ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 12 ಸಾವಿರ ಕೋಟಿ ಕಾಮಗಾರಿಗೆ ಅನುಮತಿ ನೀಡುವ ಅವಸರ ಬಿಎಸ್‌ವೈಗೆ ಏಕೆ: ಎಚ್‌ಡಿಕೆ

Last Updated 22 ಜುಲೈ 2021, 11:20 IST
ಅಕ್ಷರ ಗಾತ್ರ

ಮಳವಳ್ಳಿ (ಮಂಡ್ಯ ಜಿಲ್ಲೆ): ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರು ₹ 12 ಸಾವಿರ ಕೋಟಿ ಯೋಜನೆಗಳಿಗೆ ತರಾತುರಿಯಲ್ಲಿ ಅನುಮತಿ ನೀಡುತ್ತಿದ್ದಾರೆ.ಅಂತಹ ಅವಸರ ಏಕೆ’ ಎಂದು ಜೆಡಿಎಸ್‌ ಶಾಸಕಾಂಗದ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎರಡು ದಿನದಲ್ಲಿ ಮುಖ್ಯಮಂತ್ರಿ ಬದಲಾಗುವುದಾದರೆ ಸಾವಿರಾರು ಕೋಟಿ ಕಾಮಗಾರಿಗೆ ಅನುಮತಿ ನೀಡುವ ನಿರ್ಧಾರದ ಹಿಂದಿನ ಉದ್ದೇಶ ಏನು, ಅವರಿಗೆ ಅಂತಹ ದರ್ದು ಏನಿದೆ, ದುಡ್ಡು ಹೊಡೆಯುವುದಕ್ಕಾ, ರಾಜ್ಯದ ತೆರಿಗೆ ಹಣವನ್ನು ಲೂಟಿ ಮಾಡಲಿಕ್ಕ’ ಎಂದು ಪ್ರಶ್ನಿಸಿದರು.

‘ನೀರಾವರಿ ಇಲಾಖೆಯ 4 ನಿಗಮಗಳಲ್ಲಿ ₹ 12 ಸಾವಿರ ಕೋಟಿ ಕಾಮಗಾರಿಗೆ ಅನುಮತಿ ನೀಡುತ್ತಿದ್ದಾರೆ. ಆದರೆ, ಅದರಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಕೇವಲ ₹ 1 ಸಾವಿರ ಕೋಟಿ ನೀಡುತ್ತಿದ್ದಾರೆ. ಮೈಸೂರು ಭಾಗದ ಜನರು ನಿಮಗೆ ಏನು ದ್ರೋಹ ಮಾಡಿದ್ದಾರೆ, ನಿಜವಾಗಿಯೂ ನೀರು ಕೊಡುವ ಉದ್ದೇಶ ನಿಮಗೆ ಇದೆಯೇ? ದುಡ್ಡು ಹೊಡೆಯುವ ಯೋಜನೆ ನಿಮ್ಮದು’ ಎಂದು ಆರೋಪಿಸಿದರು.

‘ಯಡಿಯೂರಪ್ಪ ರಾಜೀನಾಮೆ ನೀಡುವುದು, ಬಿಡುವುದು ಬಿಜೆಪಿಯ ಆಂತರಿಕ ವಿಚಾರ. ಅವರ ಪಕ್ಷದ ವಿಷಯದಲ್ಲಿ ನಾನು ಮೂಗು ತೂರಿಸುವುದಿಲ್ಲ. ಅದು ಕಳೆದ 2 ವರ್ಷಗಳಿಂದಲೂ ನಡೆಯುತ್ತಿದೆ. ಜನರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದರೂ ಇಂತಹ ವಿಷಯ ಇಟ್ಟುಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಆದಷ್ಟು ಬೇಗ ವಾತಾವರಣವನ್ನು ತಿಳಿಗೊಳಿಸಿ ಜನರಿಗೆ ಉತ್ತಮ ಆಡಳಿತ ನೀಡುವಂತಾಗಬೇಕು’ ಎಂದರು.

‘ಮುಖ್ಯಮಂತ್ರಿಗೆ ಮಠಾಧೀಶರು ಬೆಂಬಲ ನೀಡಿದ್ದಾರೆ ಎಂಬ ವಿಚಾರಕ್ಕೆ ನಾನು ಯಾವುದೇ ಮಹತ್ವ ನೀಡುವುದಿಲ್ಲ. ನನಗೆ ಯಾವುದೇ ಜಾತಿ ಇಲ್ಲ, ರಾಜ್ಯದ ಜನರು ನನ್ನನ್ನು ಜಾತಿಯಿಂದ ಗುರುತಿಸಿಲ್ಲ. ನನ್ನಲ್ಲಿರುವ ತಾಯಿ ಹೃದಯದಿಂದ ಜನರು ನನ್ನನ್ನ ಗುರುತಿಸುತ್ತಾರೆ. ಜಾತಿಯ ಹೆಸರಿನಲ್ಲಿ ರಕ್ಷಣೆ ಪಡೆಯುವ ಅಗತ್ಯ ನನಗಿಲ್ಲ. ನನಗೂ ಬೇರೆ ರಾಜಕಾರಣಿಗಳಿಗೂ ವ್ಯತ್ಯಾಸ ಇದೆ. ಜಾತಿಯ ಹೆಸರಿನಲ್ಲಿ ನಾನು ಪಕ್ಷ ಕಟ್ಟುವ ಕೆಲಸ ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT