ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದಿಕ್ಕು ತಪ್ಪಿಸಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಯತ್ನ: ರಮೇಶ ಜಾರಕಿಹೊಳಿ

Last Updated 27 ಜನವರಿ 2021, 11:24 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗಡಿ ವಿಷಯ ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಬುಧವಾರ ತಿರುಗೇಟು ನೀಡಿದರು.

ಗಡಿ ವಿವಾದ ಕುರಿತು ಡಾ. ದೀಪಕ್ ಪವಾರ್ ಬರೆದ ಮರಾಠಿ ಕೃತಿಯನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಬಿಡುಗಡೆ ಮಾಡಿದ ಉದ್ಧವ್, ‘ಕರ್ನಾಟಕ–ಮಹಾರಾಷ್ಟ್ರ ಗಡಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ’ ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಶಿವಸೇನಾದ ಕಾರ್ಯಸೂಚಿಗಳಿಗೆ ರಾಜ್ಯದಲ್ಲಿ ಮಹತ್ವ ನೀಡುವ ಅಗತ್ಯವಿಲ್ಲ’ ಎಂದರು.

‘ಶಿವಸೇನಾದವರಿಗೆ ಪ್ರಚೋದನೆ ನೀಡುವುದೇ ಮುಖ್ಯ ಕಾರ್ಯಸೂಚಿ. ಜನಪ್ರಿಯತೆ ಕುಗ್ಗುತ್ತಿರುವುದರಿಂದ ಕಂಗಾಲಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಗರು ಸೌಹಾರ್ದದಿಂದ ಇದ್ದೇವೆ. ನಮ್ಮಲ್ಲಿ ತಾರತಮ್ಯ ಇಲ್ಲ. ಎಲ್ಲ ರಂಗದಲ್ಲೂ ವಿಫಲವಾಗಿರುವ ಠಾಕ್ರೆ, ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಗಡಿ ವಿಚಾರವನ್ನು ಕೆದಕುತ್ತಿದ್ದಾರೆ. ಮಹಾಜನ ವರದಿಯನ್ನು ಈಗಾಗಲೇ ಒಪ್ಪಲಾಗಿದೆ. ಅದೇ ಅಂತಿಮ’ ಎಂದು ಹೇಳಿದರು.

ಗಡಿ ವಿಷಯದಲ್ಲಿ ಮಹಾರಾಷ್ಟ್ರದಲ್ಲಿ ವಿವಿಧ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ನಮ್ಮಲ್ಲೂ ಗಡಿ ವಿಚಾರದಲ್ಲಿ ಎಲ್ಲ ನಾಯಕರೂ ಒಂದೇ ಆಗಿದ್ದೇವೆ. ನಾಡು–ನುಡಿ ಕಾಯಲು ಬದ್ಧವಾಗಿದ್ದೇವೆ. ರಾಜ್ಯದಲ್ಲಿ ಗಡಿ ಉಸ್ತುವಾರಿ ಸಚಿವರನ್ನು ನೇಮಿಸುವ ಅಗತ್ಯವಿಲ್ಲ. ಗಡಿ ಸಂರಕ್ಷಣೆಗೆ ಇಡೀ ಸಚಿವ ಸಂಪುಟ ಬದ್ಧವಾಗಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲೂ ಸಮರ್ಥವಾಗಿ ನಿಭಾಯಿಸುತ್ತೇವೆ. ಮಹಾರಾಷ್ಟ್ರದಲ್ಲಿ ಗಡಿ ವಿವಾದ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT