ಭಾನುವಾರ, ಜುಲೈ 3, 2022
27 °C

ಭಾಷೆ ಪ್ರಗತಿಗೆ ಅಡ್ಡಿಯಾಗಬಾರದು: ಸಚಿವ ಧರ್ಮೇಂದ್ರ ಪ್ರಧಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಭಾಷೆಯು ಪ್ರಗತಿಗೆ ಅಡ್ಡಿಯಾಗಬಾರದು. ಈ ಕಾರಣಕ್ಕಾಗಿ ಭಾಷೆಯ ಹೆಸರಿನ ರಾಜಕಾರಣವನ್ನು ಬೆಂಬಲಿಸುವುದಿಲ್ಲ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅಡಿಯಲ್ಲಿ ರೂಪಿಸಿರುವ 'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆದೇಶದ ದಾಖಲೆ' ಬಿಡುಗಡೆ ಮಾಡಿ ಮಾತನಾಡಿದರು.

'ಒಬ್ಬರು ಹಿಂದಿ ಪರ, ಮತ್ತೊಬ್ಬರು ಇಂಗ್ಲಿಷ್ ಪರ, ಇನ್ನೊಬ್ಬರು ಸ್ಥಳೀಯ ಭಾಷೆಗಳ ಪರ ಮಾತನಾಡುತ್ತಿದ್ದಾರೆ. ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ನಾವು ಎಲ್ಲಿಯೂ ಹೇಳಿಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಎನ್ಇಪಿ ಆದ್ಯತೆ ನೀಡಿದೆ' ಎಂದರು.

ಜಪಾನ್ ದೇಶದಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯೇ ಇಲ್ಲ. ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುತ್ತಲೇ ಅದು ಜಗತ್ತಿನ ದೈತ್ಯ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಬೆಳೆದಿದೆ. ಭಾಷೆಗಿಂತಲೂ ಜ್ಞಾನ ಪ್ರಸಾರ ಮುಖ್ಯ' ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಾಗ ದೇಶದ ಎಲ್ಲ ಭಾಗಗಳಿಂದಲೂ ಜನರ ಸಹಭಾಗಿತ್ವ ಇತ್ತು. 22 ರಾಜ್ಯ ಸರ್ಕಾರಗಳು ನೇರವಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ. 600 ಜಿಲ್ಲೆಗಳ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ ಎಂದರು.

ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಕೇಂದ್ರ ಸರ್ಕಾರದ ವಿರೋಧವಿಲ್ಲ. ಎನ್ಇಪಿಗೆ ಪರ್ಯಾಯವಾಗಿ ಪಶ್ಚಿಮ ಬಂಗಾಳ ಸರ್ಕಾರ ಪ್ರತ್ಯೇಕ ನೀತಿ ತರಲು ಹೊರಟಿದೆ. ಅಂತಹ ಪ್ರಯತ್ನಗಳಿಗೂ ತಮ್ಮ ವಿರೋಧ ಇಲ್ಲ ಎಂದು ಪ್ರಧಾನ್ ಹೇಳಿದರು.

ಎನ್ಇಪಿ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಆದೇಶಗಳು ಭಾರತದ ಪ್ರಗತಿಯ ದೃಷ್ಟಿಯಿಂದ ಐತಿಹಾಸಿಕ ಹೆಜ್ಜೆಗಳು. ಇವುಗಳ ಅನುಷ್ಠಾನದಿಂದ ದೇಶದ ಪ್ರಗತಿಯ ದಿಕ್ಕು ಬದಲಾಗಲಿದೆ ಎಂದರು.

ಎನ್ಇಪಿಯಲ್ಲಿ ಶಿಕ್ಷಣವನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಪೂರ್ವ ಪ್ರಾಥಮಿಕ ಹಂತದ ಹೊಸ ಪಠ್ಯಕ್ರಮ ಮುಂದಿನ ವಸಂತ ಪೂರ್ಣಿಮೆಗೂ ಮೊದಲು ಸಿದ್ಧವಾಗಲಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಎನ್ಇಪಿ ರಚನಾ ಸಮಿತಿ ಅಧ್ಯಕ್ಷ ಡಾ.ಕೆ. ಕಸ್ತೂರಿರಂಗನ್, ಕೇಂದ್ರ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿತಾ ಕರವಾಲ್, ಎನ್ ಸಿಇಆರ್ ಟಿ ನಿರ್ದೇಶಕ ಪ್ರೊ.‌ಸೆತ್ಲಾನಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು