ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯರ ಸೋಗಿನಲ್ಲಿ ನಗ್ನ ವಿಡಿಯೊ ಪಡೆದು ಹಣ ಸುಲಿಗೆ: ಸಿಐಡಿಯಿಂದ ಮೂವರ ಸೆರೆ

Last Updated 18 ಸೆಪ್ಟೆಂಬರ್ 2021, 15:23 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯರೆಂದು ಹೇಳಿಕೊಂಡು ಹಲವರನ್ನು ವಂಚಿಸಿ ಹಣ ಸುಲಿಗೆ ಮಾಡುತ್ತಿದ್ದ ಮೂವರು ವಂಚಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚೆಂದದ ಯುವತಿಯರ ಚಿತ್ರ ಹಾಕಿ ಪುರುಷರನ್ನು ಸೆಳೆಯುತ್ತಿದ್ದ ಈ ಗುಂಪು ನಂತರ ಅವರ ಜೊತೆ ಲೈಂಗಿಕ ಸಂಪರ್ಕ ಬೆಳೆಸುವ ಬಗ್ಗೆ ಚಾಟ್ ಮಾಡುತ್ತಿದ್ದರು. ಬಳಿಕ, ನಿಮ್ಮ ನಗ್ಮ ವಿಡಿಯೊ ಕಳುಹಿಸಿ ಎಂದು ಹೇಳಿ ಪುಸಲಾಯಿಸುತ್ತಿದ್ದರು. ವಿಡಿಯೊ ಬಂದ ಬಳಿಕ ಅದನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದರು ಎಂದು ಸಿಐಡಿ ಮೂಲಗಳು ಶನಿವಾರ ತಿಳಿಸಿವೆ..

ಬಂಧಿತರನ್ನು ಮುಜಾಹಿದ್, ಇಕ್ಬಾಲ್ ಮತ್ತು ಹರಿಯಾಣ ಮೂಲದ ಆಸಿಫ್ ಎಂದು ಗುರುತಿಸಲಾಗಿದೆ. ದೇಶದಾದ್ಯಂತ ತಮ್ಮ ವಂಚನಾ ಜಾಲಕ್ಕೆ ಇವರು ಸಿಮ್ ಕಾರ್ಡ್ ಸಹ ಒದಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಈ ವಂಚಕರಿಂದ ಮೋಸಹೋದ ಸಂತ್ರಸ್ತರೊಬ್ಬರು ಪೊಲೀಸರಿಗೆ ದೂರು ನೀಡಿದ ಬಳಿಕ ಅವರ ಬಣ್ಣ ಬಯಲಾಗಿದೆ.

ಸಿಐಡಿ ವಿಶೇಷ ತಂಡವು ಹರಿಯಾಣದಲ್ಲಿ ಆರೋಪಿಗಳನ್ನು ಬಂಧಿಸಿದೆ. ಅಲ್ಲಿನ ಸ್ಥಳೀಯ ಗ್ರಾಮಸ್ಥರ ತೀವ್ರ ಪ್ರತಿರೋಧದ ನಡುವೆಯೂ ಸಿಐಡಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಮುಜಾಹಿದ್ ಸುಳ್ಳು ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದ. ಅಪರಾಧಗಳಿಗೆ ಬಳಸುವ ಮೊಬೈಲ್‌ಗಳನ್ನು ನಿರ್ವಹಿಸಲು ಅವರು ಡೆಮೊ ಸಿಮ್‌ಗಳನ್ನು ಸಹ ಪಡೆದಿದ್ದರು. ಆರೋಪಿಗಳು 5,000 ಸಿಮ್ ಕಾರ್ಡ್‌ಗಳನ್ನು ಪಡೆದು ಅವುಗಳನ್ನು ಸಕ್ರಿಯಗೊಳಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳು ನೀಡಿದ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯದ ಸೈಬರ್ ಕ್ರೈಂ ವಿಭಾಗದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಿಐಡಿ ಹೇಳಿದೆ.

ಇನ್ನೊಬ್ಬ ಆರೋಪಿ ಆಸಿಫ್, ಮುಜಾಹಿದ್‌ ನಡೆಸುತ್ತಿದ್ದ ಚಟುವಟಿಕೆಗಳಿಗೆ ನೆರವಾಗಿದ್ದ. ಕಂಪ್ಯೂಟರ್ ಪ್ರಿಂಟಿಂಗ್ ಮತ್ತು ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಇಕ್ಬಾಲ್, ನಕಲಿ ಆಧಾರ್ ಕಾರ್ಡ್ ಮತ್ತು ಸುಳ್ಳು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT