ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 14ರಿಂದ ಜಂಟಿ ಅಧಿವೇಶನ: ಮಾರ್ಚ್‌ಗೆ ಬಸವರಾಜ ಬೊಮ್ಮಾಯಿ ಬಜೆಟ್‌

ಆರು ತಿಂಗಳು ಪೂರೈಸಿದ ಸಂಭ್ರಮ ಇಂದು
Last Updated 27 ಜನವರಿ 2022, 21:43 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಬಜೆಟ್‌ ಅನ್ನು ಮಾರ್ಚ್‌ ಮೊದಲ ವಾರ ಮಂಡಿಸಲಿದ್ದಾರೆ. ಈ ಮೂಲಕ ನಾಯಕತ್ವದ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಬೊಮ್ಮಾಯಿ ಮುಖ್ಯಮಂತ್ರಿಯಾಗಿಶುಕ್ರವಾರ (ಜ.28) ಆರು ತಿಂಗಳು ಪೂರ್ಣಗೊಳ್ಳಲಿದೆ. ಬಜೆಟ್‌ ಮಂಡನೆಗೆ ತಯಾರಿ ನಡೆಸಿರುವ ಅವರು, ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಅವರು ಜನಪ್ರಿಯ ಕಾರ್ಯಕ್ರಮಗಳನ್ನು ಒಳಗೊಂಡ ಬಜೆಟ್‌ ಮಂಡಿಸಲು ಅಣಿಯಾಗುತ್ತಿದ್ದಾರೆ.

ಚುನಾವಣೆಗೆ ಇನ್ನು ಒಂದು ವರ್ಷ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ, ಈ ವರ್ಷ ಮಂಡಿಸಲಿರುವ ಬಜೆಟ್‌ನ ಘೋಷಣೆಗಳನ್ನು ಅನುಷ್ಠಾನ ಮಾಡಲು ಮಾತ್ರ ಅವರಿಗೆ ಸಾಧ್ಯವಿದೆ. 2023ರಲ್ಲಿ ಬಜೆಟ್ ಮಂಡಿಸುವ ಅವಕಾಶ ಸಿಕ್ಕಿದರೂ ಅದರ ಬೆನ್ನಲ್ಲೇ ಚುನಾವಣೆ ಘೋಷಣೆಯಾಗುವುದರಿಂದ ಕಾರ್ಯಕ್ರಮಗಳ ಜಾರಿಗೆ ಅವಕಾಶ ಎಂಬುದು ಚುನಾವಣಾ ಫಲಿತಾಂಶದ ಮೇಲೆ ನಿರ್ಧರಿತವಾಗಿರುತ್ತದೆ. ಈ ಕಾರಣಕ್ಕಾಗಿ, ಸರ್ಕಾರ ಹಾಗೂ ಬಿಜೆಪಿಯ ವರ್ಚಸ್ಸನ್ನು ಹೆಚ್ಚಿಸಲು ದಾರಿ ಮಾಡಿಕೊಡುವ ಬಜೆಟ್ ಅನ್ನು ಮಾರ್ಚ್‌ನಲ್ಲಿ ಮಂಡಿಸುವ ಸವಾಲು ಬೊಮ್ಮಾಯಿ ಅವರ ಎದುರಿಗಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ಮಾರ್ಚ್‌ ಮೊದಲ ವಾರ ಬಜೆಟ್‌ ಮಂಡಿಸಲು, ಫೆಬ್ರುವರಿ 14 ರಿಂದ 25 ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ತಮ್ಮ ನೇತೃತ್ವದ ಸರ್ಕಾರ 6 ತಿಂಗಳು ಪೂರೈಸಲಿದ್ದು, ಈ ಸಂಬಂಧ ಸರ್ಕಾರದ ಸಾಧನೆಗಳ ಪುಸ್ತಕವೊಂದನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು. ಅಲ್ಲದೆ, 2023ರ ವರೆಗಿನ ಸರ್ಕಾರದ ಕಾರ್ಯಕ್ರಮಗಳ ಮುನ್ನೋಟವೂ ಇದರಲ್ಲಿ ಇರಲಿದೆ ಎಂದು ಬೊಮ್ಮಾಯಿ ವಿವರಿಸಿದರು.

ಸಚಿವ ಸಂಪುಟ ಪುನಾರಚನೆ ಕುರಿತ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ವರಿಷ್ಠರ ಜತೆ ಮಾತನಾಡಿದ್ದೇನೆ. ಅವರು ದೆಹಲಿಗೆ ಕರೆದರೆ ಹೋಗಲು ಸಿದ್ಧನಿದ್ದೇನೆ’ ಎಂದರು.

‘ಪ್ರತಿ ಬಾರಿ ಸಂಸತ್‌ ಅಧಿವೇಶನ ನಡೆದಾಗ ಸಂಸದರ ಸಭೆಯನ್ನು ನಡೆಸುವುದು ವಾಡಿಕೆ. ಈ ಬಾರಿಯೂ ಅಂತಹ ಒಂದು ಸಭೆಯನ್ನು ಕರೆಯಲು ಚಿಂತನೆ ನಡೆಸಿದ್ದೇನೆ’ ಎಂದು ಅವರು ಹೇಳಿದರು.

‘ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸುವ ಬಗ್ಗೆ ಸುದೀರ್ಘ ಮಾತುಕತೆ ನಡೆಸಲಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ನಗರದ ಸಚಿವರು ಮತ್ತು ಶಾಸಕರು ಮಾತ್ರವಲ್ಲದೆ ಇತರ ಸಚಿವರು ಮತ್ತು ಪ್ರಭಾವಿ ನಾಯಕರನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

‘ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯಕ್ಕಾಗಿ ನಡೆಯಬೇಕಾಗಿದ್ದ ಚಿಂತನ– ಮಂಥನ ಸಭೆಯನ್ನು ನಡೆಸುವ ಸಂಬಂಧ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಜತೆ ಚರ್ಚೆ ನಡೆಸಲಾಗಿದೆ’ ಎಂದರು.

‘ಸ್ವಾಮಿತ್ವ’ ಯೋಜನೆ ಸಮೀಕ್ಷೆಗೆ ₹287 ಕೋಟಿ

ರಾಜ್ಯದಲ್ಲಿ ‘ಸ್ವಾಮಿತ್ವ’ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕು ದಾಖಲೆಗಳು, ಕೃಷಿ ಭೂಮಿಯ ಹಕ್ಕು ದಾಖಲೆಗಳು ಮತ್ತು ಪಟ್ಟಣ/ನಗರ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸಲು ಖಾಸಗಿ ಏಜೆನ್ಸಿಗಳಿಂದ ಡ್ರೋನ್ ಮತ್ತು ವೈಮಾನಿಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ಕೆಟಿಪಿಪಿ ಕಾಯ್ದೆ ಅನ್ವಯವೇ ಖಾಸಗಿ ಏಜೆನ್ಸಿಗಳಿಂದ ಸಮೀಕ್ಷೆ ನಡೆಸಲಾಗುವುದು. ಇದನ್ನು ₹287 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ 5 ಡ್ರೋನ್‌ಗಳನ್ನು ನೀಡಿತ್ತು. ಇಡೀ ರಾಜ್ಯದ ಸಮೀಕ್ಷೆಗೆ ಹೆಚ್ಚುವರಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಧಾರವಾಡದ ಐಐಟಿ ಕ್ಯಾಂಪಸ್‌ಗೆ ರಾಜ್ಯ ಸರ್ಕಾರದ ವತಿಯಿಂದ ಮೂಲಸೌಕರ್ಯ ಒದಗಿಸುವ ಬದ್ಧತೆ ಅನುಸಾರ ಕುಡಿಯುವ ನೀರು ಒದಗಿಸಲು ₹11.21 ಕೋಟಿ ನೀಡಲು ಒಪ್ಪಿಗೆ.

400 ಪಶು ವೈದ್ಯರ ನೇಮಕ, ಸ್ಮಾರ್ಟ್‌ ತರಗತಿಗೆ ಅನುದಾನ

ಪಶು ವೈದ್ಯ ಇಲಾಖೆಗೆ ತಕ್ಷಣವೇ 400 ಪಶು ವೈದ್ಯರನ್ನು ನೇಮಕ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇಲಾಖೆಯಲ್ಲಿ ಸುಮಾರು 800 ಹುದ್ದೆಗಳು ಖಾಲಿ ಇದ್ದು, ಪಶು ವೈದ್ಯರ ತೀವ್ರ ಕೊರತೆ ಅನುಭವಿಸುತ್ತಿರುವುದರಿಂದ, 400 ವೈದ್ಯರನ್ನು ಇಲಾಖಾ ನೇಮಕಾತಿ ಮೂಲಕ ಭರ್ತಿ ಮಾಡಲು ಒಪ್ಪಿಗೆ ನೀಡಲಾಯಿತು ಎಂದು ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 14 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು 87 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ 6,000 ಸ್ಮಾರ್ಟ್‌ ತರಗತಿಗಳನ್ನು ಆರಂಭಿಸಲು ₹97.50 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದರು.

ಅಲ್ಲದೆ, 2022–23 ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ 1 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲು ₹93.27 ಕೋಟಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು ಎಂದು ಹೇಳಿದರು.

ಅಪಪ್ರಚಾರ: ಸಚಿವರ ಬೇಸರ

ಬೆಂಗಳೂರು: ತಮ್ಮನ್ನು ವಲಸಿಗರು, ಮತ್ತೆ ಕಾಂಗ್ರೆಸ್‌ಗೆ ಹೋಗಲು ಸಿದ್ಧರಾಗಿದ್ದಾರೆ ಎಂಬಂತೆ ಬಿಂಬಿಸುತ್ತಿರುವ ಬಗ್ಗೆ ಕೆಲವು ಸಚಿವರು ಸಂಪುಟ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ನಡೆದ ಸಭೆಯಲ್ಲಿ ಪ್ರಾಸಂಗಿಕವಾಗಿ ವಿಷಯ ಪ್ರಸ್ತಾಪಿಸಿದ ಸಚಿವರು, ‘ನಾವು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುತ್ತೇವೆ ಎಂಬ ಪ್ರಚಾರ ನಡೆದಿದೆ. ಇದರಲ್ಲಿ ಹುರುಳಿಲ್ಲ. ಇದೇ ಪಕ್ಷದಲ್ಲೇ ಇದ್ದು ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಿಟ್ಟು ಬಂದು ಸಚಿವರಾದ ಎಸ್.ಟಿ.ಸೋಮಶೇಖರ್‌, ಡಾ.ಕೆ.ಸುಧಾಕರ್‌, ಗೋಪಾಲಯ್ಯ ಅವರು ಈ ಪ್ರಸ್ತಾಪ ಮಾಡಿದರು ಎಂದು ಮೂಲಗಳು ಹೇಳಿವೆ.

‘ಬಿಜೆಪಿಗೆ ಬಂದು ಸಾಕಷ್ಟು ಸಮಯ ಆಯಿತು. ಇಲ್ಲಿಯ ಸಂಸ್ಕೃತಿಗೆ ಒಗ್ಗಿಕೊಂಡು, ಬಿಜೆಪಿಯವರೇ ಆಗಿದ್ದೇವೆ. ಹಾಗಿದ್ದರೂ ಇನ್ನೂ ವಲಸಿಗರು ಎಂದೇ ಕರೆಯಲಾಗುತ್ತಿದೆ’ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರೆ, ‘ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ. ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಕ್ರೀಡಾ ಸಚಿವ ನಾರಾಯಣಗೌಡ ಮಾತನಾಡಿ, ‘ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಇಲ್ಲೇ ಮುಂದುವರೆಯುತ್ತೇನೆ’ ಎಂದಾಗ ಉಳಿದ ಸಚಿವರು ಇದಕ್ಕೆ ಧ್ವನಿಗೂಡಿಸಿದರು.

ಎಲ್ಲರ ಮಾತುಗಳನ್ನು ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನಿಮ್ಮ ಮೇಲೆ ವಿಶ್ವಾಸವಿದೆ. ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸಚಿವರಾಗಿ ನಿಮ್ಮ ಕಾರ್ಯ ನಿರ್ವಹಣೆ ಬಗ್ಗೆ ವರಿಷ್ಠರಿಗೂ ಸಂತಸವಾಗಿದೆ. ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಎಂದು ಸಮಾಧಾನಪಡಿಸಿದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT