ಗುರುವಾರ , ಡಿಸೆಂಬರ್ 8, 2022
18 °C

ಮತದಾರರ ಮಾಹಿತಿ ಕಳವಿನಲ್ಲಿ ಕೇಂದ್ರ ಸರ್ಕಾರವೂ ಭಾಗಿ: ರಣದೀಪ್‌ ಸಿಂಗ್‌ ಸುರ್ಜೇವಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರರ ಮಾಹಿತಿ ಕಳವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇರವಾಗಿ ಭಾಗಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆರೋಪಿಸಿದರು.

ನಗರದ ವರ್ತೂರಿನಲ್ಲಿ ಶುಕ್ರವಾರ ನಡೆಯುತ್ತಿರುವ ಕಾಂಗ್ರೆಸ್‌ ನಾಯಕರ ಸಭೆಯ ಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಕಂಪನಿಯೊಂದರ ಬ್ಯಾಂಕ್‌ ಖಾತೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿಲುಮೆ ಸಂಸ್ಥೆಯ ರವಿಕುಮಾರ್‌ ಅವರ ಊರಿನ ಹಲವು ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಇದು ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಕೇಂದ್ರ ಸರ್ಕಾರ ನೇರವಾಗಿ ಭಾಗಿಯಾಗಿರುವುದಕ್ಕೆ ಸಾಕ್ಷಿʼ ಎಂದರು.

ರವಿಕುಮಾರ್‌ ಅವರ ಗ್ರಾಮದ ಹಲವು ವ್ಯಕ್ತಿಗಳ ಬ್ಯಾಂಕ್‌ ಖಾತೆಗಳಿಗೆ ಕೇಂದ್ರ ಸರ್ಕಾರದ ನಾಗರಿಕ ಸೇವಾ ಕಂಪನಿಯೊಂದರ ಖಾತೆಯಿಂದ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಲಾಗಿದೆ. ಮತದಾರರ ಮಾಹಿತಿ ಕಳವಿನ ಜತೆಯಲ್ಲಿ ಸಾರ್ವಜನಿಕರ ತೆರಿಗೆ ಹಣದ ಲೂಟಿಯೂ ನಡೆದಿದೆ. ಈ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಜತೆ ಕೇಂದ್ರ ಸರ್ಕಾರವೂ ಭಾಗಿಯಾಗಿದೆʼ ಎಂದು ಹೇಳಿದರು.

ಹಣದ ಅಕ್ರಮ ವರ್ಗಾವಣೆ ಕೂಡ ಈ ಪ್ರಕರಣದಲ್ಲಿ ನಡೆದಿದೆ. ಗಂಭೀರ ಸ್ವರೂಪದ ಆರೋಪಗಳನ್ನು ಒಳಗೊಂಡಿರುವ ಪ್ರಕರಣದ ತನಿಖೆಯನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಮೇಲುಸ್ತುವಾರಿಯಲ್ಲೇ ನಡೆಸಬೇಕು ಎಂದು ಆಗ್ರಹಿಸಿದರು.

ನಿಷ್ಪಕ್ಷವಾಗಿ ತನಿಖೆ ಮಾಡಿ: ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ʼಚಿಲುಮೆ ಸಂಸ್ಥೆಯ ಮುಖ್ಯಸ್ಥ ಹಾಗೂ ಮತದಾರರ ಮಾಹಿತಿ ಕಳವು ಪ್ರಕರಣದ ʼಕಿಂಗ್‌ ಪಿನ್‌ʼ ರವಿಕುಮಾರ್‌ ಅವರ ಊರಿನ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರದ ಕಂಪನಿ ಖಾತೆಯಿಂದ ಹಣ ವರ್ಗಾವಣೆ ಮಾಡಲಾಗಿದೆ. ಬಳಿಕ ರೈತರಿಂದ ನಗದು ವಾಪಸ್‌ ಪಡೆಯಲಾಗಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕುʼ ಎಂದು ಒತ್ತಾಯಿಸಿದರು.

ಮತದಾರರ ಮಾಹಿತಿ ಕಳವು ಹಾಗೂ ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ಪರಿಶೀಲನೆ ನಡೆಸುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಲಾಗುವುದು. ಚುನಾವಣೆಗೆ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿರುವವರು ಬೆಂಗಳೂರಿನಲ್ಲಿ ಉಳಿದುಕೊಳ್ಳುವ ಬದಲಿಗೆ ಕ್ಷೇತ್ರಗಳಿಗೆ ತೆರಳಿ ಈ ಎಲ್ಲ ವಿಚಾರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು