ಶುಕ್ರವಾರ, ಜನವರಿ 27, 2023
17 °C

ಆನೆವಾಲೆ ಬ್ಯಾಟ್ಸ್‌ಮನ್ ಪರ್ ಭಾರಿ ದಬಾವ್! ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನೇವಾಲೆ ಬ್ಯಾಟ್ಸ್‌ಮನ್ ಪರ್ ಭಾರಿ ಮನೋವೈಜ್ಯಾನಿಕ್ ದಬಾವ್ ಹೈ...! (ಬರಲಿರುವ ಬ್ಯಾಟ್ಸ್‌ಮನ್‌ ಮೇಲೆ ಈಗ ಮಾನಸಿಕವಾದ ಭಾರಿ ಒತ್ತಡ ಇದೆ)

ಕ್ರಿಕೆಟ್ ಪಂದ್ಯದಲ್ಲಿ ಮೈದಾನಕ್ಕಿಳಿ ಯುತ್ತಿದ್ದ ಮುಂದಿನ ಬ್ಯಾಟ್ಸ್‌ಮನ್‌ ಕುರಿತು ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಖ್ಯಾತ ಸುಶಿಲ್ ದೋಶಿಯವರ ಸಾಲುಗಳನ್ನು ನೆನಪು ಮಾಡಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು ಬುಧವಾರ ಹೈಕೋರ್ಟ್ ನ್ಯಾಯ ಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡ ರಾಮಚಂದ್ರ ಡಿ.ಹುದ್ದಾರ ಮತ್ತು ವೆಂಕಟೇಶ ಟಿ.ನಾಯಕ್‌ ಅವರ ಕುರಿತು ಆಡಿದ ಮಾತುಗಳಿವು.

ನೂತನ‌ ನ್ಯಾಯಮೂರ್ತಿಗಳನ್ನು ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ‘ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳ ದೊಡ್ಡ ಕುಟುಂಬಕ್ಕೆ ಇವರಿಬ್ಬರ ಸೇರ್ಪಡೆ ಸ್ವಾಗತಾರ್ಹ.ಇಬ್ಬರೂ ತಮ್ಮ ಅವಧಿಯಲ್ಲಿ ಉತ್ತಮ‌ ಕಾರ್ಯ ನಿರ್ವಹಿಸಲಿ’ ಎಂದು ವರಾಳೆ ಆಶಿಸಿದರು.

ಇದೇ ವೇಳೆ ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು ಪ್ರಕರಣಗಳ ಪೋಸ್ಟಿಂಗ್‌ ಮತ್ತು ವಿಚಾರಣೆಗೆ ಪಟ್ಟಿ ನಿಗದಿಯಾಗುವಲ್ಲಿ ವಕೀಲರಿಗೆ ವಿಳಂಬವಾಗುತ್ತಿದ್ದು, ಇದನ್ನು ಬಗೆಹರಿಸಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ವರಾಳೆ ಅವರು, ‘ಆಧುನಿಕ ತಂತ್ರಜ್ಞಾನದ ಮುಖಾಂತರ ಪ್ರಕರಣಗಳ ಪೋಸ್ಟಿಂಗ್ ಹಾಗೂ ಲಿಸ್ಟಿಂಗ್ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸ
ಲಾಗುವುದು’ ಎಂದರು. ಪ್ರಾರ್ಥನೆ ಹಾಡಿದ ವಕೀಲ ಭಾರ್ಗವ ಅವರನ್ನು ವರಾಳೆ ಮನದುಂಬಿ ಶ್ಲಾಘಿಸಿದರು.

ಅಧಿಕಾರ ವಹಿಸಿಕೊಂಡ ರಾಮಚಂದ್ರ ಡಿ. ಹುದ್ದಾರ ಮಾತನಾಡಿ, ‘ವಕೀಲರ ವೃಂದದಲ್ಲಿ ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಈ ಪರಂಪರೆಯನ್ನು ಕಿರಿಯರು ಕಡೆಗಣಿಸುತ್ತಿದ್ದಾರೆ’ ಎಂದು ವಿಷಾದಿಸಿದರು. ಅಂತೆಯೇ, ‘ವಕೀಲರು ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ನ್ಯಾಯಮೂರ್ತಿ ವೆಂಕಟೇಶ ಟಿ.ನಾಯಕ್‌ ಮಾತನಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು