ಮೂಡುಬಿದಿರೆ: ರಾಜ್ಯ ಮತ್ತು ದೇಶದ ಬೇರೆಬೇರೆ ಭಾಗಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಬಂದಿರುವ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗಳೂರಿನ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಬುಧವಾರ ಎರಡೂ ಬಾಹುಗಳನ್ನು ಚಾಚಿ ಸ್ವಾಗತಿಸಿತು.
ಮುಂಜಾನೆಯಿಂದಲೇ ರಾಜ್ಯ, ರಾಷ್ಟ್ರದ ವಿವಿಧ ಭಾಗಗಳಿಂದ ಮೂಡುಬಿದಿರೆಗೆ ಬಂದಿಳಿದ ವಿದ್ಯಾರ್ಥಿಗಳು, ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಆವರಣ ಪ್ರವೇಶಿಸುತ್ತಿದ್ದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಕೃಷಿ ಪ್ರದರ್ಶನಗಳು ಅವರನ್ನು ಸ್ವಾಗತಿಸಿದವು.
ಇದೇ ಮೊದಲಬಾರಿಗೆ ನಡೆಯುತ್ತಿರುವ ಸ್ಕೌಟ್ಸ್–ಗೈಡ್ಸ್‌ನ ‘ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ–22’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಡಿ. 27ರವರೆಗೆ ಜಾಂಬೂರಿ ನಡೆಯಲಿದೆ.
25 ಎಕರೆಗೂ ವಿಸ್ತಾರದ ಪ್ರದೇಶದಲ್ಲಿ ಆಯೋಜಿಸಿದ್ದ ವಿವಿಧ ಪ್ರದರ್ಶನಗಳು, ಐದು ವೇದಿಕೆಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಿನವಿಡೀ ಕಾಲ್ನಡಿಗೆಯಲ್ಲೇ ಓಡಾಡಿ ವೀಕ್ಷಿಸಿ ಸುಸ್ತಾಗಿದ್ದ ವಿದ್ಯಾರ್ಥಿಗಳು, ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಮುಂದೆ ಶಿಸ್ತುಬದ್ಧವಾಗಿ ಕುಳಿತು ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಭವ್ಯ ವೇದಿಕೆಯ ಮೇಲೆ ಜಾಂಬೂರಿಗೆ ಚಾಲನೆ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ‘ಭಾರತದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಯುವ ಜನರನ್ನು ಗುರಿಯಾಗಿಟ್ಟುಕೊಂಡು ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ 25 ವರ್ಷಗಳ ಕಾಲ ನಾವು ಹೊಸ ಹಾದಿಯಲ್ಲಿ ನಡೆದು, ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿಹೊಂದಿದ ರಾಷ್ಟ್ರ ಎನಿಸಬೇಕು. ವಿಶ್ವಶಾಂತಿ,
ವಿಶ್ವಕಲ್ಯಾಣದ ದಿಕ್ಕಿನಲ್ಲಿ ನಾವು ಕೆಲಸ ಮಾಡಬೇಕು’ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಸ್ವಾತಂತ್ರ್ಯಾ ನಂತರ, ಇತ್ತೀಚಿನವರೆಗೂ ನಾವು ಕೀಳರಿಮೆಯ ಭಾವನೆಯಲ್ಲೇ ಇದ್ದೆವು. ಈಗ ಅದರಿಂದ ಹೊರಬರುತ್ತಿದ್ದೇವೆ. ಯುವ ಸಮುದಾಯದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ನಾವು ಕೀಳರಿಮೆಯಿಂದ ಸಂಪೂರ್ಣವಾಗಿ ಹೊರಬರಲಿದ್ದೇವೆ ಎಂಬ ವಿಶ್ವಾಸವಿದೆ’ ಎಂದರು.
ಸ್ಕೌಟ್ಸ್–ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಆಯುಕ್ತ ಕೃಷ್ಣಕುಮಾರ್ ಕಾಂಡೇಲ್ವಾಲ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಹೆಚ್ಚುವರಿ ಮುಖ್ಯ ಆಯುಕ್ತ ಖಾಲೀದ್ ಹಾಗೂ ಇತರರು ಇದ್ದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮುಖ್ಯ ಆಯುಕ್ತ ಮೋಹನ್ ಆಳ್ವ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.