ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಕವಚ ಉದ್ಯಮಕ್ಕಿಲ್ಲ ಅಭಯ | ಅಭದ್ರತೆಯಲ್ಲೇ ಕೆಲಸ: ಸಿಗದ ಸರ್ಕಾರದ ನೆರವು

Last Updated 5 ಮಾರ್ಚ್ 2023, 0:30 IST
ಅಕ್ಷರ ಗಾತ್ರ

ಕಲಬುರಗಿ: ದೇಶದ ವಾಣಿಜ್ಯ ಚಟುವಟಿಕೆಯ ಬೆನ್ನೆಲುಬಾದ ಲಾರಿ ಉದ್ಯಮಕ್ಕೆ ಪೂರಕವಾಗಿ ರಾಜ್ಯದ ಬೀದರ್‌, ಬೆಳಗಾವಿ, ದಾವಣಗೆರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ಲಾರಿ ಕವಚ ನಿರ್ಮಾಣ ಘಟಕಗಳಿವೆ. ಆದರೆ, ಅವುಗಳಿಗೆ ಭರಪೂರ ಭರವಸೆಗಳು ಹೊರತುಪಡಿಸಿ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ, ಉತ್ತೇಜನ, ನೆರವು ಸಿಕ್ಕಿಲ್ಲ.

ತಮಿಳುನಾಡಿನ ನಾಮಕ್ಕಲ್, ತಿರುಚಾಂಗೂರು ಮತ್ತು ಆಂಧ್ರಪ್ರದೇಶದ ವಿಜಯವಾಡಕ್ಕೆ ಪೈಪೋಟಿ ಒಡ್ಡಿ ದಕ್ಷಿಣ ಭಾರತದಲ್ಲಿ ಮುಂಚೂಣಿಗೆ ಬರುವ ಸಾಮರ್ಥ್ಯ ರಾಜ್ಯದ ಲಾರಿ ನಿರ್ಮಿಸುವ ಉದ್ಯಮಕ್ಕೆ ಇದೆ. ಆದರೆ, ಸರ್ಕಾರದ ಶ್ರೀರಕ್ಷೆಯ ಕೊರತೆ, ಮೂಲಸೌಲಭ್ಯ ಕಲ್ಪಿಸುವತ್ತ ನಿರ್ಲಕ್ಷ್ಯ, ಉದ್ಯೋಗ ಅಭದ್ರತೆ ಎಲ್ಲವೂ ಹಿನ್ನಡೆಗೆ ಎಡೆ ಮಾಡಿಕೊಟ್ಟಿವೆ.

ಲಾರಿ ಕವಚ ನಿರ್ಮಾಣ ಘಟಕಗಳು ರಾಜ್ಯವ್ಯಾಪಿ ವಿಸ್ತರಣೆ ಆಗದಿರಲು ಇನ್ನಷ್ಟು ಕಾರಣಗಳಿವೆ. ಆಸಕ್ತರಿಗೆ ಜಮೀನು ಅಥವಾ ಮನೆ ಆಸ್ತಿ ಪತ್ರವಿಲ್ಲದೇ ಬ್ಯಾಂಕುಗಳಿಂದ ಸುಲಭವಾಗಿ ಸಾಲ ಸಿಗುವುದಿಲ್ಲ. ಹೆಚ್ಚು ಬಡ್ಡಿ ತೆತ್ತು ಹಣಕಾಸು ಸಂಸ್ಥೆಗಳಿಗೆ ಪಡೆಯುವ ಸಾಲವನ್ನು ತೀರಿಸಲು ಆಗುವುದಿಲ್ಲ. ಜೊತೆಗೆ ಅನಕ್ಷರತೆ, ಅರಿವು ಮತ್ತು ಮಾರ್ಗದರ್ಶನದ ಕೊರತೆಯೂ ಇದೆ. ಹೀಗಾಗಿ ಕೊನೆಗೆ ಗ್ಯಾರೇಜಿನ ಚೌಕಟ್ಟಿಗೆ ಉದ್ಯಮವು ಸೀಮಿತಗೊಳ್ಳುತ್ತದೆ.

ಘಟಕಗಳಲ್ಲಿ ಲಾರಿ ಕವಚ ನಿರ್ಮಾಣ ಅಷ್ಟೇ ಅಲ್ಲ, ಗಾಜು ಅಳವಡಿಕೆ, ಸೀಟು ತಯಾರಿಕೆ, ವೆಲ್ಡಿಂಗ್, ಗಿಯರ್ ಬಾಕ್ಸ್ ಬದಲಿಸುವಿಕೆ, ಎಂಜಿನ್ ಆಯಿಲ್ ಹಾಕುವುದು, ಚಕ್ರಗಳಿಗೆ ಗ್ರೀಸ್ ಹಾಕುವುದು, ಲಾರಿಯ ಕ್ಯಾಬಿನ್‌ನಲ್ಲಿ ಬೆಳಕಿನ ವ್ಯವಸ್ಥೆ ಮಾಡುವ ಕೆಲಸಗಳು ಆಗುತ್ತವೆ. ಅದಕ್ಕಾಗಿ ಕಾರ್ಮಿಕರು ಇಡೀ ದಿನ ಶ್ರಮಿಸುತ್ತಾರೆ. ಅತ್ಯುತ್ತಮ ಕವಚವನ್ನು ನಿರ್ಮಿಸಿ ಕಾರ್ಮಿಕರು ಲಾರಿಗಳನ್ನು ಗಟ್ಟಿಮುಟ್ಟು ಮಾಡುತ್ತಾರೆ. ಆದರೆ, ತಮ್ಮ ಬದುಕನ್ನು ಗಟ್ಟಿ ಮಾಡಿಕೊಳ್ಳಲು ಅವರು ಸೋತು ಬಿಡುತ್ತಾರೆ. ಇಂತಹ 13,000 ಕಾರ್ಮಿಕರು ರಾಜ್ಯದ ವಿವಿಧೆಡೆ ಇದ್ದಾರೆ. ಎಲ್ಲರೂ ಅಸಂಘಟಿತ ವಲಯದ ವ್ಯಾಪ್ತಿಗೆ ಬರುವ ಕಾರಣ ಯಾವುದೇ ರೀತಿಯ ಸೌಲಭ್ಯ ಅವರಿಗೆ ಸಿಗುವುದಿಲ್ಲ. ಒಗ್ಗಟ್ಟಿಲ್ಲದ ಕಾರಣದಿಂದ ಹಕ್ಕು ಚಲಾಯಿಸಲು ಕೂಡ ಅವರಿಗೆ ಆಗುವುದಿಲ್ಲ.

ಲಾರಿ ಕವಚ ನಿರ್ಮಾಣ ಘಟಕಗಳು ಉತ್ತಮವೆಂದು ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಖಂಡಿತ ಇಲ್ಲ. ಅಲ್ಲಿ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಶೌಚಾಲಯದ ವ್ಯವಸ್ಥೆಯಿಲ್ಲ. ಅವಘಡ ಸಂಭವಿಸಿ, ಕಾರ್ಮಿಕರು ಗಾಯಗೊಂಡರೆ ತಕ್ಷಣಕ್ಕೆ ಚಿಕಿತ್ಸೆಯೂ ಸಿಗುವುದಿಲ್ಲ. ಯಾವುದೇ ಕ್ಷಣ ಕೆಲಸ ಕೆಲಸ ಕಳೆದುಕೊಳ್ಳಬಹುದು ಎಂಬ ಭೀತಿಯು ಶ್ರಮಿಕರಲ್ಲಿ ಸದಾ ಕಾಡುತ್ತದೆ.

‘ಬಸವಕಲ್ಯಾಣದ ಆಟೊನಗರದಲ್ಲಿ ನಮ್ಮ ರಾಜ್ಯದ್ದು ಅಲ್ಲದೇ ಮಹಾರಾಷ್ಟ್ರ, ತೆಲಂಗಾಣದ ಲಾರಿಗಳಿಗೂ ಕವಚ ಕಟ್ಟುತ್ತೇವೆ. ಒಂದು ಲಾರಿಗೆ ಕವಚ ಕಟ್ಟಲು 15 ದಿನ ಬೇಕು. ₹ 4.5 ಲಕ್ಷದಿಂದ ₹ 8 ಲಕ್ಷ ತಗಲುತ್ತದೆ. ಸೌಕರ್ಯ ಕೊರತೆ, ಅವ್ಯವಸ್ಥೆ, ಅಭದ್ರತೆ ನಡುವೆ ಕೆಲಸ ಮಾಡುತ್ತೇವೆ’ ಎನ್ನುತ್ತಾರೆ ಲಾರಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಶಿವರಾಜ ಜಮಾದಾರ.

‘ಘಟಕಗಳು ಸುಸಜ್ಜಿತವಾಗಿಲ್ಲ. ಮಳೆಯಾದರಂತೂ ಎಲ್ಲೆಡೆ ಕೆಸರು ಆವರಿಸಿಕೊಳ್ಳುತ್ತದೆ. ಸಿಮೆಂಟ್ ರಸ್ತೆಗಳು ಇರದ ಕಾರಣ ದೂಳು ಎಲ್ಲೆಡೆ ವ್ಯಾಪಿಸುತ್ತದೆ. ನಿಯಮಿತ ವಿದ್ಯುತ್ ಪೂರೈಕೆ ಇಲ್ಲ. ಲಾರಿ ಮಾಲೀಕರು ಮತ್ತು ಚಾಲಕರಿಗೆ ಅಷ್ಟೇ ಅಲ್ಲ, ನಮಗೂ ಕೂಡ ಇಲ್ಲಿ ತಂಗಲು ಸೂಕ್ತ ವಿಶ್ರಾಂತಿ ಗೃಹಗಳಿಲ್ಲ’ ಎಂದು ಅವರು ನೊಂದು ನುಡಿಯುತ್ತಾರೆ.

ಲಾರಿ ಕವಚ ನಿರ್ಮಾಣ ಘಟಕದಲ್ಲಿ ವರ್ಷಗಳಿಂದ ಕೆಲಸ ಮಾಡಿದರೂ ಕಾರ್ಮಿಕರ ಜೀವನ ಸುಧಾರಿಸಿಲ್ಲ. ಬಹುತೇಕರ ಬಳಿ ಕಾರ್ಮಿಕ ಇಲಾಖೆಯ ಕಾರ್ಡು ಇಲ್ಲ. ‘ಕೆಲಸ ಮಾಡಿದರಷ್ಟೇ ಕೂಲಿ’ ಎಂಬ ಅಲಿಖಿತ ನಿಯಮ ಜಾರಿಯಲ್ಲಿರುವ ಕಾರಣ ಕಾರ್ಮಿಕರು ಅನಾರೋಗ್ಯ ಮತ್ತು ಕೌಟಂಬಿಕ ಸಮಸ್ಯೆ ನಡುವೆಯೂ ಪ್ರತಿ ದಿನ ಕೆಲಸಕ್ಕೆ ಹಾಜರಾಗಬೇಕು. ಒಂದು ದಿನ ಗೈರಾದರೂ ಕೂಲಿ ಸಿಗುವುದಿಲ್ಲ.

‘ಅನಾರೋಗ್ಯ ಸಮಸ್ಯೆಯಿಂದ ಒಂದು ವಾರ ಕೆಲಸಕ್ಕೆ ಹಾಜರಾಗರಲಿಲ್ಲ. ಅಷ್ಟೂ ದಿನಗಳ ಕೂಲಿ ಸಿಗಲಿಲ್ಲ. ಲಾರಿ ಮಾಲೀಕರು ಕೊಟ್ಟ ಹಣದಲ್ಲೇ ಸಂಸಾರ ನಿರ್ವಹಿಸಬೇಕು. ನಮ್ಮಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದು ನಿತ್ಯ ಪ್ರಾರ್ಥಿಸುತ್ತೇವೆ. ಇಡೀ ದಿನ ದುಡಿದರೂ ಕೈಗೆ ₹ 300 ರಿಂದ ₹ 500 ಮಾತ್ರ ಸಿಗುತ್ತದೆ’ ಎನ್ನುತ್ತಾರೆ ಮೆಕಾನಿಕ್ ರಫೀಕ್. ಅವರು ಹತ್ತಕ್ಕೂ ಹೆಚ್ಚು ವರ್ಷಗಳಿಂದ ಅವರು ಬಸವಕಲ್ಯಾಣದ ಆಟೊನಗರದಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಅವಘಡ ಸಂಭವಿಸಿ, ಯಾರಾದರೂ ಗಾಯಗೊಂಡರೆ ಚಿಕಿತ್ಸೆ ಕೊಡಿಸಲು 80 ಕಿ.ಮೀ. ದೂರದಲ್ಲಿರುವ ಜಿಲ್ಲಾ ಕೇಂದ್ರ ಬೀದರ್ ಅಥವಾ ಕಲಬುರಗಿಗೆ ಕರೆದೊಯ್ಯಬೇಕು. ಇಲ್ಲದಿದ್ದರೆ, ಮಹಾರಾಷ್ಟ್ರದ ಉಮರ್ಗಾ ಅಥವಾ ಸೊಲ್ಲಾಪುರಕ್ಕೆ ಹೋಗಬೇಕು. ಲಾರಿ ಎಂಜಿನ್ ಮೈಮೇಲೆ ಬಿದ್ದು ಕಾರ್ಮಿಕ ಮೃತಪಟ್ಟ, ಅಂಗವೈಕಲ್ಯಕ್ಕೆ ತುತ್ತಾದ ಘಟನೆಗಳು ಹಲವು ನಡೆದಿವೆ. ತುರ್ತು ಚಿಕಿತ್ಸೆ ಪಡೆಯಲು ಸಮೀಪದಲ್ಲಿ ಎಲ್ಲಿಯೂ ಆಸ್ಪತ್ರೆಯಿಲ್ಲ’ ಎಂದು ಕಾರ್ಮಿಕರು ದನಿಗೂಡಿಸುತ್ತಾರೆ.

‘ಬಸವಕಲ್ಯಾಣದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಬೇಕು. ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಕೊಟ್ಟ ಮಾದರಿಯಲ್ಲೇ ಮದುವೆ ಖರ್ಚು, ಮಕ್ಕಳ ಶಾಲಾ ಶಿಕ್ಷಣಕ್ಕೆ ಸಾಲ ನೀಡಬೇಕು. ಅವಘಡದಿಂದ ಮೃತಪಟ್ಟಾಗ, ಸರ್ಕಾರ ಪರಿಹಾರ ನೀಡಬೇಕು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವಂತಹ ಯೋಜನೆ ಜಾರಿಗೊಳಿಸಬೇಕು’ ಎಂಬ ಬೇಡಿಕೆ ಅವರದ್ದು.

ಭದ್ರತೆ ಕೊರತೆ; ಕಳವು ಭೀತಿ

ಲಾರಿ ಕವಚ ನಿರ್ಮಾಣ ಘಟಕಗಳ ಆವರಣದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲ. ಬಹುತೇಕ ಗ್ಯಾರೇಜುಗಳಿಗೆ ಗಟ್ಟಿಯಾದ ಬಾಗಿಲುಗಳಿಲ್ಲ. ಆಗಾಗ್ಗೆ ಕಳವು ಮತ್ತು ಹಲ್ಲೆ ಪ್ರಕರಣಗಳು ನಡೆಯುತ್ತವೆ. ರಾತ್ರಿ ವೇಳೆ ಗ್ಯಾರೇಜು ಗಳಲ್ಲಿ ಇರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಕಳವು ಆಗುತ್ತವೆ.

‘ಹೊರರಾಜ್ಯಗಳ 500ರಿಂದ 600 ಲಾರಿಗಳು ಇಲ್ಲಿ ಸಂಚರಿಸುತ್ತವೆ. ರಾತ್ರಿ ಬ್ಯಾಟರಿ, ಟೈರ್‌ ಕಳವು ಆಗುತ್ತವೆ. ಭದ್ರತೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ಆರಂಭಿಸಲು ಸರ್ಕಾರಕ್ಕೆ ಕೋರಿದ್ದೇವೆ. ಭದ್ರತೆ ಕಲ್ಪಿಸುವಂತೆ ಮನವಿ ಮಾಡಿದ್ದೇವೆ. ಆದರೆ ಸರ್ಕಾರದಿಂದ ಇನ್ನೂ ಸ್ಪಂದನೆ ದೊರಕಿಲ್ಲ’ ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಹಾಗೂ ಟ್ರಾನ್ಸ್‌ಪೋರ್ಟ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳುತ್ತಾರೆ.

ಕೊರೊನಾ ಆವರಿಸಿಕೊಳ್ಳು ವುದಕ್ಕೂ ಮುಂಚಿನ ದಿನಗಳಲ್ಲಿ ಕಾರ್ಮಿಕರು ಸವಾಲುಗಳನ್ನು ಎದುರಿಸಿ ಕೊಂಡು ಪರಿಸ್ಥಿತಿ ನಿಭಾಯಿಸುತ್ತಿದ್ದರು. ಆದರೆ, ಕೊರೊನಾದ ಛಾಯೆ ವ್ಯಾಪಿಸಿದ ಬಳಿಕ ಅವರು ಸಂಕಷ್ಟದ ಸುಳಿಯಲ್ಲಿ ಸಿಲುಕಿದರು. ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಸಾಧ್ಯವಾಗುತ್ತಿಲ್ಲ.

ಸದ್ಯದ ಪರಿಸ್ಥಿತಿಯನ್ನು ವಿವರಿಸುವ ಬೆಳಗಾವಿಯ ಲಾರಿ ಬಾಡಿ ಬಿಲ್ಡರ್‌ ಅಸೋಸಿಯೇಷನ್‌ ಅಧ್ಯಕ್ಷ ಎಲ್‌.ಎಸ್‌.ಗೋಮನ್ನಾಚೆ, ‘ಕೊರೊನಾ ಬರುವ ದಿನಗಳಿಗೂ ಮೊದಲು ಸಮಯ ಸಾಲದಷ್ಟು ಕೆಲಸ ಇರುತ್ತಿತ್ತು. ಆದರೆ, ಎರಡು ವರ್ಷಗಳಿಂದ ಹೊರರಾಜ್ಯಗಳಿಂದ ಬರುವ ಲಾರಿಗಳ ಸಂಖ್ಯೆ ಕಡಿಮೆಯಾಗಿದೆ. ಅರ್ಧದಷ್ಟು ವಹಿವಾಟು ಕಡಿಮೆಯಾಗಿದೆ. ಬದುಕು ಸಾಗಿಸುವುದೇ ಕಷ್ಟವಾಗಿದೆ’ ಎನ್ನುತ್ತಾರೆ.

ಗ್ಯಾರೇಜಿನಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿಯಂತೂ ಇನ್ನೂ ಶೋಚನೀಯ. ‘ನಾನು 32 ವರ್ಷಗಳಿಂದ ವೈರಿಂಗ್‌ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ₹ 30 ಸಾವಿರ ಸಂಪಾದಿಸುತ್ತಿದ್ದೆ. ಈಗ ₹ 15 ಸಾವಿರದಷ್ಟು ಕೂಲಿ ಸಿಗುತ್ತಿಲ್ಲ’ ಎಂದು ಹಿರೇಬಾಗೇವಾಡಿಯ ಕಾರ್ಮಿಕ ಮುಷ್ತಾಕ್‌ ಮೋಮಿನ್‌ ಬೇಸರದಿಂದ ಹೇಳುತ್ತಾರೆ.

ಲಾರಿ ಉದ್ಯಮಕ್ಕೆ ಏನೇನು ಬೇಕು?

l ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 50 ಎಕರೆಗೂ ಹೆಚ್ಚು ಜಾಗ

l ವಿವಿಧೆಡೆಯಿಂದ ಬಂಡವಾಳ ಹೂಡಿಕೆಗೆ ಉತ್ತೇಜನ

l ಬ್ಯಾಂಕು, ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ

l ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಸರ್ಕಾರಿ ಯೋಜನೆಗಳು

l ಮೂಲಸೌಕರ್ಯ ಪೂರೈಕೆಗೆ ಸರ್ಕಾರ ಆದ್ಯತೆ ನೀಡಬೇಕು

l ಲಾರಿ ನಿರ್ಮಾಣ ಸ್ಥಳದಲ್ಲಿ ವಿಶ್ರಾಂತಿ ಸ್ಥಳ, ಚಿಕಿತ್ಸಾ ಸೌಲಭ್ಯ

l ಕಾರ್ಮಿಕರಿಗೆ ಅತ್ಯಾಧುನಿಕ ಕೌಶಲ ತರಬೇತಿ, ಮಾರ್ಗದರ್ಶನ

****

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ ಕವಚ ನಿರ್ಮಿಸಿಕೊಂಡರೆ ಮಾತ್ರ ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ನೋಂದಣಿ ಪ್ರಕ್ರಿಯೆ ನೆರವೇರುತ್ತದೆ. ಕೇಂದ್ರ ಭೂಸಾರಿಗೆ ಸಚಿವಾಲಯದ ಸೂಚನೆಯಂತೆಯೇ ಲಾರಿ ಕವಚಗಳನ್ನು ನಿರ್ಮಿಸಬೇಕು. ಅಂತಹ ಕವಚಗಳ ನಿರ್ಮಾಣಕ್ಕೆ ಕೆಲ ಘಟಕಗಳು ಮಾತ್ರ ಮಾನ್ಯತೆ ಪಡೆದಿವೆ.

ಮಂಗಳೂರು ನಗರದ ಆಸುಪಾಸಿನ ಉಜ್ಜೋಡಿ, ಎಕ್ಕೂರು, ವಾಮಂಜೂರು, ಅಡ್ಯಾರ್‌ ಮುಂತಾದ ಕಡೆ ಲಾರಿ ಕವಚ ನಿರ್ಮಿಸುವ 40ಕ್ಕೂ ಹೆಚ್ಚು ಘಟಕಗಳಿವೆ.

‘ಬಾಡಿಕೋಡ್‌’ (ಮಾನದಂಡಗಳನ್ನು ಪೂರೈಸಿದ ತಯಾರಿಕಾ ಸಂಸ್ಥೆಗೆ ಸಿಗುವ ಕೋಡ್) ಹೊಂದಿರದ ಗ್ಯಾರೇಜ್‌ನಲ್ಲಿ ನಿರ್ಮಿಸಲಾಗುವ ಲಾರಿಗಳ ನೋಂದಣಿ ಪ್ರಕ್ರಿಯೆ ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಗುವುದಿಲ್ಲ. ಇದರಿಂದ ಲಾರಿಗಳ ಕವಚಗಳನ್ನು ನಿರ್ಮಿಸುವ ಗ್ಯಾರೇಜುಗಳ ಮಾಲೀಕರು ಮತ್ತು ಕಾರ್ಮಿಕರು ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ.

‘ಇದೇ ಕಾರಣದಿಂದ ಕಾರ್ಮಿಕರ ಕೆಲಸ ದುರಸ್ತಿಗೆ ಮಾತ್ರ ಸೀಮಿತವಾಗಿದೆ’ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್‌ ಮಾಲೀಕರ ಸಂಘದ ಕಾರ್ಯದರ್ಶಿ ಕಿರಣ್‌ ಹೇಳುತ್ತಾರೆ.

‘ಬಾಡಿಕೋಡ್‌ ಮಾನ್ಯತೆ ಪಡೆದು ಸುಸಜ್ಜಿತ ಗ್ಯಾರೇಜು ನಿರ್ಮಿಸಲು ಅರ್ಧ ಎಕರೆ ಜಾಗ ಬೇಕು. ಅಷ್ಟು ಜಾಗ ಖರೀದಿಸಿ ಗ್ಯಾರೇಜು ನಿರ್ಮಿಸಲು ಭಾರಿ ಹಣ ಹೂಡಬೇಕು. ಇಲ್ಲಿನ ಲಾರಿ ನಿರ್ಮಾಣ ಘಟಕಗಳು ಸಣ್ಣಪುಟ್ಟವು. ಬಾಡಿ ಕೋಡ್‌ ಹೊಂದಿರದ ಇಲ್ಲಿನ ಗ್ಯಾರೇಜುಗಳಲ್ಲಿ ನಿರ್ಮಾಣವಾಗುವ ಲಾರಿಗಳನ್ನು ಬೇರೆ ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನೋಂದಣಿ ಆಗುತ್ತವೆ. ಆದರೆ ಇಲ್ಲಿನ ಆರ್‌ಟಿಒದಲ್ಲಿ ಇದಕ್ಕೆ ಅವಕಾಶ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ನಾಲ್ಕು ಅಥವಾ ಐದು ಕಡೆ ಭೂಮಿ ಒದಗಿಸಲಿ’

‘ರಾಜ್ಯದಲ್ಲಿ ಲಾರಿ ಕವಚ ನಿರ್ಮಾಣ ಕ್ಷೇತ್ರಕ್ಕೆ ಸರ್ಕಾರ ನೆರವು ನೀಡಿದರೆ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತವೆ. ಆದರೆ, ಈ ಬಗ್ಗೆ ಸರ್ಕಾರ ಯೋಚನೆ ಮಾಡಿಲ್ಲ’ ಎನ್ನುತ್ತಾರೆ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ.

‘ಬೆಂಗಳೂರು ಹೊರವಲಯ, ತುಮಕೂರು, ಬಳ್ಳಾರಿ, ಕಲಬುರಗಿ, ವಿಜಯಪುರ ಸೇರಿ ಹಲವೆಡೆ ತಲಾ 50 ಎಕರೆ ಭೂಮಿ ಇದಕ್ಕಾಗಿ ನೀಡಿ, ಉಪಕರಣ ಒದಗಿಸಿದರೆ ರಾಜ್ಯದ ಎಲ್ಲಾ ಲಾರಿ ಮಾಲೀಕರು ರಾಜ್ಯದಲ್ಲೇ ಕವಚ ನಿರ್ಮಿಸಿಕೊಳ್ಳುತ್ತಾರೆ. ಸಾವಿರಾರು ಕೋಟಿ ರೂಪಾಯಿ ಸರ್ಕಾರಕ್ಕೆ ಬರುತ್ತದೆ’ ಎನ್ನುತ್ತಾರೆ ಅವರು.

‘ಒಂದು ಲಾರಿ ಕವಚ ನಿರ್ಮಾಣಕ್ಕೆ 24 ಕಾರ್ಮಿಕರು ಬೇಕು. 9 ಸಾವಿರ ಲಾರಿಗಳಿಗೆ 24 ಜನರಂತೆ 2.16 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ತಮಿಳುನಾಡಿಗಿಂತ ಹೆಚ್ಚಿನ ಕಟ್ಟಿಗೆ ನಮ್ಮಲ್ಲಿ ಸಿಗುತ್ತದೆ. ಭೂಮಿ ಒದಗಿಸಿ ವಿದ್ಯುತ್ ಸಂಪರ್ಕ ನೀಡಿದರೆ, ಕವಚ ನಿರ್ಮಾಣ ಉದ್ಯಮ ನಮ್ಮ ರಾಜ್ಯದಲ್ಲೂ ಬೆಳೆಯುತ್ತದೆ’ ಎಂಬ ಸಲಹೆ ಅವರದ್ದು.

ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ವಿಜಯಕುಮಾರ್ ಸಿಗರನಹಳ್ಳಿ, ಪ್ರವೀಣಕುಮಾರ್‌ ಪಿ.ವಿ, ಡಿ.ಕೆ. ಬಸವರಾಜು, ಇಮಾಮ್‌ಹುಸೇನ್‌ ಗೂಡುನವರ, ಮಾಣಿಕ್ ಆರ್. ಭುರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT