ್ನೂ ವಿಶ್ವಾಸವಿರುವುದು ವ್ಯಕ್ತವಾಗಿದೆ ಮತ್ತು ಅವರನ್ನು ಮೂಲೆಗುಂಪು ಮಾಡಿದರೆ ಪಕ್ಷಕ್ಕೆ ಹಿನ್ನಡೆ ಆಗುವುದು ಖಚಿತ ಎಂಬ ಮಾಹಿತಿ ವರಿಷ್ಠರಿಗೆ ಸಿಕ್ಕಿದೆ. ಆದ ಬಳಿಕ ಅವರನ್ನು ಜತೆಗಿಟ್ಟುಕೊಂಡೇ ಮುನ್ನಡೆಯುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ. ಆದ್ದರಿಂದಲೇ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಆದರೆ, ಯಡಿಯೂರಪ್ಪ ಅವರನ್ನು ಮೂಲೆಗೆ ಸರಿಸುವ ಪ್ರಯತ್ನ ನಡೆಸುತ್ತಲೇ ಬಂದಿದ್ದ ಕೆಲ ನಾಯಕರು ಮತ್ತೆ ಅವರನ್ನು ಚುನಾವಣಾ ಪ್ರಚಾರದ ಕಾರ್ಯದಲ್ಲಿ ಮುಂಚೂಣಿಗೆ ತರುವ ಬಗ್ಗೆ ಒಲವು ಹೊಂದಿಲ್ಲ. ಹೀಗಾಗಿ ಎಲ್ಲ ಕಾರ್ಯಕ್ರಮ
ಗಳಿಗೂ ಅವರನ್ನು ಕರೆಯುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಈ ನಾಯಕರಿಂದಾಗಿಯೇ ಹಲವರಿಗೆ ಟಿಕೆಟ್‌ ಕೊಡದೇ ಪಕ್ಷ ಸ್ವಂತ ಬಲದಿಂದ ಬಹುಮತ ಸಾಧಿಸಲು ಸಾಧ್ಯ
ವಾಗಲಿಲ್ಲ. ಈಗಲೂ ಅದೇ ಧೋರಣೆ ಮುಂದುವರಿದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ನಿಲುವು ಬಿಎಸ್‌ವೈ ಆಪ್ತ ವಲಯದ್ದು.

ಯಡಿಯೂರಪ್ಪ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ಬಯಸಿದ್ದಾರೆ. ಅವರಿಗೆ ಟಿಕೆಟ್‌ ನೀಡಿದರೆ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುತ್ತಾರೆ ಎಂಬ ಆತಂಕ ಪಕ್ಷದಲ್ಲಿ ಕೆಲವರಿಗೆ ಇದೆ. ಹೀಗಾಗಿ, ಯಡಿಯೂರಪ್ಪ ಅವರನ್ನು ಮೂಲೆಗುಂಪಾಗಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಅಭಿಪ್ರಾಯ ಈ ವಲಯದ್ದು.

ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲೂ ಬೂತ್ ಚಟುವಟಿಕೆ

ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಬೂತ್‌ ಸಮಿತಿಗಳನ್ನು ರಚಿಸಲು ಬಿಜೆಪಿ ತೀರ್ಮಾನಿಸಿದೆ. ಈ ಚುನಾವಣೆಯಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಮುಸ್ಲಿಮರು ಹೆಚ್ಚು ಇರುವೆಡೆ ಬೂತ್‌ಗಳನ್ನು ತೆರೆಯಲು ಬಿಜೆಪಿಗೆ ಆ ಸಮುದಾಯದ ಕಾರ್ಯಕರ್ತರು ಸಿಗುತ್ತಿರಲಿಲ್ಲ. ಹೀಗಾಗಿ ಅಲ್ಲಿ ಬಿಜೆಪಿಗೆ ಮತಗಳು ಬೀಳುತ್ತಿರಲಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈಗ ಅಲ್ಲಿಯೂ ಒಂದಷ್ಟು ಮತಗಳನ್ನು ಪಡೆಯಲು ಚಿಂತನೆ ನಡೆಸಿರುವುದಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ರಾಜ್ಯದಲ್ಲಿ 58 ಸಾವಿರ ಮತಗಟ್ಟೆಗಳಿವೆ. ಈವರೆಗೆ 51 ಸಾವಿರ ಮತಗಟ್ಟೆಗಳ ವ್ಯಾಪ್ತಿಯಲ್ಲಿ ‘ಬೂತ್‌ ಸಮಿತಿ’ಗಳನ್ನು ರಚಿಸಲಾಗಿದೆ. ಪ್ರತಿ ಬೂತ್‌ ಸಮಿತಿಯಲ್ಲೂ ಎಸ್‌ಸಿ, ಎಸ್‌ಟಿ, ಒಬಿಸಿಯವರು ಸೇರಿ 12 ಸದಸ್ಯರಿರುತ್ತಾರೆ. 51 ಸಾವಿರ ಬೂತ್‌ ಸಮಿತಿಗಳಲ್ಲಿ 6 ಲಕ್ಷ ಸದಸ್ಯರಿದ್ದಾರೆ ಎಂದರು.

ಬೂತ್‌ ಸಮಿತಿಗಳ ಉಸ್ತುವಾರಿಗೆ ಸುಮಾರು 10 ಸಾವಿರ ಮಂದಿ ವಿಸ್ತಾರಕರನ್ನು ನೇಮಿಸಲಾಗಿದೆ. ಪ್ರತಿ ಮತದಾರರ ಪಟ್ಟಿಗೆ ಒಬ್ಬ ‘ಪೇಜ್‌ ಪ್ರಮುಖ್’ ನೇಮಿಸಲಾಗಿರುತ್ತದೆ. ಇವರು ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಗರಿಷ್ಠ ಮತದಾನ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ. ಮತದಾನದ ಪ್ರಮಾಣ ಶೇಕಡ 65ಕ್ಕೂ ಹೆಚ್ಚು ದಾಟುವಂತೆ ನೋಡಿಕೊಳ್ಳುವುದು ಬೂತ್‌ ಸಮಿತಿಗಳ ಸದಸ್ಯರ ಕೆಲಸ ಎಂದು ಸಿದ್ದರಾಜು ವಿವರಿಸಿದರು. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ಮಿಸ್ಡ್‌ ಕಾಲ್‌’ ಮೂಲಕ ಸದಸ್ಯತ್ವದ ಅಭಿಯಾನವೂ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT