ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ ಏಜೆಂಟ್ ಒಬ್ಬರನ್ನು ವಜಾ ಮಾಡಿದ್ದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ‘ಯಾವುದೇ ವಜಾ ಆದೇಶ ಹೊರಡಿಸುವ ಮುನ್ನ ನಿರ್ದಿಷ್ಟ ನಿಯಮಾವಳಿಗಳನ್ನು ಪಾಲಿಸಬೇಕು’ ಎಂದು ಹೇಳಿದೆ.
ಈ ಸಂಬಂಧ ಸೂತ್ರಂ ಸುರೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ‘ನಿಯಮಗಳನ್ನು ಗಾಳಿಗೆ ತೂರಿ ವಜಾ ಮಾಡುವುದು ಸಲ್ಲ’ ಎಂದು ಅಭಿಪ್ರಾಯಪಟ್ಟಿದೆ.
‘ವಜಾ ಅದೇಶಕ್ಕೂ ಮುನ್ನ ಅರ್ಜಿದಾರರ ಅಹವಾಲು ಆಲಿಸಿಲ್ಲ. ಎಲ್‌ಐಸಿ ನಿಬಂಧನೆಗಳ ಐದನೇ ವಿಧಿಯ ಅನುಸಾರ ನಿಯಮ ಪಾಲನೆಯ ಪ್ರಕ್ರಿಯೆ ಜೀವನಾಡಿ ಇದ್ದಂತೆ’ ಎಂದು ಹೇಳಿರುವ ನ್ಯಾಯಪೀಠ, ಶಿಸ್ತು ಪ್ರಾಧಿಕಾರವು 2019ರ ಮೇ 14ರಂದು ಹೊರಡಿಸಿದ್ದ ವಜಾ ಆದೇಶ ಮತ್ತು ಇದನ್ನು ಎತ್ತಿ ಹಿಡಿದಿದ್ದ ಮೇಲ್ಮನವಿ ಪ್ರಾಧಿಕಾರಗಳ ಆದೇಶವನ್ನು ರದ್ದುಗೊಳಿಸಿದೆ.
ವಿಚಾರಣೆಯನ್ನು ಪುನಃ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದ್ದು, ‘ಷೋಕಾಸ್ ನೋಟಿಸ್ ನೀಡಿಕೆಯ ಹಂತದಿಂದ ಹೊಸದಾಗಿ ವಿಚಾರಣೆ ನಡೆಸಬೇಕು. ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ ಎಲ್ಲ ಪ್ರಕ್ರಿಯೆಗಳನ್ನೂ ಅನುಸರಿಸಬೇಕು‘ ಎಂದು ನಿರ್ದೇಶಿಸಿದೆ.
ಪ್ರಕರಣವೇನು?: ಅರ್ಜಿದಾರರು ನಗರದ ವಿಕ್ರಂ ಇನ್‌ವೆಸ್ಟ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು. ವಿಕ್ರಂ ಇನ್‌ವೆಸ್ಟ್‌ಮೆಂಟ್ ವಿರುದ್ಧ 2018ರಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿತ್ತು.
‘ಈ ಪ್ರಕರಣದಲ್ಲಿ ನನ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಈ ವಿಷಯದಲ್ಲಿ ಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಆದರೂ ಏಜೆನ್ಸಿ ನನ್ನನ್ನು ಏಜೆಂಟ್ ಸ್ಥಾನದಿಂದ ವಜಾ ಮಾಡಿದೆ’ ಎಂದು ಆಕ್ಷೇಪಿಸಿದ್ದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.