ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ನೇಮಕ ಹುದ್ದೆಗಳ ಭರ್ತಿ ವಿಚಾರ; ಸರ್ಕಾರಕ್ಕೆ ಹೈ ಕೋರ್ಟ್‌ ಆದೇಶ

Last Updated 24 ಮೇ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನಡೆಯುವ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿ ಗಳಿಗೆ ವೈದ್ಯಕೀಯ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಪಾದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿ ನೇಮಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಹಾಸನದ ಬಿ.ಎನ್. ಶಿವನಂಜೇಗೌಡ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಹುದ್ದೆ ಪಡೆಯುವುದರಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ನ್ಯಾಯ ದೊರೆಯಬೇಕು. ಹಾಗಾಗಿ ರಾಜ್ಯ ಸರ್ಕಾರ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಶಾಶ್ವತವಾದ ವೈದ್ಯಕೀಯ ಮಂಡಳಿಯನ್ನು ನೇಮಕ ಮಾಡಬೇಕು. ವೈದ್ಯಕೀಯ ಮಂಡಳಿ ಮತ್ತು ಪರಿಣತರನ್ನು ನೇಮಕ ಮಾಡಲು ಕೆಪಿಎಸ್‌ಸಿಗೆ ಮುಕ್ತ ಅವಕಾಶ ಕಲ್ಪಿಸಬಾರದು’ ಎಂದು ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?:ಅರ್ಜಿದಾರ ಶಿವ ನಂಜೇಗೌಡ ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ದೇಹದಾರ್ಢ್ಯ ಪರೀಕ್ಷೆ ನಡೆಸಿದ್ದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವೈದ್ಯ ಜಿ.ನಂದಕುಮಾರ್ ಪ್ರಮಾಣ ಪತ್ರ ನೀಡಿ, ‘ಶಿವನಂಜೇಗೌಡ ಅವರಿಗೆ ಬಣ್ಣಗಳ ದೃಷ್ಟಿ ದೋಷವಿದೆ. ನಿಗದಿತ ಎತ್ತರಕ್ಕಿಂತ ಅರ್ಧ ಸೆಂಟಿಮೀಟರ್ ಕಡಿಮೆ ಇದ್ದಾರೆ’ ಎಂದು ದೃಢೀಕರಿಸಿದ್ದರು.

ಈ ಪ್ರಮಾಣಪತ್ರವನ್ನು ಆಧರಿಸಿ ಕೆಪಿಎಸ್‌ಸಿ ಶಿವನಂಜೇಗೌಡ ಅವರ ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶಿವನಂಜೇಗೌಡ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ಕೆಎಟಿ ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಶಿವನಂಜೇಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದರು.‌

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಮಿಂಟೊ ಆಸ್ಪತ್ರೆ ಯಲ್ಲಿ ಶಿವನಂಜೇಗೌಡ ಅವರ ದೇಹದಾರ್ಢ್ಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ 2022 ರ ಏಪ್ರಿಲ್‌ 18 ರಂದು ಆದೇಶಿಸಿತ್ತು. ಇದರನ್ವಯ ಮಿಂಟೊ ಆಸ್ಪತ್ರೆ ವೈದ್ಯರು ಅರ್ಜಿದಾರರ ದೇಹದಾರ್ಢ್ಯ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು. ‘ಶಿವನಂಜೇಗೌಡ ಅವರಿಗೆ ಬಣ್ಣದ ದೃಷ್ಟಿದೋಷ ಇಲ್ಲ ಮತ್ತು ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಹರಾಗಿದ್ದಾರೆ’ ಎಂದು ದೃಢೀಕರಿಸಿ ಪ್ರಮಾಣೀಕರಿಸಿದ ವರದಿ ನೀಡಿದ್ದರು.

ಈ ವರದಿಯನ್ನು ಒಪ್ಪಿರುವ ಹೈಕೋರ್ಟ್, ‘ಅರ್ಜಿದಾರರು ಅರ್ಹರಾ ಗಿದ್ದರೂ ಬೌರಿಂಗ್ ಆಸ್ಪತ್ರೆಯು ವೈದ್ಯರು ನೀಡಿದ ದೇಹದಾರ್ಢ್ಯ ಪರೀಕ್ಷೆಯ ತಪ್ಪು ಪ್ರಮಾಣ ಪತ್ರದಿಂದಾಗಿ ಹುದ್ದೆ ಕಳೆದುಕೊಂಡಿರುವುದು ದುರದೃಷ್ಟಕರ. ಆದ್ದರಿಂದ, ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿರುವ ಕರ್ನಾಟಕ ಲೋಕಸೇವಾ ಆಯೋಗದ ಆದೇಶವನ್ನು ರದ್ದುಪಡಿಸಲಾಗಿದೆ. ಅವರನ್ನು ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ಪುನರ್ ಪರಿಗಣಿಸಬೇಕು’ ಎಂದು ಹೈಕೊರ್ಟ್‌ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT