ಸೋಮವಾರ, ಸೆಪ್ಟೆಂಬರ್ 26, 2022
22 °C
ಬೆಳಗಾವಿಯಲ್ಲಿ ಮುಂದುವರಿದ ಪ್ರವಾಹ l 32 ಕಿರುಸೇತುವೆಗಳು ಮುಳುಗಡೆ

ಮಳೆ ಅವಘಡ: ನಾಲ್ವರು ಯುವಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ/ಬಾಗಲಕೋಟೆ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ತಗ್ಗಿದೆ. ಆದರೆ, ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಇಬ್ಬರು, ಮುಧೋಳ ತಾಲ್ಲೂಕಿನಲ್ಲಿ ಒಬ್ಬರು ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟರು. ಬೆಳಗಾವಿಯಲ್ಲಿ ಮರ ಉರುಳಿ ಯುವಕನೊಬ್ಬ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆ ತಗ್ಗಿದೆ. ಸೋಮವಾರ ಸುರಿದ ಮಳೆ ಕಾರಣದಿಂದ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ, ಹಿರಣ್ಯಕೇಶಿ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ ನದಿಗಳ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ.

ಜಿಲ್ಲೆಯಲ್ಲಿ 32 ಕಿರು ಸೇತುವೆಗಳು ಮುಳುಗಡೆ ಸ್ಥಿತಿಯಲ್ಲೇ ಇವೆ. ಗೋಕಾಕ ನಗರದಲ್ಲಿ ನೀರಿನಮಟ್ಟ ಕುಗ್ಗಿದ್ದು, ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೃಹತ್‌ ಮರ ಉರುಳಿ, ಗೋಕಾಕ ತಾಲ್ಲೂಕು ಸಿದ್ದನಹಳ್ಳಿಯ ರಾಜೇಶ ಸುಲಧಾಳ (25) ಮೃತಪಟ್ಟರು.

ಬಾಗಲಕೋಟೆ ವರದಿ: ಪಂಪ್‌ಸೆಟ್‌ ಬಿಚ್ಚಿಕೊಂಡು ಬರಲು ಹೋಗಿದ್ದ ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮದ ಯುವಕ ವಿಜಯ ಬಿರಾದಾರ ಪಾಟೀಲ (19) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

ಮುಧೋಳ, ಮಿರ್ಜಿ, ಚನ್ನಾಳ, ಜಿರಗಾಳ, ಜಾಲಿಬೇರಿ, ಆಲಗುಂಡಿ ಬಿಕೆ, ತಿಮ್ಮಾಪುರ, ಕಸಬಾ ಜಂಬಗಿ ಬ್ಯಾರೇಜ್‌ಗಳು, ಢವಳೇಶ್ವರ ಸೇತುವೆ, ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಗ್ರಾಮ ಸಂಪರ್ಕಿಸುವ ಹಳೆ ಸೇತುವೆ ಮುಳುಗಡೆಯಾಗಿದೆ. 

ಕೊರ್ಲಕುಂಟೆ: ಇಬ್ಬರು ಸಾವು 

ಕೊರ್ಲಕುಂಟೆ ವರದಿ (ಚಿತ್ರದುರ್ಗ): ಚಳ್ಳಕೆರೆ ತಾಲ್ಲೂಕಿನ ಕೊರ್ಲಕುಂಟೆ ಸಮೀಪ ತುಂಬಿ ಹರಿಯುತ್ತಿದ್ದ ಖಾನಿ ಹಳ್ಳ ದಾಟುವಾಗ ಇಬ್ಬರು ಬೈಕ್‌ ಸವಾರರು ಸೆಳವಿಗೆ ಸಿಲುಕಿ ಸೋಮವಾರ ರಾತ್ರಿ ಮೃತಪಟ್ಟರು. ಗ್ರಾಮದ ಎಚ್.ಕುಮಾರ್ (32), ಪಿ.ಓಬಳೇಶ್ (32) ಮೃತರು. ಇನ್ನೊಬ್ಬ ಯುವಕ ಮಂಜುನಾಥ್‌ ಈಜಿ ದಡ ಸೇರಿದ್ದು, ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದ್ದಾರೆ. ಮೂವರೂ ಕೂಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವಾಗ ಅವಘಡ ಸಂಭವಿಸಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ, ಚಿತ್ರದುರ್ಗದ ಜ್ಯೋತಿರಾಜ್ ನೇತೃತ್ವದ ಯುವಕರ ತಂಡ ಶೋಧ ಕಾರ್ಯ ನಡೆಸಿದ್ದು, ಶವಗಳು ಪತ್ತೆಯಾಗಿವೆ. ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಕೆಲವು ದಿನಗಳಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರೂ ಯುವಕರು ದಾಟಲು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೆ.14ರಂದು ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. ಸೆ.15ರ ಬಳಿಕ ಮಳೆಯ ಅಬ್ಬರ ತಗ್ಗಲಿದೆ ಎಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು