ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ: ಮುಗಿಯದ ಗೊಂದಲ, ಕುವೆಂಪು, ಹುಯಿಲಗೋಳ ಚಿತ್ರವೂ ಮಾಯ!

ಈಗ ಚಿತ್ರ ತೆಗೆದಿದ್ದಕ್ಕೆ ತಕರಾರು
Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: 7ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಪಠ್ಯಪುಸ್ತಕದ ‘ಕರ್ನಾಟಕ ಏಕೀಕರಣ ಮತ್ತು ಗಡಿವಿವಾದಗಳು’ ಪಾಠದಲ್ಲಿ ಅಳವಡಿಸಿದ್ದ ಕುವೆಂಪು ಅವರ ಚಿತ್ರವನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ತೆಗೆದು ಹಾಕಿದೆ.

ಅಲ್ಲದೆ, ಕುವೆಂಪು ಚಿತ್ರದ ಜೊತೆಗಿದ್ದ ಆಲೂರು ವೆಂಕಟರಾಯರು ಮತ್ತು ಹುಯಿಲಗೋಳ ನಾರಾಯಣರಾಯರ ಚಿತ್ರಗಳಲ್ಲಿ ಹುಯಿಲಗೋಳ ಅವರ ಚಿತ್ರವನ್ನು ತೆಗೆದು ಗೋವಿಂದ ಪೈ ಚಿತ್ರವನ್ನು ಸಮಿತಿ ಅಳವಡಿಸಿದೆ.

ಬರಗೂರು ರಾಮಚಂದ್ರಪ್ಪ ‌ಅಧ್ಯಕ್ಷತೆಯ ಈ ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಳವಡಿಸಿದ್ದ ಪಾಠದಲ್ಲಿ ಕುವೆಂಪು ಮತ್ತು ಹುಯಿಲಗೋಳ ಅವರ ಚಿತ್ರಗಳಿದ್ದವು.

6ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿ ‘ನಮ್ಮ ಕರ್ನಾಟಕ’ ಪಾಠದ ಮೈಸೂರು ವಿಭಾಗದಲ್ಲಿ ಎರಡು ಸಾಲುಗಳಲ್ಲಿ ಎಂಟು ಜನ ವಿವಿಧ ಕ್ಷೇತ್ರಗಳ ಗಣ್ಯರ ಚಿತ್ರಗಳನ್ನು ಬರಗೂರು ನೇತೃತ್ವದ ಸಮಿತಿ ಅಳವಡಿಸಿತ್ತು. ಆದರೆ, ಹೊಸ ಸಮಿತಿ ಈ ಪಠ್ಯದಲ್ಲಿ 8 ಜನ ಸಾಧಕರ ಪಟ್ಟಿಯಿಂದ ದೇವನೂರ ಮಹಾದೇವ ಅವರ ಚಿತ್ರ ತೆಗೆದು, ವಿಜ್ಞಾನಿ ರಾಜಾರಾಮಣ್ಣ ಅವರ ಚಿತ್ರ ಸೇರಿಸಿದೆ. ಅವರು ತುಮಕೂರಿನವರಾಗಿದ್ದು, ಅವರ ಚಿತ್ರ ಬೆಂಗಳೂರು ವಿಭಾಗದಲ್ಲಿ ಬರಬೇಕಾಗಿತ್ತು. ಒಟ್ಟಾರೆ, ದಲಿತ ಮತ್ತು ಶೂದ್ರ ಲೇಖಕರ ಪಾಠಗಳನ್ನಷ್ಟೇ ಅಲ್ಲ, ಅವರ ಚಿತ್ರಗಳನ್ನೂ ತೆಗೆಯುವ ಮೂಲಕ ಒಂದೇ ವರ್ಗದ ಪಾಠ ಮತ್ತು ಚಿತ್ರಗಳನ್ನು ಹೊಸ ಸಮಿತಿ ಅಳವಡಿಸಿದೆ ಎಂಬ ವಿರೋಧ ವಿವಿಧ ಸಮುದಾಯಗಳಿಂದ ವ್ಯಕ್ತವಾಗಿದೆ.

ಹಾಡು ಬರೆದವರ ಹೆಸರೇ ಬದಲು!
7ನೇ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ‘ಸಿರಿ ಕನ್ನಡ’ದಲ್ಲಿರುವ ‘ಆಡಿಸಿ ನೋಡು ಬೀಳಿಸಿ ನೋಡು’ ಪದ್ಯ ಬರೆದವರ ಹೆಸರನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ತಪ್ಪಾಗಿ ಪ್ರಕಟಿಸಿದೆ. ಅದನ್ನು ಬರೆದವರು ಆರ್‌.ಎನ್‌.ಜಯಗೋಪಾಲ್‌ ಎಂದು ತಿಳಿಸಿ ಕವಿ ಪರಿಚಯವನ್ನೂ ನೀಡಲಾಗಿದೆ. ಆದರೆ, ಇದನ್ನು ಬರೆದವರು ಗೀತ ರಚನಾಕಾರ ಚಿ.ಉದಯಶಂಕರ್‌!

ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆ ಸಮಿತಿ ಈ ಹಿಂದೆ ಪರಿಷ್ಕರಿಸಿದ್ದ ಪಠ್ಯದಲ್ಲಿ ಹಂಸಲೇಖ ಅವರ ‘ಈ ಭೂಮಿ ಬಣ್ಣದ ಬುಗುರಿ’ ಹಾಡನ್ನು ಪೂರಕ ಪಠ್ಯವಾಗಿ ನೀಡಿತ್ತು. ಅದರ ಬದಲಾಗಿ ಆರ್‌.ಎನ್‌. ಜಯಗೋಪಾಲ್‌ ಪಠ್ಯವನ್ನು ನೀಡಲು ಹೋಗಿ ಹೊಸ ಸಮಿತಿ ಎಡವಟ್ಟು ಮಾಡಿಕೊಂಡಿದೆ.

ಪರಿಶೀಲನೆಗೆ ಡಿಎಸ್‌ಇಆರ್‌ಟಿಗೆ ವಹಿಸಿ
ಹುಬ್ಬಳ್ಳಿ:
‘ಪಠ್ಯಪುಸಕ್ತ ಪರಿಷ್ಕರಣೆ ಕುರಿತ ವಿವಾದವನ್ನು ಪರಿಹರಿಸಲು ರಾಜ್ಯ ಸರ್ಕಾರವು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ಸಮಿತಿ ರಚಿಸಿ, ಪಠ್ಯವನ್ನು ಪರಿಶೀಲನೆಗೆ ಒಳಪಡಿಸಬೇಕು’ ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಎಸ್‌ಇಆರ್‌ಟಿನಲ್ಲಿ ವಿಷಯವಾರು ತಜ್ಞರಿದ್ದಾರೆ. ಅವರು ಈಗ ಆಗಿವೆ ಎನ್ನಲಾಗಿರುವ ತಪ್ಪುಗಳ ಕುರಿತು ಪರಿಶೀಲನೆ ನಡೆಸಬೇಕು. ಆಗ ವಿವಾದಕ್ಕೆ ತೆರೆ ಬೀಳುತ್ತದೆ’ ಎಂದರು.

*
ಬಸವಣ್ಣನ ಕುರಿತ ಪಠ್ಯ ಸರಿಪಡಿಸಲು ಲಿಂಗಾಯತ ಮಠಾಧೀಶರ, ಬಸವತತ್ವ ನಿಷ್ಠ ಸಾಹಿತಿಗಳ, ಉಪನ್ಯಾಸಕರ, ಶಿಕ್ಷಕರ ಸಭೆ ಕರೆಯಬೇಕು.
-ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT