ಬೆಂಗಳೂರು: ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಸ್ಮಾರಕ ಭವನ ನಿರ್ಮಾಣ, ಚೌಕಿಮಠ ಗದ್ದುಗೆ ಅಭಿವೃದ್ಧಿ ಮತ್ತು ಕಿತ್ತೂರು ಸಂಸ್ಥಾನದ ಅರಮನೆಯ ಪ್ರತಿರೂಪ ನಿರ್ಮಾಣ ಸೇರಿದಂತೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಳ್ಳಲಿರುವ ₹ 10 ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಮಂಗಳವಾರ ಒಪ್ಪಿಗೆ ನೀಡಲಾಯಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಚೆನ್ನಮ್ಮನ ಸಮಾಧಿಯ ಸ್ಥಳ ಅಭಿವೃದ್ಧಿ, ಬೆಳವಡಿಯಲ್ಲಿ ಬೆಳವಡಿ ಮಲ್ಲಮ್ಮನ ಪ್ರತಿಮೆ ಹಾಗೂ ಇತಿಹಾಸ ಸಾರುವ ಫಲಕ ನಿರ್ಮಾಣ, ಕಿತ್ತೂರು ಸಂಸ್ಥಾನದ ದಾಖಲೆಗಳ ಸಂರಕ್ಷಣೆಯ ಕಾಮಗಾರಿಗಳನ್ನೂ ಕ್ರಿಯಾ ಯೋಜನೆಯಲ್ಲಿ ಸೇರಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹50 ಕೋಟಿ ಘೋಷಿಸಲಾಗಿತ್ತು. ಈ ಪೈಕಿ ₹ 10 ಕೋಟಿಯನ್ನು 2021–22ನೇ ಆರ್ಥಿಕ ವರ್ಷದಲ್ಲಿ ಒದಗಿಸಲಾಗಿದೆ. ಈ ಅನುದಾನದ ಬಳಕೆಗೆ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಸ್ಮಾರಕಗಳ ಸಂರಕ್ಷಣೆಗೆ ಪ್ರಾಧಿಕಾರದಿಂದಲೇ ಸಂಪನ್ಮೂಲ ಸೃಜಿಸುವ ತೀರ್ಮಾನ ಮಾಡಲಾಗಿದೆ. ಚೆನ್ನಮ್ಮನ ಅರಮನೆ ಪುನರ್ ನಿರ್ಮಾಣ ಕಾಮಗಾರಿಯನ್ನು ರಾಜ್ಯ ಪುರಾತತ್ವ ಇಲಾಖೆಯ ಜತೆ ಸಮಾಲೋಚಿಸಿ, ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಪ್ರಾಧಿಕಾರ ಆರಂಭವಾದ ದಿನದಿಂದ ಈವರೆಗೆ ₹ 19 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 106 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 104 ಕಾಮಗಾರಿಗಳು ಪೂರ್ಣ
ಗೊಂಡಿವೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ. ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಳಗಾವಿ ಜಿಲ್ಲೆಯ ಶಾಸಕರು, ಮಡಿವಾಳೇಶ್ವರ ಸ್ವಾಮೀಜಿ ಹಾಗೂ ಪ್ರಾಧಿಕಾರದ ಇತರ ಸದಸ್ಯರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.