ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಉದ್ಯೋಗ ನೀತಿ 2022–25: ಕನ್ನಡಿಗರಿಗೇ ಹೆಚ್ಚು ಉದ್ಯೋಗ

ಸಚಿವ ಸಂಪುಟ ಸಭೆ ಒಪ್ಪಿಗೆ
Last Updated 22 ಜುಲೈ 2022, 20:35 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಉದ್ಯೋಗ ನೀತಿ 2022– 25’ ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಎಲ್ಲ ರೀತಿಯ ಉದ್ಯಮಗಳು ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಸಂದರ್ಭ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಅವುಗಳನ್ನು ಕನ್ನಡಿಗರಿಗೇ ನೀಡಬೇಕು ಎಂಬ ಅಂಶವನ್ನು ಸೇರಿಸಿದೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ 2.5 ರಿಂದ ಶೇ 3 ರಷ್ಟು ಆಗಲಿದೆ.

ಕೈಗಾರಿಕೆಗಳನ್ನು ಬಂಡವಾಳ ಹೂಡಿಕೆಯ ಪ್ರಮಾಣದ ಆಧಾರದ ಮೇಲೆ ಮಧ್ಯಮ, ಬೃಹತ್‌, ಅಲ್ಟ್ರಾ ಮೆಗಾ ಮತ್ತು ಸೂಪರ್‌ ಮೆಗಾ ಕೈಗಾರಿಕೆಗಳೆಂದು ವರ್ಗೀಕರಿಸಲಾಗಿದೆ. ಹೂಡಿಕೆ ವಿಸ್ತರಣೆಯ ಸಂದರ್ಭದಲ್ಲಿ ಹೂಡಿಕೆ ಮೊತ್ತದ ಆಧಾರದಲ್ಲಿ ಹೆಚ್ಚುವರಿಯಾಗಿ ಎಷ್ಟು ಹುದ್ದೆಗಳನ್ನು ಸೃಷ್ಟಿ ಮಾಡಬೇಕು ಎಂಬ ಸಂಖ್ಯೆಗಳನ್ನೂ ನೀತಿಯಲ್ಲಿ ಸೂಚಿಸಲಾಗಿದೆ ಎಂದರು.

ಕನ್ನಡಿಗರು ಅಥವಾ ಸ್ಥಳೀಯರಿಗೆ ಎ,ಬಿ,ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಉದ್ಯೋಗ ನೀಡಬೇಕು. ಹಿಂದೆ ಕೇವಲ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇನ್ನು ಮುಂದೆ ಎ ಮತ್ತು ಬಿ ದರ್ಜೆಗಳ ಉದ್ಯೋಗ ನೀಡುವುದೂ ಕಡ್ಡಾಯ. ಉದ್ಯೋಗ ನೀಡುವ ಸಂಬಂಧ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸರ್ಕಾರವೇ ಪರಿಶೀಲನೆ ನಡೆಸುತ್ತದೆ ಎಂದು ಮಾಧುಸ್ವಾಮಿ ಹೇಳಿದರು.

ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ: ‘ಮಧ್ಯಮ’ ಗಾತ್ರದ ಉದ್ಯಮಗಳು ಪ್ರತಿ ₹10 ಕೋಟಿ ಹೂಡಿಕೆಯ ಮೇಲೆ 7 ಉದ್ಯೋಗಗಳ ಬದಲಿಗೆ 10 ಉದ್ಯೋಗಗಳನ್ನು ಸೃಷ್ಟಿಸಬೇಕು. ಅಂದರೆ ಪ್ರತಿ ₹10 ಕೋಟಿ ಉದ್ಯಮಕ್ಕೆ ಇನ್ನು ಮುಂದೆ ತಲಾ 10 ಉದ್ಯೋಗಗಳನ್ನು ಸೃಷ್ಟಿಸಬೇಕು.

‘ಬೃಹತ್‌ ಉದ್ಯಮ’ಗಳಲ್ಲಿ ಕನಿಷ್ಠ ಉದ್ಯೋಗದ ಮಿತಿಯನ್ನು 50 ರಿಂದ 60 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50 ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಅವರು ತಿಳಿಸಿದರು.

ಅದೇ ರೀತಿ ‘ಮೆಗಾ ಉದ್ಯಮ’ಗಳಲ್ಲಿ ಕನಿಷ್ಠ ಉದ್ಯೋಗಗಳ ಮಿತಿಯನ್ನು 200 ರಿಂದ 260 ಕ್ಕೆ ಹೆಚ್ಚಿಸಲಾಗಿದೆ.ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50 ಕ್ಕೆ ಅಂದರೆ ₹ 50 ಕೋಟಿಗೆ 50 ಉದ್ಯೋಗಗಳನ್ನು ಸೃಜಿಸಬೇಕು.

‘ಅಲ್ಟ್ರಾ ಮೆಗಾ ಉದ್ಯಮ’ಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 400 ರಿಂದ 510 ಕ್ಕೆ ಹೆಚ್ಚಿಸಲಾಗಿದೆ. ಇಲ್ಲೂ ಕೂಡ ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50 ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ‘ಸೂಪರ್‌ ಮೆಗಾ’ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 750 ರಿಂದ 1,000 ಹೆಚ್ಚಿಸಲಾಗಿದೆ.ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50 ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ಹೆಚ್ಚುವರಿಯಾಗಿ ಸೃಷ್ಟಿಸುವ ಉದ್ಯೋಗಗಳನ್ನು ಕನ್ನಡಿಗರಿಗೆ /ಸ್ಥಳೀಯರಿಗೆ ನೀಡಬೇಕು ಎಂದು ಹೇಳಿದರು.

ಅಲ್ಲದೇ, ಕಂಪನಿಗಳಿಂದ ಕೌಶಲ ತರಬೇತಿ ಸಂಸ್ಥೆ ಸ್ಥಾಪನೆಗೆ ಪ್ರೋತ್ಸಾಹಕಗಳನ್ನು ನೀಡಬೇಕು. ರಾಜ್ಯದಲ್ಲಿ ಉದ್ಯೋಗದ ಡೇಟಾಬೇಸ್‌ ಅನ್ನು ರಚಿಸಿ, ನಿರ್ವಹಿಸಬೇಕು ಎಂಬ ಅಂಶವನ್ನೂ ನೀತಿಯಲ್ಲಿ ಸೇರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಪ್ರಮುಖ ಅಂಶಗಳು

* ಹೆಚ್ಚು ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಾದ ಜವಳಿ, ಆಟಿಕೆ ತಯಾರಿಕೆ, ಎಫ್‌ಎಂಸಿಜಿ, ಚರ್ಮ ಉತ್ಪನ್ನಗಳು, ಆಹಾರ ಸಂಸ್ಕರಣೆ ಮತ್ತು ಆಭರಣ ಕ್ಷೇತ್ರಗಳಿಗೆ ಒತ್ತು ನೀಡಿ, ಹೂಡಿಕೆದಾರರನ್ನು ಆಕರ್ಷಿಸಲಾಗುವುದು.

* ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆಗಳ ಕ್ಲಸ್ಟರ್‌, ಬೀದರ್‌ನಲ್ಲಿ ಕೃಷಿ ಉಪಕರಣಗಳ ಕ್ಲಸ್ಟರ್‌, ಹುಬ್ಬಳ್ಳಿಯಲ್ಲಿ ಗ್ರಾಹಕ ಬಾಳಿಕೆ ಬರುವ ಸರಕುಗಳು ಮತ್ತು ಉಪಕರಣಗಳ ಕ್ಲಸ್ಟರ್‌, ಧಾರವಾಡ ಜಿಲ್ಲೆಯಲ್ಲಿ ಫಾಸ್ಟ್‌ ಮೂವಿಂಗ್‌ ಮತ್ತು ಗ್ರಾಹಕ ಸರಕುಗಳ ಕ್ಲಸ್ಟರ್‌ಗಳಿಗೆ ವಿಶೇಷ ಪ್ರೋತ್ಸಾಹ.

*ಉದ್ಯೋಗಕ್ಕಾಗಿ ನಿರಂತರ ಬೇಡಿಕೆ ಮತ್ತು ರಾಜ್ಯದಲ್ಲಿ ನುರಿತ ಕಾರ್ಮಿಕ ಬಲದ ಲಭ್ಯತೆಯನ್ನು ಖಾತ್ರಿಪಡಿಸುವ ಪ್ರಾಮುಖ್ಯತೆ ನೀಡಲಾಗಿದೆ. ಈ ನೀತಿಯು ಉದ್ಯೋಗ ಸೃಷ್ಟಿಯ ಬೇಡಿಕೆ ಮತ್ತು ಪೂರೈಕೆಯ ಉಪಕ್ರಮಗಳನ್ನು ಸೂಚಿಸುತ್ತದೆ.

ಪರಿಸರ ಸೂಕ್ಷ್ಮ ವಲಯ: ಸಂಪುಟ ತಿರಸ್ಕಾರ

ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

‘ಈ ಅಧಿಸೂಚನೆ ಜಾರಿಯಾದರೆ ಪಶ್ಚಿಮಘಟ್ಟ ಪ್ರದೇಶದ ಜನತೆ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದು ಸರ್ಕಾರದ ಸ್ಪಷ್ಟ ನಿಲುವು. ಹೀಗಾಗಿ, ಅಧಿಸೂಚನೆ ಒಪ್ಪಲು ಸಾಧ್ಯವಿಲ್ಲ ಮತ್ತು ಜನರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ ಎಂಬ ಚರ್ಚೆಯೂ ನಡೆಯಿತು. ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT