ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪದಲ್ಲಿ ನಿಮ್ಮದೆಲ್ಲ ಬಿಚ್ಚಿಡುತ್ತೇನೆ: ಅಶ್ವತ್ಥನಾರಾಯಣ ವಿರುದ್ಧ ಎಚ್‌ಡಿಕೆ

Last Updated 10 ಆಗಸ್ಟ್ 2022, 12:30 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಿರುದ್ಧ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಅಶ್ವತ್ಥನಾರಾಯಣ ಹಲ್ಲು ಬಿಗಿ ಹಿಡಿದು ಮಾತನಾಡಿದರೆ ಉತ್ತಮ. ಡಿಕೆ ಬ್ರದರುಗಳ ಮುಂದೆ ತೋಳೆರಿಸಿದಂತೆ ನನ್ನ ಹತ್ತಿರ ನಡೆಯಲ್ಲ. ನನ್ನ ಶಕ್ತಿ ಏನೆಂಬುದು ನಿಮಗೆ, ನಿಮ್ಮ ಪಕ್ಷಕ್ಕೆ ಚೆನ್ನಾಗಿ ಗೊತ್ತು. ಈಗಲೂ ಸವಾಲು ಹಾಕುತ್ತಿದ್ದೇನೆ. ಕಲಾಪ ಕರೆದು ನೋಡಿ, ನಿಮ್ಮದೆಲ್ಲ ಬಿಚ್ಚಿಡುತ್ತೇನೆ. ಅನುಮಾನವೇ ಬೇಡ’ ಎಂದು ತಿಳಿಸಿದ್ದಾರೆ.

‘ಯಾರು? ಎಲ್ಲಿ? ಹೇಗೆ? ಫೆಲ್ಯೂರ್ ಆಗಿದ್ದಾರೆ ಎನ್ನುವುದು ನನಗೂ ಗೊತ್ತು. ಕಳೆದ 3 ವರ್ಷದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಓತಲಾ ಹೊಡೆದವರು ಯಾರು? ಮುಕ್ಕಿಮುಕ್ಕಿ ಲೂಟಿ ಹೊಡೆದವರು ಯಾರು? ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ನಾನು ಫೈವ್ ಸ್ಟಾರ್ ಹೊಟೇಲಿನಲ್ಲಿ ಇದ್ದೆ, ಆದನ್ನು ನಾನೇ ಹೇಳಿದ್ದೇನೆ. ಇದೇನು ಹೊಸ ವಿಷಯ ಅಲ್ಲ. ನಿಮ್ಮ ಪಕ್ಷದ ಅಮಿತ್ ಶಾ, ಜೆ.ಪಿ.ನಡ್ಡಾ, ಅರುಣ್ ಸಿಂಗ್ ಎಲ್ಲರೂ ಬೆಂಗಳೂರಿಗೆ ಬಂದಾಗ ಅದೇ ಫೈವ್ ಸ್ಟಾರ್ ಹೊಟೇಲಿನಲ್ಲಿಯೇ ಇದ್ದರಲ್ಲವೆ? ಅವರು ಅಲ್ಲಿದ್ದಾಗ ನಿಮ್ಮ ಕಣ್ಣಿಗೆ ಪೊರೆ ಬಂದಿತ್ತಾ’ ಎಂದು ಕೇಳಿದ್ದಾರೆ.

‘ಮೊನ್ನೆಯಷ್ಟೆ ಬಂದು ಹೋದ ಅಮಿತ್ ಶಾ ಅವರು ಯಾವ ಹೋಟೆಲ್‌ನಲ್ಲಿ ಬಿಡಾರ ಹೂಡಿದ್ದರು? ನಿಮ್ಮ ನಾಯಕರೆಲ್ಲ ಬೆಂಗಳೂರಿಗೆ ಬಂದಾಗ ಕೃಷ್ಣಾ, ಅನುಗ್ರಹ ಅಥವಾ ಕಾವೇರಿ ಹಿಂದೆ ಗುಡಿಸಲಿನಲ್ಲಿ ಮಲಗುತ್ತಾರಾ? ಹೇಳಿಯಪ್ಪ ಅಶ್ವತ್ಥನಾರಾಯಣ?’ ಎಂದು ಟ್ವೀಟ್‌ ಮಾಡಿದ್ದಾರೆ.

‘ನಕಲಿ ಸರ್ಟಿಫಿಕೇಟ್ ಡೀಲರ್ ಯಾರು? ಬ್ಲ್ಯಾಕ್ ಮೇಲರ್ ಯಾರು? ಬಿಲ್ಡರ್ ಯಾರು? ಎನ್ನುವುದು ನನಗಿಂತ ನಿಮ್ಮ ಪಕ್ಷದ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ಬಿಲ್ ಮಾಡಿಕೊಳ್ಳಬೇಕಾದರೆ ಯಾರಿಗೆಲ್ಲ ಬ್ಲಾಕ್ ಮೇಲ್ ಮಾಡಿದಿರಿ? ಅಕ್ರಮಗಳ ಗೂಡಿಗೆ ಯಾರಿಂದ ಬೆಂಕಿ ಹಾಕಿಸಿದಿರಿ? ಎನ್ನುವುದನ್ನೂ ಬಲ್ಲೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಮಲ್ಲೇಶ್ವರದಲ್ಲಿ ನೀವು ನಡೆಸಿರುವ ಕರ್ಮಕಾಂಡವನ್ನು ಬಿಚ್ಚಿಡುತ್ತೇನೆ. ಕಲಾಪ ನಡೆಸಿ ನೋಡಿ. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ ಎನ್ನುವಂತೆ ಮಲ್ಲೇಶ್ವರದಲ್ಲಿ ನಿಮ್ಮ ಸದಾರಮೆ ಶೋಕಿ ಎಂಥದು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಾಗಿದೆ’ ಎಂದು ಹೇಳಿದ್ದಾರೆ.

‘ನಾನು ಕಲಾಪ ನಡೆಸಿ ಎಂದಷ್ಟೇ ಕೇಳಿದೆ. ನಾನು ನಿಮ್ಮ ಹೆಸರೆತ್ತಲಿಲ್ಲ. ನಿಮಗೆ ಗೊತ್ತಿರಲಿ. ಆದರೆ, ನಿಮಗ್ಯಾಕೆ ಸಿಟ್ಟು ಬಂತೋ ನಾ ಕಾಣೆ. ಪಿಎಸ್ಐ ಅಕ್ರಮ, ಪ್ರಾಧ್ಯಾಪಕರ ನೇಮಕ ಅಕ್ರಮ, ಬಿಲ್ಲುಗಳ ಭಾಗವತ, ಮಹಾ ಡೀಲುಗಳ ಬಗ್ಗೆ ಚರ್ಚೆ ಮಾಡೋಣ. ನಾನು ತಯಾರಿದ್ದೇನೆ. ಕಲಾಪ ಕರೆಯಿರಿ’ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT