ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಶ್‌ ಸೋತಿದ್ದೇ ನನ್ನಿಂದ: ರವೀಂದ್ರ ಶ್ರೀಕಂಠಯ್ಯ

ಬೆಂಗಳೂರಿನ ಹೋಟೆಲ್‌ನಲ್ಲಿ ಗಣಿ ಮಾಲೀಕರಿಂದ ಹಣ ಪಡೆಯಲು ಸುಮಲತಾ ಯತ್ನ: ಆರೋಪ
Last Updated 10 ಜುಲೈ 2021, 6:44 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಅಂಬರೀಶ್‌ ನನ್ನನ್ನು ವಿರೋಧ ಮಾಡಿಕೊಂಡು ಸಂಸತ್‌ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದರು’ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ಅಧಿಕಾರಿಗಳ ಜತೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ‘ಅಂಬರೀಶ್‌ ಕಾಲದಲ್ಲೇ ಗಣಿ ಅಕ್ರಮ ಹೆಚ್ಚು ನಡೆದಿದೆ. ಅವರ ಹೆಸರು ಹೇಳಿಕೊಂಡು ಗೆದ್ದಿರುವ, ರಾಜಕಾರಣ ಮಾಡುತ್ತಿರುವ ಸುಮಲತಾ ಪತಿಯ ಕಾಲದಲ್ಲಿ ನಡೆದಿರುವ ಅಕ್ರಮಗಳ ನೈತಿಕ ಹೊಣೆ ಹೊರಬೇಕು. ಸಂಸತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಹಂಗರಹಳ್ಳಿ ಇತರೆಡೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ನಿಜ. 1995ರಿಂದ 2007ರ ವರೆಗೆ ಅವ್ಯಾಹತವಾಗಿ ಅಕ್ರಮ ನಡೆದಿದೆ. ಅಂಬರೀಶ್‌ ಸಂಸತ್‌ ಸದಸ್ಯರಾಗಿದ್ದಾಗ ಇಡೀ ಜಿಲ್ಲೆಯಲ್ಲಿ ಅಕ್ರಮ ನಡೆದಿದೆ. ಅಂಬರೀಶ್‌ ಬೆಂಬಲಿಗರು ಕೂಡ ಗಣಿಗಾರಿಕೆ ನಡೆಸುತ್ತಿದ್ದರು. ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡುವಂತೆ ಶಾಸಕರು ಸದನದಲ್ಲೇ ಒತ್ತಾಯಿಸಿದ್ದೇವೆ. ಗಣಿಗಾರಿಕೆ ನಡೆಯದಿದ್ದರೆ ಅಭಿವೃದ್ಧಿ ಕೆಲಸಗಳು ನಡೆಯುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಸುಮಲತಾ ದೇಶದ್ರೋಹಿ’ (ಮಂಡ್ಯ ವರದಿ): ಮಂಡ್ಯದಲ್ಲಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ‘ಸುಮಲತಾ ದೇಶದ್ರೋಹಿ’ ಎಂದು ಟೀಕಿಸಿದರು.

‘ಯಾವ ಆಧಾರ ಮೇಲೆ ನೀವು ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿದ್ದೀರಿ, ದೇಶದ ಗೋಪ್ಯತೆ ಕಾಪಾಡುವುದಾಗಿ ಪ್ರಮಾಣ ಮಾಡಿದ ನೀವು ರಾಷ್ಟ್ರೀಯ ಆಸ್ತಿಯಾಗಿರುವ ಕೆಆರ್‌ಎಸ್‌ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದು ಏಕೆ, ದೇಶ ವಿರೋಧಿ ಶಕ್ತಿಗಳು ನಿಮ್ಮ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಸುಮಲತಾ ಈಗ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಬೆಂಗಳೂರಿನ ಹೋಟೆಲ್‌ನಲ್ಲಿ ಕುಳಿತು ದಲ್ಲಾಳಿಗಳ ಮೂಲಕ ಗಣಿ ಮಾಲೀಕರಿಂದ ಹಣ ಪಡೆಯಲು ಯತ್ನಿಸಿ ಹಲವರ ಜೊತೆ ಚರ್ಚಿಸಿದ್ದಾರೆ. ನಮ್ಮ ಬಳಿ ದಾಖಲೆಗಳಿದ್ದು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದರು.

ಆಕ್ರೋಶ: ಈ ಕುರಿತು ಪ್ರತಿಕ್ರಿಯಿಸಿರುವ ಸುಮಲತಾ, ‘ಅಂಬರೀಷ್‌ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಅವರಿಗಿಲ್ಲ, ಅಕ್ರಮ ಗಣಿಗಾರಿಕೆ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂಬರೀಷ್‌ ವಿರುದ್ಧ ಮಾತನಾಡಿದರೆ ರವೀಂದ್ರ ಶ್ರೀಕಂಠಯ್ಯ ತಮ್ಮ ರಾಜಕೀಯ ಜೀವನ ಹಾಳುಮಾಡಿಕೊಳ್ಳುತ್ತಾರೆ’ ಎಂದಿದ್ದಾರೆ.

ವಿಶೇಷ ಮಹಿಳೆ– ಎಚ್‌ಡಿಕೆ ವ್ಯಂಗ್ಯ (ಭಾರತೀನಗರ ವರದಿ): ‘ಸುಮಲತಾ ವಿಶೇಷ ಮಹಿಳೆ, ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಗುರುವಾರ ವ್ಯಂಗ್ಯವಾಡಿದರು.

ಭಾರತೀನಗರದಲ್ಲಿ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಅವರು ‘ಸುಮಲತಾ ವಿಚಾರವಾಗಿ ಮಾಧ್ಯಮಗಳು ನನ್ನನ್ನು ಕೆರಳಿಸುತ್ತಿವೆ. ನನ್ನ ಹೇಳಿಕೆಗಳನ್ನು ತಿರುಚಿ ವರದಿ ಮಾಡುತ್ತಿವೆ’ ಎಂದರು.

ನಾನು ಯಾರೊಬ್ಬರ ಗುಲಾಮ ಅಲ್ಲ: ಎಚ್.ಡಿ. ಕುಮಾರಸ್ವಾಮಿ

ರಾಮನಗರ: ‘ನಾನು ಯಾವಾಗಲೂ ಸಾರ್ವಜನಿಕರ ಮುಂದೆ ಕೈಕಟ್ಟಿ ನಿಲ್ಲುತ್ತೇನೆ. ಹಾಗಂತ ಮಾತ್ರಕ್ಕೆ ನಾನು ಯಾರೊಬ್ಬರ ಗುಲಾಮ ಅಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಅಂಬರೀಶ್ ಮುಂದೆ ಕುಮಾರಸ್ವಾಮಿ ಕೈಕಟ್ಟಿ ನಿಂತ ಹಳೆಯ ಫೋಟೊವೊಂದು ವೈರಲ್‌ ಆಗಿರುವ ಕುರಿತು, ಕೇತಗಾನಹಳ್ಳಿಯ ತಮ್ಮ ನಿವಾಸದಲ್ಲಿ ಗುರುವಾರ ಅವರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯ ಹಾಗೂ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಾಧ್ಯಮಗಳು ಅಂತಹ ವಿಷಯಗಳ ಬಗ್ಗೆ ಮಾತನಾಡಬೇಕೇ ಹೊರತು ವೈಯಕ್ತಿಕ ವಿಚಾರಗಳ ಮೇಲಲ್ಲ ಎಂದು ಹರಿಹಾಯ್ದರು.

ಭ್ರಷ್ಟಾಚಾರದ ವಿಷಯದಲ್ಲಿ ಕುಮಾರಸ್ವಾಮಿ ಅಂಬಾಸಿಡರ್ ಎಂಬ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ‘ಹೌದು. ನಾನು ಭ್ರಷ್ಟಾಚಾರದ ವಿಷಯದಲ್ಲಿ ಅಂಬಾಸಿಡರ್. 1972ರಿಂದ ದೇವೇಗೌಡರು ಹಾಗೂ ನಾನು ರಾಜಕೀಯಕ್ಕೆ ಬಂದ ಮೇಲೆ ಭ್ರಷ್ಟ ಅಧಿಕಾರಿಗಳು ಹಾಗೂ ವ್ಯಕ್ತಿಗಳ ವಿರುದ್ಧ ದಾಖಲೆ ಸಮೇತ ಹೋರಾಟ ಮಾಡಿದ್ದೇವೆ. ನಮ್ಮ ಕುಟುಂಬ ಬಿಟ್ಟರೆ ಮತ್ಯಾರು ಇಷ್ಟು ಹೋರಾಟ ಮಾಡಿದ್ದಾರೆ ಎನ್ನುವುದನ್ನು ತಿಳಿಸಿ’ ಎಂದು ಪ್ರತಿ ಸವಾಲು ಹಾಕಿದರು.

‘ಆ ಹೆಣ್ಣು ಮಗಳ ಬಗ್ಗೆ ಇದೀಗ ಚರ್ಚೆ ಬೇಡ. ಮುಂದಿನ ಚುನಾವಣೆ ವೇಳೆ ನಾನು ಮಾತಾಡ್ತೇನೆ’ ಎಂದರು.

*
ಸಂಸದೆ ಸುಮಲತಾ ಅವರಿಗೆ ರಾಜಕೀಯ ಅನುಭವದ ಕೊರತೆಯಿದೆ. ವೈಯಕ್ತಿಕ ಲಾಭಕ್ಕೆ ಟೀಕಿಸುವುದನ್ನು ಬಿಟ್ಟು ಮೊದಲು ಮಂಡ್ಯ ಜನರ ಋಣ ತೀರಿಸಲಿ.
–ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT