ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರೇ... ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ: ಸುರೇಶ್‌ ಕುಮಾರ್‌

ಇಂದಿನಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿ ಆರಂಭ
Last Updated 31 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಕೋವಿಡ್‌ ಕಾರಣದಿಂದ ಮುಚ್ಚಿದ್ದ ಶಾಲೆ– ಪದವಿಪೂರ್ವ ಕಾಲೇಜುಗಳು ಶುಕ್ರವಾರ (ಜ. 1) ಬಾಗಿಲು ತೆರೆಯುತ್ತಿದ್ದು, ‘ಕೊರೊನಾ ಓಡಿಸೋಣ... ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ...’ ಎಂಬ ಧ್ಯೇಯದೊಂದಿಗೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ.

ಕೆಲವೇ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಅಂತಿಮ ಪರೀಕ್ಷೆಗಳು ನಡೆಯಲಿದೆ. ಹೀಗಾಗಿ, ಪುಟ್ಟ ಪುಟ್ಟ ತಂಡಗಳಲ್ಲಿ, ವ್ಯಕ್ತಿಗತ ಅಂತರದಲ್ಲಿ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ, 6 ರಿಂದ 9ನೇ ತರಗತಿಯ ಮಕ್ಕಳಿಗೆ ಪರಿಷ್ಕೃತ ‘ವಿದ್ಯಾಗಮ’ ತರಗತಿಗಳು ಶಾಲಾವರಣದಲ್ಲಿ ಮುಂದುವರಿಯಲಿದೆ.

ಈ ಮಧ್ಯೆ, ‘ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಜವಾಬ್ದಾರಿ ನಮ್ಮದು. ಮಕ್ಕಳನ್ನು ಆಶೀರ್ವದಿಸಿ, ಧೈರ್ಯವಾಗಿ ಕಳುಹಿಸಿ’ ಎಂದು ಪೋಷಕರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ‘ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಶಾಲೆಯು ಮಕ್ಕಳ ಪಾಲಿಗೆ ಇನ್ನೊಂದು ಮನೆಯಾಗಲಿದೆ. ಸುರಕ್ಷಿತಾಲಯವಾಗಿ ಇರಲಿದೆ’ ಎಂದೂ ಭರವಸೆ ನೀಡಿದ್ದಾರೆ.

‘ಶಾಲೆಗಳನ್ನು ಆರಂಭಿಸುತ್ತಿರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ಮತ್ತು ಮಕ್ಕಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಮಕ್ಕಳಂತೂ ಬಹುದಿನಗಳ ನಂತರ ತಮ್ಮ ಗೆಳೆಯರನ್ನು ನೋಡಲು ಕಾತರರಾಗಿದ್ದು, ಆರಂಭವಾಗುವ ಕ್ಷಣಗಣನೆಯಲ್ಲಿದ್ದಂತೆ ಕಾಣುತ್ತಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಅನೇಕ ಕಡೆಗಳಲ್ಲಿ ಶಿಕ್ಷಕರು ಶಾಲೆಗಳನ್ನು ತಳಿರು, ತೋರಣಗಳಿಂದ ಅಲಂಕರಿಸಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗುತ್ತಿರುವುದು ಮಕ್ಕಳು ಮತ್ತು ಪೋಷಕರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ’ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಶಾಲೆಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಬೆಳಗಿನ ಪ್ರಾರ್ಥನೆ ತರಗತಿಗಳಲ್ಲಿ ನಡೆಯಲಿದೆ. ಪ್ರತಿದಿನ ಶಾಲಾ ಅವಧಿ ಮುಗಿದ ಬಳಿಕ ಮತ್ತೆ ಸ್ಯಾನಿಟೈಸ್‌ ಮಾಡಲಾಗುತ್ತದೆ. ರೋಗಲಕ್ಷಣವಿರುವ
ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಮುಂದಿನ ಆರೋಗ್ಯ ತಪಾಸಣೆಯಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಕ್ಕಳ ಸುರಕ್ಷಿತ ಶಿಕ್ಷಣಕ್ಕಾಗಿ ಆರೋಗ್ಯ, ಸಾರಿಗೆ, ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿವೆ. ಇಡೀ ರಾಜ್ಯ ಸರ್ಕಾರವೇ ಮಕ್ಕಳ ಹಿತದೃಷ್ಟಿಗೆ ಟೊಂಕ ಕಟ್ಟಿ ನಿಂತಿದೆ. ಶಾಲೆಗಳ ಆರಂಭದ ವಿಷಯದಲ್ಲಿ ಜನಪ್ರತಿನಿಧಿಗಳು ಕೂಡಾ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.

ಶಾಲಾ ಭೇಟಿ ಮುಂದುವರಿಕೆ: ಬೆಂಗಳೂರಿನ ಕೆಲವು ಶಾಲಾ ಕಾಲೇಜುಗಳಿಗೆ ಗುರುವಾರ ಭೇಟಿ ನೀಡಿ ಶಾಲಾರಂಭದ ಸಿದ್ಧತೆಗಳನ್ನು ಸಚಿವರು ಪರಿಶೀಲಿಸಿದರು.

ಪೋಷಕರಿಗೆ ಶಿಕ್ಷಣ ಸಚಿವರ ಸಲಹೆ

* ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ. ಆನ್‌ಲೈನ್‌ ಮೂಲಕವೂ ಕಲಿಯಬಹುದು

* ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ಒಪ್ಪಿಗೆ ಪತ್ರ ನೀಡಬೇಕು

*ಶಾಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಶಿಕ್ಷಕರೊಬ್ಬರು ನಿಗಾ ಇಟ್ಟಿರುತ್ತಾರೆ

*ತರಗತಿಗಳು ಕೆಲವೇ ಗಂಟೆಗಳ ಕಾಲ ನಡೆಯಲಿವೆ

*ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ಕಳುಹಿಸಿಕೊಡಿ

*ಮಕ್ಕಳಿಗೆ ಶೀತ, ಜ್ವರ, ನೆಗಡಿಯಂಥ ಲಕ್ಷಣಗಳಿದ್ದರೆ ಕಳುಹಿಸಬೇಡಿ

*ಶೈಕ್ಷಣಿಕ ಭವಿಷ್ಯಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ

*
10 ತಿಂಗಳುಗಳಿಂದ ಶಾಲೆಗಳಲ್ಲಿ ಮಕ್ಕಳ ಕಲರವ ಇರಲಿಲ್ಲ. ಮೈದಾನಗಳು ಬಿಕೊ ಎನ್ನುತ್ತಿದ್ದವು. ಅದೆಲ್ಲವೂ ಹೊಸ ವರ್ಷದ ಮೊದಲ ದಿನವೇ ಅಂತ್ಯ ಕಾಣಲಿದೆ.
-ಎಸ್‌. ಸುರೇಶ್‌ಕುಮಾರ್‌, ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT