ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಸಾಗಣೆಗೆ ಪರವಾನಗಿ ಕಡ್ಡಾಯ; ಗೋಹತ್ಯೆ ನಿಷೇಧ ಕರಡು ನಿಯಮ ಪ್ರಕಟ

Last Updated 16 ಜನವರಿ 2021, 16:09 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ಕೃಷಿ ಉದ್ದೇಶಕ್ಕೆ ಸ್ಥಳೀಯವಾಗಿ 15 ಕಿಲೋಮೀಟರ್‌ ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು ಮತ್ತು ಎರಡು ಕರುಗಳನ್ನು ಮಾತ್ರ ಕೊಂಡೊಯ್ಯಬಹುದು. ರಾತ್ರಿ ವೇಳೆ ಗೋವುಗಳ ಸಾಗಣೆ ಸಂಪೂರ್ಣ ನಿಷೇಧ.

– ಇವು ಗೋಹತ್ಯೆ ನಿಷೇಧ ಕಾಯ್ದೆ–2020ಕ್ಕೆ ರಾಜ್ಯದ ಪಶುಸಂಗೋಪನಾ ಇಲಾಖೆ ರೂಪಿಸಿರುವ ಕರಡು ನಿಯಮಗಳಲ್ಲಿ ಇರುವ ಪ್ರಮುಖ ಅಂಶಗಳು. ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಸಾಗಿಸುವಾಗಲೂ ಸಾಗಣೆಯ ಪರವಾನಗಿ ಹೊಂದಿರಬೇಕಾದುದು ಕಡ್ಡಾಯ. ಅದರೊಂದಿಗೆ ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಹೊಂದಿರಬೇಕು.

ಜಾನುವಾರುಗಳ ಮಾಲೀಕರು ಮಾಲೀಕತ್ವದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಸಾಗಣೆ ಪರವಾನಗಿ ಪಡೆಯುವುದು ಕಡ್ಡಾಯ. ಪರವಾನಗಿಯ ಹೊರತಾಗಿ ಗೋಸಾಗಣೆಗೆ ವಾಹನಗಳ ಮಾಲೀಕರು ಸಮ್ಮತಿ ಸೂಚಿಸುವಂತಿಲ್ಲ. ನಿಯಮಗಳ ಉಲ್ಲಂಘನೆಯಾದಲ್ಲಿ ಗೋವುಗಳ ಮಾಲೀಕರು ಅಥವಾ ಅವರ ಪ್ರತಿನಿಧಿ, ವಾಹನ ಮಾಲೀಕರು, ಜತೆಗಿರುವ ಸಿಬ್ಬಂದಿ ಕೂಡ ಹೊಣೆಗಾರರಾಗುತ್ತಾರೆ ಎಂಬ ಅಂಶ ಕರಡು ನಿಯಮಗಳಲ್ಲಿದೆ.

ವಾಹನದಲ್ಲಿರುವ ಗೋವುಗಳ ಸಂಖ್ಯೆ, ಕಳುಹಿಸಿದವರು ಮತ್ತು ಪಡೆಯುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ದೊಡ್ಡ ಅಕ್ಷರಗಳಲ್ಲಿ ವಾಹನದ ಮೇಲೆ ಬರೆಯುವುದು ಕಡ್ಡಾಯ. ಜಾನುವಾರುಗಳನ್ನು ಎಂಜಿನ್‌ ಕಡೆ ಮುಖ ಮಾಡಿಯೇ ಕಟ್ಟಿರಬೇಕು. ಮೇವು ಮತ್ತು ನೀರು ಪೂರೈಸಿದ ಬಳಿಕವೇ ವಾಹನ ಹತ್ತಿಸಬೇಕು. ಆರು ತಿಂಗಳಿಗಿಂತಲೂ ಹೆಚ್ಚಿನ ಅವಧಿಯ ಗಬ್ಬದ ಹಸು ಅಥವಾ ಎಮ್ಮೆಗಳನ್ನು ಸಾಗಿಸುವಂತಿಲ್ಲ ಎಂಬ ನಿರ್ಬಂಧಗಳನ್ನು ವಿಧಿಸಲಾಗಿದೆ.

25 ಕಿ.ಮೀ. ವೇಗಮಿತಿ: ಗೋವುಗಳನ್ನು ಸಾಗಿಸುವ ವಾಹನವನ್ನು ಪ್ರತಿ ಗಂಟೆಗೆ 25 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಓಡಿಸುವಂತಿಲ್ಲ. ವಾಹನದೊಳಗೆ ಗೋವುಗಳು ಪ್ರತ್ಯೇಕವಾಗಿ ಇರುವುದಕ್ಕೆ ಪೂರಕವಾಗಿ ವಿಭಜನಾ ವ್ಯವಸ್ಥೆ ಮಾಡಿರಬೇಕು. 100 ಕೆ.ಜಿ.ಗಿಂತ ಕಡಿಮೆ ತೂಕ ಹೊಂದಿದ್ದಲ್ಲಿ 1.5 ಚದರ ಮೀಟರ್‌ ಮತ್ತು 100 ಕೆ.ಜಿ.ಗಿಂತ ಹೆಚ್ಚು ತೂಕವಿದ್ದಲ್ಲಿ 2 ಚದರ ಮೀಟರ್‌ ಸ್ಥಳಾವಕಾಶ ಕಲ್ಪಿಸಬೇಕು.

ಸಾಗಣೆಯ ಸಮಯದಲ್ಲಿ ಗೋವುಗಳ ಸಾವು ಸಂಭವಿಸಿದರೆ ಮರಣೋತ್ತರ ಪರೀಕ್ಷೆ ನಡೆಸಿ, ವರದಿ ಪಡೆದ ಬಳಿಕವೇ ಮೃತದೇಹವನ್ನು ಸಾಗಿಸಬಹುದು.

ರಾತ್ರಿ ಸಾಗಣೆ ಇಲ್ಲ: ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ಗೋವುಗಳ ಸಾಗಣೆಗೆ ಅವಕಾಶವಿಲ್ಲ. ಬೇಸಿಗೆಯ ಕಾಲದಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ಅವಧಿಯಲ್ಲೂ ಗೋವುಗಳ ಸಾಗಣೆಗೆ ನಿಷೇಧ ಹೇರುವ ಪ್ರಸ್ತಾವ ಕರಡು ನಿಯಮಗಳಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT