ಗುರುವಾರ , ಸೆಪ್ಟೆಂಬರ್ 16, 2021
24 °C
ಯಡಿಯೂರಪ್ಪನವರೇ ಸಿ.ಎಂ ಆಗಿ ಮುಂದುವರಿಯಲಿ:

ಲಿಂಗಾಯತರ ಮತ ಕಳೆದುಕೊಳ್ಳಬೇಕಾಗುತ್ತದೆ: ನಿಡುಮಾಮಿಡಿ ಸ್ವಾಮೀಜಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕ ಬಿ.ಎಸ್. ಯಡಿಯೂರಪ್ಪ. ಅವರು ಕೇವಲ ಲಿಂಗಾಯತ ನಾಯಕರಾಗಲಿಲ್ಲ. ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಕನಿಷ್ಠ ಆರು ತಿಂಗಳವರೆಗಾದರೂ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಿ, ನಂತರ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳಿ’ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿದರು.

ನಗರದಲ್ಲಿ ಭಾನುವಾರ 50ಕ್ಕೂ ಹೆಚ್ಚು ಸ್ವಾಮೀಜಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ರಾಜ್ಯದ ಮಠಾಧೀಶರ ಆಗ್ರಹ. ಬಿಜೆಪಿ ವರಿಷ್ಠರು ಮಠಾಧೀಶರ ಮಾತಿಗೆ ಬೆಲೆ ಕೊಡಬೇಕು’ ಎಂದರು.

‘ಕೇರಳದಲ್ಲಿ 75 ವರ್ಷ ವಯಸ್ಸು ಮೀರಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ, ಬಿಜೆಪಿಯು ಚುನಾವಣೆ ಎದುರಿಸಿತ್ತು. ಆದರೆ, ವಯಸ್ಸಾಯಿತು ಎಂಬ ಕಾರಣ ನೀಡಿ ಯಡಿಯೂರಪ್ಪನವರನ್ನು ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪಕ್ಷವು ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. ಯಡಿಯೂರಪ್ಪನವರಿಗೆ ಸಾಟಿಯಾಗಬಲ್ಲ ಮತ್ತೊಬ್ಬ ನಾಯಕ ಸದ್ಯ ರಾಜ್ಯ ಬಿಜೆಪಿಯಲ್ಲಿ ಇಲ್ಲ’ ಎಂದೂ ಹೇಳಿದರು.

‘ಸರ್ಕಾರದ ರಚನೆಯ ಸಂದರ್ಭ ದಲ್ಲಿ ಯಡಿಯೂರಪ್ಪ ಅಪಕೀರ್ತಿಗೆ ಒಳಗಾಗಿದ್ದರು. ನಂತರ, ಅತ್ಯಂತ ದಕ್ಷತೆಯಿಂದ, ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ನೆರೆ, ಬರ ಹಾಗೂ ಕೋವಿಡ್‌ನಂತಹ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಈಗ ಕೋವಿಡ್‌ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಅವಶ್ಯಕತೆಯಾದರೂ ಇದೆಯಾ’ ಎಂದರು.

‘ಯಡಿಯೂರಪ್ಪನವರನ್ನು ಬದಲಿಸಿದರೆ ಅಥವಾ ಅವರ ನಂತರ ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ಬಿಜೆಪಿಯು ಮುಂದಿನ ಚುನಾವಣೆಗಳಲ್ಲಿ ಲಿಂಗಾಯತರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ ನಿಡುಮಾಮಿಡಿ ಶ್ರೀ, ‘ಇದು ಧರ್ಮದ ಸಭೆ, ರಾಜಕೀಯ ಸಭೆ ಅಲ್ಲ’ ಎಂದೂ ಸ್ಪಷ್ಟಪಡಿಸಿದರು.

ವೀರಶೈವ ಲಿಂಗಾಯತರಿಗೆ ನೀಡಿ: ‘ಯಡಿಯೂರಪ್ಪನವರನ್ನು ಬದಲಿಸುವುದು ಖಚಿತ ಎಂದಾದರೆ, ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಈ ಸಮುದಾಯದ ನಾಯಕರ ಪೈಕಿ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ವಿ.ಸೋಮಣ್ಣ, ಮಾಧುಸ್ವಾಮಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಲು ಸಮರ್ಥರಿದ್ದಾರೆ’ ಎಂದು ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಬಂದಿದ್ದ ಸ್ವಾಮೀಜಿಗಳು ಸಭೆಯಲ್ಲಿ ಇದ್ದರು.

***

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಮಾಡಿದಂತೆ ರಾಜ್ಯದಲ್ಲಿಯೂ ಮಠಾಧೀಶರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು

- ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮುಷ್ಟೂರು ಮಠ

***

ಸಿ.ಎಂ. ಬದಲಾವಣೆ; ವರಿಷ್ಠರ ನಿರ್ಧಾರದಲ್ಲಿ ಗೊಂದಲ- ಶೆಟ್ಟರ್

ಹುಬ್ಬಳ್ಳಿ: ‘ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ವರಿಷ್ಠರ ನಿರ್ಧಾರದಲ್ಲಿ ಇನ್ನೂ ಗೊಂದಲಗಳಿವೆ. ಈವರೆಗೆ ಯಾವುದೇ ಸ್ಪಷ್ಟ ಸೂಚನೆ ಅವರಿಂದ ಬಂದಿಲ್ಲ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವರಿಷ್ಠರು ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ ಎಂದು ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಆದಷ್ಟು ಬೇಗ ಗೊಂದಲ ಬಗೆಹರಿಯಲಿದೆ’ ಎಂದರು. ‘75 ವರ್ಷ ಮೇಲ್ಪಟ್ಟವರು ಅಧಿಕಾರದಲ್ಲಿ ಇರಬಾರದು ಎಂದು ಬಿಜೆಪಿ ತತ್ವ ಸಿದ್ಧಾಂತದಲ್ಲಿ ಎಲ್ಲಿಯೂ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರು 75 ವರ್ಷ ಆದ ಮೇಲೆಯೇ ಈ ಅವಧಿಗೆ ಮುಖ್ಯಮಂತ್ರಿಯಾಗಿದ್ದು’ ಎಂದು ಹೇಳಿದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬಸವರಾಜ ಬೊಮ್ಮಾಯಿ ಒಂದೇ ಕ್ಷೇತ್ರದವರು. ಅವರು ಆಗಾಗ ಭೇಟಿ ಆಗುತ್ತಲೇ ಇರುತ್ತಾರೆ. ಈ ಹಿಂದೆಯೂ ಅವರು ಸಾಕಷ್ಟು ಬಾರಿ ಭೇಟಿಯಾಗಿದ್ದಾರೆ. ಅವರ ಈಗಿನ ಭೇಟಿಯನ್ನು ಪಾಕಿಸ್ತಾನ, ಭಾರತದವರು ಒಬ್ಬರನ್ನೊಬ್ಬರು ಭೇಟಿಯಾದ ಹಾಗೆ ಬಿಂಬಿಸಲಾಗುತ್ತಿದೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು