ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಡ್ರಗ್ಸ್ ತಯಾರಿಕೆ: ಸಿಸಿಬಿ ದಾಳಿ, ₹2 ಕೋಟಿ ಮೌಲ್ಯದ ಡ್ರಗ್ಸ್‌ ವಶ

Last Updated 16 ಸೆಪ್ಟೆಂಬರ್ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ಬಾಡಿಗೆ ಮನೆಯಲ್ಲೇ ವ್ಯವಸ್ಥಿತ ಪ್ರಯೋಗಾಲಯ ಮಾಡಿಕೊಂಡು ಡ್ರಗ್ಸ್ ತಯಾರಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ₹ 2 ಕೋಟಿ ಮೌಲ್ಯದ ಎಂಡಿಎಂಎ ಜಪ್ತಿ ಮಾಡಿದ್ದಾರೆ.

‘ಎಲೆಕ್ಟ್ರಾನಿಕ್ ಸಿಟಿ ಒಂದನೇ ಹಂತದ ಬೆಟ್ಟದಾಸಪುರದ ಚಾಮುಂಡಿ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮನೆ ಸುತ್ತಮುತ್ತ ಓಡಾಡಿ ಮಾಹಿತಿ ಖಚಿತಪಡಿಸಿಕೊಂಡು ಬುಧವಾರ ದಾಳಿ ಮಾಡಲಾಯಿತು’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಪ್ರಯೋಗಾಲಯದಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ನೈಜೀರಿಯಾ ಪ್ರಜೆ ಜಾನ್‌ನನ್ನು ಬಂಧಿಸಲಾಗಿದೆ. ಲ್ಯಾಬ್‌ನಲ್ಲಿದ್ದ ರಾಸಾಯನಿಕ ಹಾಗೂ ಆಧುನಿಕ ಪರಿಕರಗಳನ್ನೂ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಆರೋಪಿ ಜಾನ್, ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ವಿದ್ಯಾಭ್ಯಾಸ, ಅದರ ಜೊತೆಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಲೀಕರಿಗೆ ಹೇಳಿದ್ದ. ಡ್ರಗ್ಸ್ ತಯಾರಿಕೆಯಲ್ಲಿ ಪರಿಣಿತನಾಗಿದ್ದ ಜಾನ್, ಮನೆಯ ಕೊಠಡಿಯಲ್ಲಿ ಆಧುನಿಕ ಪರಿಕರಗಳನ್ನು ಬಳಸಿಕೊಂಡು ಪ್ರಯೋಗಾಲಯ ಮಾಡಿಕೊಂಡಿದ್ದ.’

‘ಕಚ್ಚಾ ಸಾಮಗ್ರಿ, ರಾಸಾಯನಿಕ ಹಾಗೂ ಇತರೆ ವಸ್ತುಗಳನ್ನು ನಗರದ ಮಾರುಕಟ್ಟೆ ಮತ್ತು ಆನ್‌ಲೈನ್ ಮೂಲಕ ಖರೀದಿಸುತ್ತಿದ್ದ. ಪರಿಕರಗಳಲ್ಲಿ ಕಚ್ಚಾ ಸಾಮಗ್ರಿ ಹಾಗೂ ರಾಸಾಯನಿಕವನ್ನು ಸಂಸ್ಕರಿಸಿ ಎಂಡಿಎಂಎ ಡ್ರಗ್ಸ್ ತಯಾರಿಸುತ್ತಿದ್ದ. ದಾಳಿ ಸಂದರ್ಭದಲ್ಲೇ
ಪ್ರಯೋಗಾಲಯದಲ್ಲಿ 4 ಕೆ.ಜಿ ತೂಕದ ಎಂಡಿಎಂಎ ಡ್ರಗ್ಸ್ ಪತ್ತೆಯಾಯಿತು’ ಎಂದೂ ತಿಳಿಸಿದರು.

ಬೂಟಿನಲ್ಲಿ ಡ್ರಗ್ಸ್ ಸಾಗಣೆ: ‘ವ್ಯವಸ್ಥಿತ ಜಾಲದ ಮೂಲಕ ಆರೋಪಿಗಳು, ನಗರದಲ್ಲಿ ಡ್ರಗ್ಸ್ ಮಾರುತ್ತಿದ್ದರು.ಬೂಟಿನಲ್ಲಿ ಡ್ರಗ್ಸ್ ಬಚ್ಚಿಟ್ಟು ಕೊರಿಯರ್ ಮೂಲಕ ವಿದೇಶಗಳಿಗೂ ಕಳುಹಿಸುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ‌ ಖಾಸಗಿ ಕಂಪನಿ ಉದ್ಯೋಗಿಗಳು ಗ್ರಾಹಕರಾಗಿದ್ದರು. ಜಾಲದಲ್ಲಿ ಭಾಗಿಯಾಗಿದ್ದ ಕೆಲವರು ತಲೆಮರೆಸಿಕೊಂಡಿದ್ದಾರೆ. ಕೆಲವರು, ವಿದೇಶದಲ್ಲೂ ನೆಲೆಸಿದ್ದಾರೆ. ಇವರೆಲ್ಲರ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT