ಗುರುವಾರ , ಮೇ 26, 2022
23 °C

ಮೂರೇ ದಿನದಲ್ಲಿ ಭೂ ಪರಿವರ್ತನೆಗೆ ಕ್ರಮ: ಆರ್‌. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಭೂಮಾಲೀಕರ ಸ್ವಯಂಘೋಷಿತ ಪ್ರಮಾಣಪತ್ರದ ಆಧಾರದಲ್ಲಿ ಮೂರೇ ದಿನಗಳಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವ ಮುನ್ನ ಭೂಪರಿವರ್ತನೆ ಮಾಡುವಾಗ ಅರ್ಜಿ ಹಲವು ಇಲಾಖೆಗಳನ್ನು ಸುತ್ತಿಕೊಂಡು ಜಿಲ್ಲಾಧಿಕಾರಿಗೆ ಬರಬೇಕು. ಅಲ್ಲಿ ಆದೇಶ ಹೊರಬೀಳುವಾಗ ಆರರಿಂದ ಎಂಟು ತಿಂಗಳಾಗುತ್ತಿದೆ. ಅದನ್ನು ತಪ್ಪಿಸಲು ಭೂ ಕಂದಾಯ ಕಾಯ್ದೆಯ ಸೆಕ್ಷನ್‌ 95ಕ್ಕೆ ತಿದ್ದುಪಡಿ ತರಲಾಗುವುದು’ ಎಂದರು.

ಆಯಾ ಪ್ರದೇಶದ ‘ಸಮಗ್ರ ಯೋಜನೆ’ಯ ಅನುಸಾರ ಜಮೀನು ಮಾಲೀಕರು ಪ್ರಮಾಣಪತ್ರದೊಂದಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಎಲ್ಲ ಪರಿಶೀಲನೆಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಿ ಮೂರು ದಿನಗಳಲ್ಲಿ ಭೂಪರಿವರ್ತನೆ ಆದೇಶ ಹೊರಡಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

‘ಸಮಗ್ರ ಯೋಜನೆ’ಯಲ್ಲಿ ಹಸಿರು ವಲಯದಲ್ಲಿರುವ ಜಮೀನುಗಳ ಭೂ ಪರಿವರ್ತನೆಗೆ ಅವಕಾಶವಿರುವುದಿಲ್ಲ. ಸರ್ಕಾರಿ ಜಮೀನು, ಅರಣ್ಯ ಪ್ರದೇಶ, ಸರ್ಕಾರಿ ಕೆರೆ ಹಾಗೂ ಕೆಲವು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ) ಜಮೀನು ಪರಭಾರೆ ನಿಷೇಧ (ಪಿಟಿಸಿಎಲ್‌) ಕಾಯ್ದೆ ವ್ಯಾಪ್ತಿಯಲ್ಲಿರುವ ಜಮೀನುಗಳ ಭೂಪರಿವರ್ತನೆಗೂ ಅರ್ಜಿ ಸ್ವೀಕರಿಸುವುದಿಲ್ಲ ಎಂದರು.

‘ಸಮಗ್ರ ಯೋಜನೆ’ಗಳಿಲ್ಲದ ಪ್ರದೇಶಗಳ ಜಮೀನುಗಳಿಗೆ ಮಾಲೀಕರ ಸ್ವಯಂಘೋಷಣೆಯ ಪ್ರಮಾಣಪತ್ರದ ಆಧಾರದಲ್ಲೇ ಭೂಪರಿವರ್ತನೆ ಆದೇಶ ನೀಡಲಾಗುವುದು. ಜನರಲ್‌ ಪವರ್ ಆಫ್‌ ಅಟಾರ್ನಿ (ಜಿಪಿಎ) ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಜಮೀನು ಮಾಲೀಕರು ಮಾತ್ರ ಅರ್ಜಿ ಸಲ್ಲಿಸಬಹುದು. ಸುಳ್ಳು ಮಾಹಿತಿ ನೀಡಿರುವುದು ಕಂಡುಬಂದರೆ ಆದೇಶ ತಾನಾಗಿಯೇ ರದ್ದಾಗುತ್ತದೆ. ಅರ್ಜಿ ಶುಲ್ಕ ಮತ್ತು ಭೂಪರಿವರ್ತನಾ ಶುಲ್ಕಗಳ ಮೊತ್ತವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲೇ ಭೂ ಪರಿವರ್ತನೆ ಶುಲ್ಕವನ್ನೂ ನಿಗದಿ ಮಾಡುವ ಚಿಂತನೆಯೂ ನಡೆದಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು