ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ: ಗೊಂದಲಕ್ಕೆ ಹೈಕೋರ್ಟ್‌ ತೆರೆ

ನ್ಯಾಯಾಲಯಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ: ಗೊಂದಲಕ್ಕೆ ಹೈಕೋರ್ಟ್‌ ತೆರೆ
Last Updated 6 ಫೆಬ್ರುವರಿ 2022, 21:14 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೋರ್ಟ್‌ಗಳಲ್ಲಿನಅಧಿಕೃತ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇರಿಸುವ ಕುರಿತಾದ ಗೊಂದಲಗಳಿಗೆ ಹೈಕೋರ್ಟ್‌ ಕಡೆಗೂ ತೆರೆ ಎಳೆದಿದೆ.

‘ರಾಯಚೂರು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಕಳೆದ ತಿಂಗಳು 26 ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಅವಕಾಶ ಕೊಡಲಿಲ್ಲ’ ಎಂದು ಕೇಳಿಬಂದ ಆಕ್ಷೇಪಗಳು ಮತ್ತು ನಂತರ ಈ ಬಗ್ಗೆ ನಡೆದ ಪ್ರತಿಭಟನೆಗಳ ಬಗ್ಗೆ ನ್ಯಾಯಾಂಗ ತಜ್ಞರು ‘ಪ್ರಜಾವಾಣಿ’ಗೆ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೈಕೋರ್ಟ್‌ನ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ತಪ್ಪು ಮಾಡಿದ್ದಾರೆ ಎಂದೆನಿಸಿದಾಗ ಅವರ ವಿರುದ್ಧ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಬಹುದಿತ್ತು. ಇಂತಹ ವಿಷಯವನ್ನು ರಸ್ತೆಗಿಳಿದು ಚರ್ಚಿಸಿದರೆ ಅದು ನ್ಯಾಯಾಂಗದ ಘನತೆಯನ್ನು ಕುಗ್ಗಿಸುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಹೈಕೋರ್ಟ್‌ನ ಸಿಬಿಐ ವಕೀಲ ಪಿ.ಪ್ರಸನ್ನಕುಮಾರ್, ‘ನ್ಯಾಯಾಂಗದ ಪಾರಮ್ಯ ಮತ್ತು ಅದು ಹೊಂದಿರುವ ಸ್ವಾತಂತ್ರ್ಯ ಸಂವಿಧಾನಾತ್ಮಕ ಅಧಿಕಾರಗಳನ್ನು ಪಡೆದಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸದಾ ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸುತ್ತವೆ.ಒಬ್ಬರ ಅಧಿಕಾರ ವ್ಯಾಪ್ತಿಯಲ್ಲಿ ಇನ್ನೊಬ್ಬರು ತಲೆ ಹಾಕಲು ಬರುವುದಿಲ್ಲ.ಮೂರೂ ಅಂಗಗಳು ಒಂದ
ಕ್ಕೊಂದು ಪೂರಕವಾಗಿ ನಡೆದುಕೊಳ್ಳಬೇಕು. ಈ ಅಧಿಕಾರ ವಿಂಗಡಣೆ ತತ್ವ 1973ರಲ್ಲಿ ಸುಪ್ರೀಂಕೋರ್ಟ್‌ನ 13 ಜನರ ಪೂರ್ಣಪೀಠದ ಕೇಶವಾನಂದ ಭಾರತೀ ಪ್ರಕರಣದಲ್ಲಿಯೇ ಸ್ಪಷ್ಟವಾಗಿದೆ’ ಎಂದು ಹೇಳಿದರು.

ಹೈಕೋರ್ಟ್‌ನ ಹಿರಿಯ ವಕೀಲ ಕೆ.ದಿವಾಕರ, ‘ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿರ್ಧಾರಗಳನ್ನು ಕೋರ್ಟ್‌ನೇರವಾಗಿ ಅಳವಡಿಸಿಕೊಳ್ಳಲು ಬರುವುದಿಲ್ಲ. ನ್ಯಾಯಾಂಗ ತನ್ನದೇ ಆದ ಕಾರ್ಯಶೈಲಿ ಮತ್ತು ವೈಖರಿಯನ್ನು ಹೊಂದಿದೆ. ಹೀಗಾಗಿ ಯಾವ ಕಾರ್ಯಕ್ರಮದಲ್ಲಿ ಯಾರ ಫೋಟೊ ಇಡಬೇಕು. ಇಡಬಾರದು ಎಂಬ ಸುತ್ತೋಲೆಯನ್ನು ಹೈಕೋರ್ಟ್ ಹೊರಡಿಸುತ್ತದೆ. ಅದರಂತೆ ರಾಜ್ಯದ ಅಧೀನ ಕೋರ್ಟ್‌ಗಳು ನಡೆಯುತ್ತವೆ. ಈ ವಿಷಯದಲ್ಲಿ ಫುಲ್‌ ಕೋರ್ಟ್ ಮೀಟಿಂಗ್‌ನ ನಿರ್ಣಯವೇ ಅಂತಿಮ’ ಎನ್ನುತ್ತಾರೆ.

‘ನ್ಯಾಯಾಧೀಶರು ತಪ್ಪು ಮಾಡಿದ್ದಾರೆ ಎನಿಸಿದರೆ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಬಹುದು. ಅಂತಹ ದೂರು ಅಥವಾ ಮನವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟಕ್ಕೂ ಈಗಾಗಲೇ ಹೈಕೋರ್ಟ್‌ ಈ ಸಂಬಂಧ ಸಾರ್ವಜನಿಕರ ಭಾವನೆಗಳನ್ನು ಗೌರವಿಸಿದೆ. ಆದರೆ, ಈ ಪ್ರಕರಣದ ಕಿಡಿ ಕಾಣಿಸಿಕೊಂಡ ದಿನ, ಕೆಲವೇ ಗಂಟೆಗಳಲ್ಲಿ ಹಲವರು ತಕ್ಷಣವೇ ದಾಂಧಲೆ ಎಬ್ಬಿಸಿದರು, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸಿದರು. ಇವೆಲ್ಲಾ ಒಂದು ರಾಜಕೀಯ ಆಟವಷ್ಟೇ. ನಾವು ಯಾರೂ ಅಂಬೇಡ್ಕರ್‌ ಅವರ ಆಶಯಗಳಿಗೆ ಮಸಿ ಬಳಿಯಬಾರದು‘ ಎಂದುರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್.ಹರೀಶ್‌ ಹೇಳಿದರು.

ಹೈಕೋರ್ಟ್ ಅಧಿಸೂಚನೆ

ಆಗಸ್ಟ್‌ 15ರ ಸ್ವಾತಂತ್ರ್ಯ ದಿನ, ನವೆಂಬರ್‌ 26ರ ಸಂವಿಧಾನ ದಿನ ಹಾಗೂ ಜನವರಿ 26 ರ ಗಣರಾಜ್ಯೋತ್ಸವ ಆಚರಣೆಯ ದಿನಗಳಂದು ಹೈಕೋರ್ಟ್‌ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳೂ ಸೇರಿದಂತೆ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಅಂಬೇಡ್ಕರ್‌ ಭಾವಚಿತ್ರ ಇರಿಸಲು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ.ಶಿವಶಂಕರೇಗೌಡ ಅಧಿಸೂಚನೆ ಹೊರಡಿಸಿದ್ದಾರೆ.‘ಇನ್ನು ಮುಂದೆ ರಾಜ್ಯದಾದ್ಯಂತ ಎಲ್ಲ ಕೋರ್ಟ್‌ಗಳಲ್ಲಿ ನಡೆಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್‌ ಭಾವಚಿತ್ರ ಇರಿಸಲು ಕ್ರಮ ವಹಿಸುವಂತೆ ನಿರ್ದೇಶಿಸಲಾಗಿದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT