ಶನಿವಾರ, ಫೆಬ್ರವರಿ 4, 2023
18 °C

ಬಾರದ ಕೆಪಿಎಸ್‌ಸಿ ಫಲಿತಾಂಶ: 3,000ಕ್ಕೂ ಹೆಚ್ಚು ಹುದ್ದೆಗಳಿಗೆ ನಡೆದ ಪರೀಕ್ಷೆ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ 3,000ಕ್ಕೂ ಹೆಚ್ಚು ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳ ಆಕ್ರೋಶ ಕಟ್ಟೆಯೊಡೆದಿದ್ದು, ಉದ್ಯೋಗಾಕಾಂಕ್ಷಿಗಳು ಕೆಪಿಎಸ್‌ಸಿ ವಿರುದ್ಧವೇ ತಿರುಗಿಬೀಳಲು ನಿರ್ಧರಿಸಿದ್ದಾರೆ. 

ಗೆಜೆಟೆಡ್‌ ಪ್ರೊಬೇಷನರಿ (ಜಿಪಿ) 106 ಹುದ್ದೆಗಳ ನೇಮಕಾತಿಯ ಮುಖ್ಯಪರೀಕ್ಷೆ, ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) 1,323, ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಕಿರಿಯ ಎಂಜಿನಿಯರ್‌ 330, ಸಹಾಯಕ ಎಂಜಿನಿಯರ್‌ 660, ಗ್ರೂಪ್‌ ‘ಸಿ’ (ತಾಂತ್ರಿಕೇತರ) 387, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ (ಎಸಿಎಫ್‌) 16 ಹೀಗೆ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದು ಹಲವು ತಿಂಗಳುಗಳೇ ಕಳೆದಿವೆ. ಆದರೆ, ಕೆಪಿಎಸ್‌ಸಿ ಮಾತ್ರ ಫಲಿತಾಂಶ ಪ್ರಕಟಿಸುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಅಭ್ಯರ್ಥಿಗಳು ಕಂಗೆಟ್ಟಿದ್ದಾರೆ.

ಫಲಿತಾಂಶ ವಿಳಂಬದಿಂದ ಹತಾಶೆಗೊಂಡಿರುವ ಅಭ್ಯರ್ಥಿಗಳು ಸೋಮವಾರ (ಜುಲೈ 25) ‘ಉದ್ಯೋಗ ಸೌಧ’ದ (ಕೆಪಿಎಸ್‌ಸಿ ಪ್ರವೇಶ ದ್ವಾರ) ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈಗಾಗಲೇ ನಡೆಸಿರುವ ಪರೀಕ್ಷೆಗಳ ಫಲಿತಾಂಶ ತಕ್ಷಣ ಪ್ರಕಟಿಸಬೇಕು, ಎರಡು ವರ್ಷಗಳಿಂದೀಚೆಗೆ ಸರ್ಕಾರ ವಹಿಸಿದ ಹಲವು ಹುದ್ದೆಗಳ ನೇಮಕಾತಿಗೆ ತ್ವರಿತವಾಗಿ ಅಧಿಸೂಚನೆ ಹೊರಡಿಸಬೇಕು, ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಪಿ.ಸಿ. ಹೋಟಾ ಸಮಿತಿಯ ಶಿಫಾರಸು ಅನುಷ್ಠಾನಗೊಳಿಸಬೇಕು, ಯುಪಿಎಸ್‌ಸಿ ಮಾದರಿಯಲ್ಲಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಬೇಕು ಎಂದು ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದ್ದಾರೆ.

ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ಮುಖ್ಯ ಪರೀಕ್ಷೆ 2021ರ ಫೆಬ್ರುವರಿಯಲ್ಲಿ ನಡೆದಿದ್ದು, ‌17 ತಿಂಗಳು ಕಳೆದರೂ ಫಲಿತಾಂಶ ಪ್ರಕಟವಾಗಿಲ್ಲ.‌ ಎಸ್‌ಡಿಎ ನೇಮಕಾತಿಗೆ 2021ರ ಅಕ್ಟೋಬರ್‌ನಲ್ಲಿ, ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಜೂನಿಯರ್‌ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಡಿಸೆಂಬರ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದೆ. ಕೆಪಿಎಸ್‌ಸಿಯ ವಿಳಂಬ ಧೋರಣೆಯಿಂದ ಪರೀಕ್ಷಾ ಅಕ್ರಮ, ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯಬಹುದೆಂಬ ಅನುಮಾನ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳನ್ನು ಕಂಗೆಡುವಂತೆ ಮಾಡಿದೆ.

ಜ್ಯ ಸರ್ಕಾರದ ವಿವಿಧ ಇಲಾಖೆ ಗಳಲ್ಲಿ ಗೆಜೆಟೆಡ್‌ ಪ್ರೊಬೇಷನರಿ (‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳು) 500ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. 2017ನೇ ಸಾಲಿನ 106 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದೆ, ಈ ಖಾಲಿ ಹುದ್ದೆಗಳ ಭರ್ತಿಗೆ ಹೊಸತಾಗಿ ಅಧಿಸೂಚನೆ ಪ್ರಕಟವಾಗುವುದಿಲ್ಲ.

‘ಕೆಎಎಸ್ (ಉಪ ವಿಭಾಗಾಧಿಕಾರಿ) ವೃಂದದಲ್ಲಿ 540 ಹುದ್ದೆಗಳಲ್ಲಿ ಶೇ25ರಷ್ಟು ಖಾಲಿ ಇದೆ. ತಹಶೀಲ್ದಾರ್‌ ವೃಂದದಲ್ಲಿ ಶೇ 20ಕ್ಕೂ ಹೆಚ್ಚು ಖಾಲಿ ಇವೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಇಡೀ ನೇಮಕಾತಿ ಪ್ರಕ್ರಿಯೆಯನ್ನು ವೇಳಾ ಪಟ್ಟಿಯಂತೆ, ಕೇವಲ ಒಂದು ವರ್ಷದಲ್ಲಿ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸುತ್ತದೆ. ಆದರೆ, ನಮ್ಮಲ್ಲಿ ಯಾಕೆ ಆಗುತ್ತಿಲ್ಲ ಎನ್ನುವುದು ದೊಡ್ಡ ಪ್ರಶ್ನೆ’ ಎಂದು ಕೆಎಎಸ್ ಸಂಘದ ಅಧ್ಯಕ್ಷ ರವಿ ಎಂ. ತಿರ್ಲಾಪುರ ಹೇಳಿದರು.

ಕೆಪಿಎಸ್‌ಸಿ ಮುಂಭಾಗದಲ್ಲಿ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಮೇ 31ರಂದು ನಡೆದ ಪ್ರತಿಭಟನೆಯ ವೇಳೆ, ‘106 ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆ ಫಲಿತಾಂಶವನ್ನು ಜೂನ್ ಒಳಗೆ ಪ್ರಕಟಿಸಲಾಗುವುದು. ಇತರ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಗಳ ಫಲಿತಾಂಶ ಸೇರಿದಂತೆ ಮಾಹಿತಿಗಳನ್ನು ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಆಶ್ವಾಸನೆ ನೀಡಿದ್ದರು.ವಿಕಾಸ್ ಕಿಶೋರ್ ಸುರಳ್ಕರ್

‘ಅತಿ ಶೀಘ್ರ ಫಲಿತಾಂಶ’

‘ನಾನು ಮೊನ್ನೆಯಷ್ಟೆ ಹುದ್ದೆ ವಹಿಸಿಕೊಂಡಿದ್ದೇನೆ. ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ಫಲಿತಾಂಶ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಇತರ ಹುದ್ದೆಗಳಿಗೆ ನಡೆದ ಪರೀಕ್ಷೆಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿಭಾಗಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ದೇನೆ. ಕೆಲವು ಪರೀಕ್ಷೆಗಳ ಮೌಲ್ಯಮಾಪನ ಸೇರಿದಂತೆ ಪ್ರಕ್ರಿಯೆ ಪೂರ್ಣಗೊಂಡಿದೆ. ಫಲಿತಾಂಶ ಪ್ರಕಟಿಸಬೇಕು ಅಷ್ಟೆ. ಕೋವಿಡ್‌ ಕಾರಣಕ್ಕೆ ಪರೀಕ್ಷಾ ನಿಯಂತ್ರಕರು 15 ದಿನ ರಜೆಯಲ್ಲಿದ್ದರು. ಅತಿ ಶೀಘ್ರದಲ್ಲಿ ಫಲಿತಾಂಶ ಕೊಡುತ್ತೇನೆ’.

- ವಿಕಾಸ್ ಕಿಶೋರ್ ಸುರಳ್ಕರ್, ಕಾರ್ಯದರ್ಶಿ, ಕೆಪಿಎಸ್‌ಸಿ


‘ರೈಲು, ಬಸ್ಸಿಗೆ ಬೆಂಕಿ ಹಚ್ಬೇಕಾ....’

‘ಮೌಲ್ಯಮಾಪನ ಮಾಡಿ ಎಂದು ಕೈ ಮುಗಿದಿದ್ದಾಯ್ತು. ಫಲಿತಾಂಶ ಕೊಡಿ ಎಂದು ಕಾಲು ಹಿಡಿದಿದ್ದಾಯ್ತು, ಶಾಸಕ ಸುರೇಶ್‌ಕುಮಾರ್‌ರಂಥ ಹಿರಿಯರು ಬೀದಿಯಲ್ಲಿ ನಿಂತದ್ದು ಆಯಿತು. ಕೆಪಿಎಸ್‌ಸಿ ಮಾತು ಕೊಟ್ಟು ತಪ್ಪಿದ್ದೂ ಆಯಿತು. ನಾವೆಲ್ಲ ಏನ್ಮಾಡ್ಬೇಕು? ಬಿಹಾರ ಥರ ರೈಲು, ಬಸ್ಸಿಗೆ ಬೆಂಕಿ ಹಚ್ಬೇಕಾ..., ನಾವೇ ಬೆಂಕಿ ಹಚ್ಕೋಬೇಕಾ?’ ಎಂದು ಪ್ರಶ್ನಿಸಿ, ನೂರಾರು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಆರಂಭಿಸಿದ್ದಾರೆ. ‘ಹಿಂದೆ ಪ್ರಧಾನಿ ಹತ್ಯೆಯಾದಾಗಲೂ ಯುಪಿಎಸ್‌ಸಿ (ಐಎಎಸ್‌, ಐಪಿಎಸ್‌ ನೇಮಕಾತಿ) ಪರೀಕ್ಷೆ ನಡೆಸಿತ್ತು. ಕೋವಿಡ್‌ ಬಂದು ಪ್ರಪಂಚವೇ ನಿಂತಿದ್ದಾಗಲೂ ಫಲಿತಾಂಶ ಪ್ರಕಟಿಸಿತ್ತು. ಕೆಪಿಎಸ್‌ಸಿ ಮಾತ್ರ ನೆಪಗಳನ್ನು ಹೇಳಿ ಫಲಿತಾಂಶ ಮುಂದೂಡುತ್ತಿದೆ’ ಎಂದು ಅಭ್ಯರ್ಥಿಯೊಬ್ಬರು ಕಿಡಿ ಕಾರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು