ಮಹದಾಯಿ: ತ್ವರಿತ ವಿಚಾರಣೆಗೆ ಸಮ್ಮತಿ

ನವದೆಹಲಿ: ಮಹದಾಯಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ತಕರಾರು ಅರ್ಜಿಯನ್ನು ತ್ವರಿತ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.
ಮಹದಾಯಿ ಯೋಜನೆಯ ಕಾಮಗಾರಿಗೆ ಕೈಗೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಗೋವಾ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.
ಗೋವಾ ಸರ್ಕಾರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ ದೊಂಡ್, ‘ಗೋವಾದ ಮಹದಾಯಿ ವನ್ಯಜೀವಿ ಧಾಮದ ಪಕ್ಕದಲ್ಲಿನ ಜಲಮೂಲಗಳ ನೀರನ್ನು ಬಳಸಿಕೊಂಡು ಕಳಸಾ–ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕೆ ಗೋವಾ ಸರ್ಕಾರದ ತಕರಾರು ಇದೆ. ಈ ಬಗ್ಗೆ ಗೋವಾ ಮುಖ್ಯಮಂತ್ರಿಯವರು ಟ್ವೀಟ್ ಸಹ ಮಾಡಿದ್ದಾರೆ’ ಎಂದರು.
ಆಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ‘ಫೆಬ್ರುವರಿ 13ರಂದು ಅರ್ಜಿಯ ವಿಚಾರಣೆ ನಡೆಸಲು ಈಗಾಗಲೇ ಪಟ್ಟಿ ಮಾಡಲಾಗಿದೆ. ನಾನು ಈ ಅರ್ಜಿಯ ವಿಚಾರಣೆ ನಡೆಸಲು ಆಗುವುದಿಲ್ಲ. ಬೇರೊಂದು ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ’ ಎಂದರು.
ಆಗ ಗೋವಾ ಪರ ವಕೀಲರು, ‘ನದಿ ನೀರು ತಿರುವು ಕಾಮಗಾರಿಗೆ ಫೆಬ್ರುವರಿ 13ರೊಳಗೆ ಚಾಲನೆ ಸಿಗಲಿದೆ. ಕರ್ನಾಟಕ ಮುಖ್ಯಮಂತ್ರಿಯವರು ಈ ಕುರಿತು ಹೇಳಿಕೆ ನೀಡಿದ್ದಾರೆ’ ಎಂದು ಪೀಠದ ಗಮನ ಸೆಳೆದರು.
ನಂತರ ನ್ಯಾಯಪೀಠ, ಫೆಬ್ರುವರಿ 13ರೊಳಗೆ ಅರ್ಜಿಯ ವಿಚಾರಣೆಯನ್ನು ಪಟ್ಟಿ ಮಾಡಲು ಸಮ್ಮತಿಸಿತು.
ಮಹದಾಯಿ ಯೋಜನೆಯ ಪರಿಷ್ಜೃತ ಡಿಪಿಆರ್ ಅನ್ನು ಅನುಮೋದಿಸಿದ ಕೇಂದ್ರ ಜಲ ಆಯೋಗದ ತೀರ್ಮಾನವನ್ನು ಗೋವಾ ಸರ್ಕಾರ ಪ್ರಶ್ನಿಸಿದೆ. ಒಂದು ವೇಳೆ ಈ ಯೋಜನೆ ಅನುಷ್ಠಾನಗೊಂಡರೆ ಮಹದಾಯಿ ನದಿ ಬತ್ತಿ ಹೋಗಲಿದೆ ಹಾಗೂ ವನ್ಯಜೀವಿ ಧಾಮಕ್ಕೆ ಹಾನಿ ಆಗಲಿದೆ ಎಂದು ಗೋವಾ ದೂರಿದೆ. ಈ ಸಂಬಂಧ 122 ಪುಟಗಳ ದಾಖಲೆಯನ್ನು ಸುಪ್ರೀಂ ಕೋರ್ಟ್‌ಗೆ ಇದೇ 25ರಂದು ಸಲ್ಲಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.