ಶನಿವಾರ, ಫೆಬ್ರವರಿ 4, 2023
17 °C

ಜನರು ಸಂಕಷ್ಟದಲ್ಲಿರುವಾಗ ಶಂಖ ಊದುತ್ತಿರುವ ಬಿಜೆಪಿ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಮಹಾಮಳೆಯಿಂದ ಜನರು ಸಂಕಷ್ಟದಲ್ಲಿರುವಾಗ ಬಿಜೆಪಿ ಮುಖಂಡರು ಜನ ಸ್ವರಾಜ್‌ ಯಾತ್ರೆ ಹೆಸರಿನಲ್ಲಿ ಶಂಖ ಊದಿಕೊಂಡು ತಿರುಗುತ್ತಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಎಂಥದ್ದೋ ಶಂಖ ಊದೋಕೆ ಹೋಗಿದ್ದಾರೆ. ಶಂಖ ಊದಿದರೆ ಜನರಿಗೆ ಸ್ವರಾಜ್ಯ ಬರುತ್ತಾ? ಯಾರ ಸ್ವರಾಜ್ಯಕ್ಕಾಗಿ ಈ ಯಾತ್ರೆ’ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮಳೆಯಿಂದ ಏಳು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟಗಳು ಹಾಳಾಗಿವೆ. ಹಲವು ಜಿಲ್ಲೆಗಳಲ್ಲಿ ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ. ಜನರಿಗೆ ಪರಿಹಾರ ಒದಗಿಸಲು ತ್ವರಿತವಾಗಿ ಕೆಲಸ ಮಾಡಬೇಕಿದ್ದ ಸಚಿವರು ಶಂಖ ಊದಿಕೊಂಡು ಹೋದರೆ ಹೇಗೆ ಎಂದು ಕೇಳಿದರು.

ಗೋವುಗಳ ಸಂರಕ್ಷಣೆಗೆ ಎಲ್ಲ ಕಡೆಗಳಲ್ಲೂ ಗೋಶಾಲೆಗಳನ್ನು ತೆರೆಯುವುದಾಗಿ ಸರ್ಕಾರ ಘೋಷಿಸಿತ್ತು. ಈಗ ₹ 25 ಕೋಟಿ ಒದಗಿಸುವುದಾಗಿ ಹೇಳುತ್ತಿದ್ದಾರೆ. ಗೋಶಾಲೆಗಳಿಗೆ ಅನುದಾನ ನೀಡುವುದಕ್ಕೂ ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮೇವಿನ ಕೊರತೆ ಉಂಟಾಗಿದೆ ಎಂದು ದೂರಿದರು.

‘ಕಾಂಗ್ರೆಸ್‌ ಬಿಜೆಪಿಯ ಸಿ ಟೀಂ’
‘ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ದಿನೇಶ್‌ ಗೂಳಿಗೌಡರಿಗೆ ಟಿಕೆಟ್‌ ನೀಡಿದೆ. ಇವರು ಹಿಂದೆ ಕಾಂಗ್ರೆಸ್‌ನ ಒಬ್ಬ ಸಚಿವರಿಗೆ ಸಹಾಯಕರಾಗಿದ್ದರು. ನಂತರ ಬಿಜೆಪಿಯ ಸಚಿವರ ಸಹಾಯಕರಾಗಿದ್ದರು. ಈಗ ಅವರನ್ನು ಕರೆದು ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ ಪಕ್ಷ ಬಿಜೆಪಿ ಸಿ ಟೀಂ ಆಗಿದೆಯೆ ಎಂಬುದನ್ನು ಅವರೇ ಹೇಳಬೇಕು’ ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಆರರಿಂದ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು