ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಧಿಗಳ ಮೇಲೆ ಭ್ರಷ್ಟೋತ್ಸವ ನಡೆಸಲು ಮುಂದಾಗಿರುವ ಬಿಜೆಪಿ: ಕಾಂಗ್ರೆಸ್‌ ಟೀಕೆ

Last Updated 9 ಸೆಪ್ಟೆಂಬರ್ 2022, 9:17 IST
ಅಕ್ಷರ ಗಾತ್ರ

ಬೆಂಗಳೂರು: ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವು 5ನೇ ಸ್ಥಾನಕ್ಕೆ ಏರಿರುವುದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತವೇ ನೇರ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಹಂಚಿಕೊಂಡಿರುವ ಕೆಪಿಸಿಸಿ, ‘ಆತ್ಮಹತ್ಯೆಗಳಿಗೆ ಆರ್ಥಿಕ ಅಸ್ಥಿರತೆ, ಭವಿಷ್ಯದ ಬಗೆಗಿನ ಅತಂತ್ರ ಭಾವ, ನಿರುದ್ಯೋಗದ ಆತಂಕ, ಸಾಮಾಜಿಕ ವ್ಯವಸ್ಥೆಗಳು ಪ್ರಮುಖ ಕಾರಣವಾಗುತ್ತವೆ. ಆತ್ಮಹತ್ಯೆಯಲ್ಲಿ ಕರ್ನಾಟಕವು 5ನೇ ಸ್ಥಾನಕ್ಕೆ ಏರಿರುವುದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತವೇ ನೇರ ಕಾರಣ. ಈ ಸಂತೋಷಕ್ಕಾಗಿ ಭ್ರಷ್ಟೋತ್ಸವ ನಡೆಸುತ್ತಿರುವುದೇ ಬಿಜೆಪಿ ಸರ್ಕಾರ?’ ಎಂದು ಪ್ರಶ್ನಿಸಿದೆ.

‘ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಬೆಂಗಳೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರಂತೆ. ಹಗಲಲ್ಲೇ ಕಾಣದಿರುವುದು ರಾತ್ರಿ ಏನು ಕಾಣುತ್ತದೆ ಬಸವರಾಜ ಬೊಮ್ಮಾಯಿ ಅವರೇ? ಹಗಲಿಡೀ ಭ್ರಷ್ಟೋತ್ಸವದ ಕೆಲಸ, ರಾತ್ರಿ ಕಾಟಾಚಾರದ ಭೇಟಿಯೇ? ನಿಮ್ಮ ಮಂತ್ರಿಗಳೆಲ್ಲ ಎಲ್ಲಿ ಹೋದರು? ಬರೀ ವೀಕ್ಷಣೆ ಮಾಡುವ ಬದಲು ಪರಿಹಾರದ ಪ್ಯಾಕೇಜ್ ಘೋಷಿಸುವುದು ಯಾವಾಗ’ ಎಂದು ಕೇಳಿದೆ.

‘ಸರ್ಕಾರ ಕೋವಿಡ್‌ನಿಂದ ಮೃತರಾದವರ ಸಮಾಧಿಗಳ ಮೇಲೆ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದ ಖರ್ಚು ವೆಚ್ಚದ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಸುಧಾಕರ್ ಅವರು ಕೋವಿಡ್ ಹೆಣಗಳ ಮೇಲೆ ಮಾಡಿದ ಹಣವನ್ನು ಇಲ್ಲಿ ಚೆಲ್ಲುತ್ತಿದ್ದಾರೆ. ಈ ಸಮಾವೇಶಕ್ಕೆ ಕೋವಿಡ್ ಮೃತರ ಶಾಪ ತಟ್ಟುವುದು ನಿಶ್ಚಿತ’ ಎಂದು ಟೀಕಿಸಿದೆ.

‘ಕೋವಿಡ್‌ಗೆ ಜನರನ್ನು ಬಲಿಕೊಟ್ಟು, ಕೊರೊನಾ ಹೆಸರಲ್ಲಿ ಲೂಟಿ ಮಾಡಿದ ಪಾಪದ ಹಣದಲ್ಲಿ ಭ್ರಷ್ಟೋತ್ಸವ ನಡೆಯುತ್ತಿದೆ. ನಿಗದಿಯಂತೆ ಸಮಾವೇಶ ನಡೆಸಲಾಗದ ವಿಘ್ನಗಳು, ಮೂರು ಭಾರಿ ದಿನಾಂಕ ಬದಲಾವಣೆ. ಸಮಾವೇಶದ ಹೆಸರು ಬದಲಾವಣೆ. ಇವೆಲ್ಲವೂ ಕೋವಿಡ್‌ನಿಂದ ನರಳಿದವರ ಶೋಕದ ಫಲವಲ್ಲವೇ? ಪಾಪದ ಹಣದ ಶಾಪವಲ್ಲವೇ’ ಎಂದು ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT