ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪಣೆ ಆಲಿಸಿ ಕೆಪಿಎಸ್‌ಸಿ ನಿಯಮ ಬದಲು: ಮಾಧುಸ್ವಾಮಿ

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ
Last Updated 28 ಮಾರ್ಚ್ 2022, 17:26 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಯಲ್ಲಿ ಸಂದರ್ಶನದ ಅಂಕ ಕಡಿತ ಮತ್ತು ‘ಬಿ’ ಶ್ರೇಣಿಯ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿನ ಬದಲಾವಣೆ ಕುರಿತು ನಿಯಮ ತಿದ್ದುಪಡಿ ಕರಡು ಪ್ರಕಟಿಸಿದ್ದು, ಸಾರ್ವಜನಿಕರ ಆಕ್ಷೇಪಣೆ ಆಲಿಸಿದ ಬಳಿಕ ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ನಿಯಮ 330ರಡಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಕೆ.ಟಿ. ಶ್ರೀಕಂಠೇಗೌಡ, ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌, ಬಿಜೆಪಿಯ ರುದ್ರೇಗೌಡ, ಭಾರತಿ ಶೆಟ್ಟಿ, ಸಂದರ್ಶನದ ಅಂಕ ಕಡಿತ ಮಾಡುವ ತೀರ್ಮಾನ ಕೈಬಿಡುವಂತೆ ಆಗ್ರಹಿಸಿದರು.

‘ಸಂದರ್ಶನದ ಅಂಕ ಕಡಿತದಿಂದ ಗ್ರಾಮೀಣ ಅಭ್ಯರ್ಥಿಗಳು ಮತ್ತು ದುರ್ಬಲ ವರ್ಗಗಳ ಅಭ್ಯರ್ಥಿಗಳಿಗೆ ತೊಂದರೆ ಆಗಲಿದೆ. ‘ಬಿ’ ಶ್ರೇಣಿಯ ಹುದ್ದೆಗಳ ಭರ್ತಿಯಲ್ಲಿ ಸಂದರ್ಶನ ಕೈಬಿಡುವ ನಿರ್ಧಾರವೂ ಸರಿಯಲ್ಲ. ಎರಡನ್ನೂ ವಾಪಸ್‌ ಪಡೆಯಬೇಕು. ಪಿ.ಸಿ. ಹೋಟಾ ಸಮಿತಿ ವರದಿಯನ್ನು ಜಾರಿಗೊಳಿಸುವ ಮೂಲಕ ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

‘ಸಂದರ್ಶನಕ್ಕೆ 200 ಅಂಕ ನಿಗದಿ ಮಾಡಿದ್ದಾಗ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿತ್ತು. ಈಗಲೂ ಅದೇ ಕಾರಣಕ್ಕಾಗಿ ಸಂದರ್ಶನದ ಅಂಕಗಳನ್ನು 25ಕ್ಕೆ ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ‘ಬಿ’ ಶ್ರೇಣಿಯ ಎಲ್ಲ ಹುದ್ದೆಗಳ ಭರ್ತಿಗೂ ‘ಸಿ’ ಶ್ರೇಣಿಯ ಹುದ್ದೆಗಳ ಭರ್ತಿಯ ಪರೀಕ್ಷಾ ಮಾದರಿ ಅನ್ವಯಿಸುವುದಿಲ್ಲ. ಗೆಜೆಟೆಡ್‌ ಹುದ್ದೆಗಳ ಭರ್ತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಮಾಧುಸ್ವಾಮಿ ಉತ್ತರಿಸಿದರು.

‘ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997’ಕ್ಕೆ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಆಹ್ವಾನಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT