ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಕೃಷಿ ರಂಗ ಸರ್ವನಾಶವಾಗಲಿದೆ: ಸಿದ್ದರಾಮಯ್ಯ

Last Updated 28 ಸೆಪ್ಟೆಂಬರ್ 2020, 9:49 IST
ಅಕ್ಷರ ಗಾತ್ರ

ಬೆಂಗಳೂರು: ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಕೃಷಿಕನಲ್ಲದವನು ಕೃಷಿ ಭೂಮಿ ಖರೀದಿಸುವಂತಿಲ್ಲ ಎಂಬ ನಿಯಮ ಹೋಗಿ, ಧನಿಕರು ಕೂಡ ಕೃಷಿ ಭೂಮಿ ಖರೀದಿ ಮಾಡಲಿದ್ದಾರೆ. ನಂತರ ಆ ಭೂಮಿಯಲ್ಲಿ ಫಾರ್ಮ್‌ಹೌಸ್‌ಗಳು, ಕಾರ್ಖಾನೆಗಳು ತಲೆಯೆತ್ತಲಿವೆ. ಅಲ್ಲಿಗೆ ಕೃಷಿ ಕ್ಷೇತ್ರ ಸರ್ವನಾಶವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಸುಧಾರಣೆ ಕಾಯ್ದೆ, ಎಪಿಎಂಎಸಿ ಕಾಯ್ದೆ ತಿದ್ದುಪಡಿ, ಕೇಂದ್ರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕ ಕಾಂಗ್ರೆಸ್‌ ವತಿಯಿಂದ ಬೆಂಗಳೂರಿನ ಪಕ್ಷದ ಕಚೇರಿಯ ಬಳಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಭೂಸುಧಾರಣೆ ಕಾಯ್ದೆಯ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು.

ಉಳುವವನನ್ನು ಭೂಮಿಯ ಒಡೆಯನಾಗಿಸಿದ್ದು ದೇವರಾಜ ಅರಸು ಅವರ ನಾಯಕತ್ವದ ಕಾಂಗ್ರೆಸ್ ಸರ್ಕಾರ. ಈಗ ಬಡವರ ಭೂಮಿಯನ್ನು ಉಳ್ಳವರ ಪಾಲು ಮಾಡಲು ಹೊರಟಿರುವುದು ಬಿಜೆಪಿ ಸರ್ಕಾರ. ಹಾಗಾದರೆ ನಿಜವಾಗಿ ಯಾರು ರೈತರ ಪರ ಎಂದು ಪ್ರಶ್ನಿಸಿದರು.

ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಕೃಷಿಕನಲ್ಲದವನು ಕೃಷಿ ಭೂಮಿ ಖರೀದಿಸುವಂತಿಲ್ಲ ಎಂಬ ನಿಯಮ ಹೋಗಿ, ಧನಿಕರು ಕೂಡ ಕೃಷಿ ಭೂಮಿ ಖರೀದಿ ಮಾಡಲಿದ್ದಾರೆ. ನಂತರ ಆ ಭೂಮಿಯಲ್ಲಿ ಫಾರ್ಮ್‌ಹೌಸ್‌ಗಳು, ಕಾರ್ಖಾನೆಗಳು ತಲೆಯೆತ್ತಲಿವೆ. ಅಲ್ಲಿಗೆ ಕೃಷಿ ಕ್ಷೇತ್ರ ಸರ್ವನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ಒಟ್ಟು ರೈತರಲ್ಲಿ ಸಣ್ಣ ಹಿಡುವಳಿದಾರರ ಪ್ರಮಾಣ ಶೇ.86 ಇದೆ. ಈ ರೈತರೆಲ್ಲಾ ಧನಿಕರಿಗೆ ತಮ್ಮ ಭೂಮಿ ಮಾರಿ, ದುಡಿಮೆಗಾಗಿ ಪಟ್ಟಣ ಸೇರುತ್ತಾರೆ. ಕೃಷಿ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದ ಅಮಾಯಕ ಮಂದಿ ನಗರಗಳಲ್ಲಿ ಕೂಲಿ ಮಾಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

ಈ ಕಾಯಿದೆಗಳ ಜಾರಿ ಹಿಂದೆ ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆಯಿದೆ. ಆತ್ಮಸಾಕ್ಷಿ ಇಲ್ಲದ ಯಡಿಯೂರಪ್ಪ ಅವರು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ನಾಡನ್ನು ಗುಲಾಮಗಿರಿಗೆ ತಳ್ಳಲು ಹೊರಟಿದ್ದಾರೆ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಮೂದಲಿಸಿದರು.

ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ರೈತರಿಗಷ್ಟೇ ಅಲ್ಲ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ನಷ್ಟ ಕಾದಿದೆ. ಖಾಸಗಿ ಕಂಪನಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚು ಬೆಲೆಗೆ ಮಾರಿ ಜನರ ಸುಲಿಗೆಗೆ ಇಳಿಯಲಿವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ನಿಜವಾಗಿ ರೈತ, ಕಾರ್ಮಿಕರ, ಬಡವರ ಪರವಾಗಿದ್ದರೆ ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ತಪ್ಪನ್ನು ಮಾಡುತ್ತಲೇ ಇರಲಿಲ್ಲ. ಯಡಿಯೂರಪ್ಪ ಹಸಿರು ಶಾಲು ಹೊದ್ದಿರುವ ಒಬ್ಬ "ಢೋಂಗಿ ರೈತನಾಯಕ" ಎಂದು ಗೇಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT