ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಚುನಾವಣೆ: ಅರುಣ ಶಹಾಪುರ, ಹಣಮಂತ ನಿರಾಣಿಗೆ ಬಿಜೆಪಿ ಟಿಕೆಟ್

ಮೇಲ್ಮನೆ ಚುನಾವಣೆ: ಹಾಲಿ ಸದಸ್ಯರಿಗೆ ಟಿಕೆಟ್‌ ಘೋಷಿಸಿದ ಬಿಜೆಪಿ, ಆಕಾಂಕ್ಷಿಗಳಿಗೆ ಅಸಮಾಧಾನ
Last Updated 11 ಮಾರ್ಚ್ 2022, 15:53 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಕ್ರಮವಾಗಿ ಹಾಲಿ ಸದಸ್ಯರಾಗಿರುವ ಅರುಣ ಶಹಾಪುರ ಹಾಗೂ ಹಣಮಂತ ನಿರಾಣಿ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ. ಇದರೊಂದಿಗೆ ಇತರ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ; ಅಸಮಾಧಾನ ಸ್ಫೋಟಗೊಂಡಿದೆ.

ಹಣಮಂತ ನಿರಾಣಿ
ಹಣಮಂತ ನಿರಾಣಿ

‘ಅರುಣ ಶಹಾಪುರ ಹಾಗೂ ಹಣಮಂತ ನಿರಾಣಿ ಕ್ರಮವಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯವರು. ಹೋದ ಚುನಾವಣೆಯಲ್ಲಿ ಈ ಕ್ಷೇತ್ರಗಳಿಗೆ ಬಿಜೆಪಿಯಿಂದ ಅವರಿಗೆ ಟಿಕೆಟ್ ಕೊಡಲಾಗಿತ್ತು. ಈ ಬಾರಿಯಾದರೂ ಶಿಕ್ಷಕರ ಕ್ಷೇತ್ರಕ್ಕಾದರೂ ಬೆಳಗಾವಿಯವರಿಗೆ ಮಣೆ ಹಾಕಬೇಕು’ ಎಂಬ ಒತ್ತಾಯ ಶಿಕ್ಷಕರು ಮೊದಲಾದವರ ವಲಯದಿಂದ ಕೇಳಿಬಂದಿತ್ತು. ಹಲವು ಮುಖಂಡರು ಆಗ್ರಹವನ್ನೂ ಮಂಡಿಸಿದ್ದರು. ಆದರೆ, ಅದಕ್ಕೆ ಬಿಜೆಪಿ ವಲಯದಿಂದ ಮನ್ನಣೆ ದೊರೆತಿಲ್ಲ.

ಮತ್ತೊಮ್ಮೆ ಟಿಕೆಟ್ ಪಡೆದುಕೊಳ್ಳುವಲ್ಲಿ ಹಾಲಿ ಸದಸ್ಯರು ಯಶಸ್ವಿಯಾಗಿದ್ದಾರೆ. ಬಿಜೆಪಿಯ ಈ ನಡೆಯುವ, ಇಲ್ಲಿನ ಶಿಕ್ಷಕರ ವಲಯದಲ್ಲಿನ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದೆ. ‘ಜಿಲ್ಲೆಗೆ ಮತ್ತೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಬೆಳಗಾವಿಯನ್ನು ಮತ್ತೆ ಕಡೆಗಣಿಸಲಾಗಿದೆ’ ಎಂದು ತಮ್ಮ ವಲಯದಲ್ಲಿ ಪ್ರಚಾರ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ.

ಹಲವು ಆಕಾಂಕ್ಷಿಗಳು:

ಈ ಭಾಗದ ಪ್ರಭಾವಿ ಸಂಸ್ಥೆಯಾದ ಕೆಎಲ್‌ಇ ಸೊಸೈಟಿಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಪುತ್ರಿ ಡಾ.ಪ್ರೀತಿ ದೊಡ್ಡವಾಡ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ. ಶಿಕ್ಷಕರ ಸಂಘಗಳ ಪ್ರತಿನಿಧಿಗಳಿಂದಲೂ ಬೇಡಿಕೆಗಳಿವೆ. ಕೆಲವರು ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಡಾ.ಪ್ರೀತಿ ದೊಡ್ಡವಾಡ
ಡಾ.ಪ್ರೀತಿ ದೊಡ್ಡವಾಡ

ಈ ನಡುವೆ, ರಾಜ್ಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಒಕ್ಕೂಟದಿಂದ ಜಿಲ್ಲೆಯ ಶಿಕ್ಷಕರ ಸಭೆಯನ್ನು ಮಾರ್ಚ್‌ 12ರಂದು ಕರೆಯಲಾಗಿದೆ. ಅಲ್ಲಿ ಒಕ್ಕೂಟದಿಂದ ಆಕ್ಷಾಂಕ್ಷಿಗಳ ನಡುವೆ ಚರ್ಚೆಯಾಗಲಿದ್ದು, ಯಾರಾದರೊಬ್ಬರನ್ನು ಅಂತಿಮಪಡಿಸುವ ಸಾಧ್ಯತೆ ಇದೆ. ಶಿಕ್ಷಕರ ಸಂಘದ ಪದಾಧಿಕಾರಿಯಾಗಿರುವ ರಾಮು ಗುಗವಾಡ ಕೂಡ ಆಕಾಂಕ್ಷಿಯಾಗಿದ್ದರು. ಇದೀಗ, ಟಿಕೆಟ್ ಘೋಷಣೆ ಆಗಿರುವುದರಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದವರಿಗೆ ನಿರಾಸೆಯಾಗಿದೆ. ಆದರೆ, ಒತ್ತಡದ ಮೂಲಕ ಪ್ರಯತ್ನ ಮುಂದುವರಿಸಲು ನಿರ್ಧರಿಸಿದ್ದಾರೆ. ಶನಿವಾರ ನಡೆಯಲಿರುವ ಸಭೆಯಲ್ಲಿ ಮುಂದಿನ ರೂಪರೇಷೆಗಳನ್ನು ಅವರು ಪ್ರಕಟಿಸಲಿದ್ದಾರೆ.

ಇಲ್ಲಿಯವರೇ ಬೇಕು:

‘ಬೆಳಗಾವಿಯು ಸಾಕಷ್ಟು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಖಾನಾಪುರ ತಾಲ್ಲೂಕಿನ ಅನಮೋಡದಿಂದ ಪ್ರಾರಂಭವಾಗಿ ಅಥಣಿ ತಾಲ್ಲೂಕಿನ ಕೊಟ್ಟಲಗಿ ಗ್ರಾಮದವರೆಗೆ ವ್ಯಾಪಿಸಿದೆ. 10ಸಾವಿರಕ್ಕೂ ಹೆಚ್ಚಿನ ಶಿಕ್ಷಕ ಮತದಾರರನ್ನು ಹೊಂದಿದೆ. ಇಲ್ಲಿಗೆ ಇಲ್ಲಿಯವರೇ ಆದ ಪ್ರತಿನಿಧಿ ಬೇಕು. ಹೀಗಾಗಿ, ಬಿಜೆಪಿಯವರು ಜಿಲ್ಲೆಯ ಅಭ್ಯರ್ಥಿಯನ್ನು ಟಿಕೆಟ್‌ ಪರಿಗಣಿಸಬೇಕು; ನಿರ್ಧಾರವನ್ನು ಮರುಪರಿಶೀಲಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ’ ಎನ್ನುತ್ತಾರೆ ಶಿಕ್ಷಕ ಸಂಘದ ಪದಾಧಿಕಾರಿಗಳು.

ಚುನಾವಣೆಯು ಜೂನ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ಚರ್ಚೆಯಲ್ಲೇ ಇರುವ ಕಾಂಗ್ರೆಸ್!

ಪ್ರಕಾಶ ಹುಕ್ಕೇರಿ
ಪ್ರಕಾಶ ಹುಕ್ಕೇರಿ

ಟಿಕೆಟ್‌ ಘೋಷಣೆಯಲ್ಲಿ ಬಿಜೆ‍ಪಿ ಮುಂದಿದ್ದರೆ, ಕಾಂಗ್ರೆಸ್ ಪಾಳೆಯದವರು ಇನ್ನೂ ಚರ್ಚೆಯ ಹಂತದಲ್ಲಿಯೇ ಇದ್ದಾರೆ! ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಕಿರಣ ಸಾಧುನವರ ಮತ್ತು ಶಿಕ್ಷಕರ ಕ್ಷೇತ್ರದಿಂದ ಚಿಕ್ಕೋಡಿಯ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗುತ್ತಿದೆ.

ಹೋದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಪದವೀಧರರ ಕ್ಷೇತ್ರದಿಂದ ಡಾ.ವಿ.ಎಸ್. ಸಾಧುನವರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿ.ಎಸ್. ಬನ್ನೂರ ಸ್ಪರ್ಧಿಸಿದ್ದರು.

ಪಕ್ಷೇತರರಾಗಿ ಸ್ಫರ್ಧಿಸುವೆ

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಕೊಡದಿರುವುದು ನಿರಾಸೆ ಮೂಡಿಸಿದೆ. ಮರುಪರಿಶೀಲಿಸಲಿ. ಇಲ್ಲದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ.

–ರಾಮು ಗುಗವಾಡ, ಸ್ಪರ್ಧಾಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT