ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಂತಾದ ಮಂಡ್ಯ ಜಿ.ಪಂ ಸಾಮಾನ್ಯ ಸಭೆ!

Last Updated 20 ಮಾರ್ಚ್ 2021, 12:34 IST
ಅಕ್ಷರ ಗಾತ್ರ

ಮಂಡ್ಯ: 18 ತಿಂಗಳ ನಂತರ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಅಕ್ಷರಶಃ ಮಾರುಕಟ್ಟೆಯಂತಾಗಿತ್ತು. ಸದಸ್ಯರ ವಿವಿಧ ಗುಂಪುಗಳ ನಡುವೆ ಸತತ 2 ಗಂಟೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ಕುಳಿತಿದ್ದರು.

ಜೆಡಿಎಸ್‌ನಿಂದ ಗೆದ್ದು ಅಧ್ಯಕ್ಷರಾಗಿರುವ ನಾಗರತ್ನಾ ಸ್ವಾಮಿ ಪಕ್ಷದ ವರಿಷ್ಠರ ರಾಜೀನಾಮೆ ರಾಜೀನಾಮೆ ಸೂಚನೆ ತಿರಸ್ಕರಿಸಿದ್ದಾರೆ. ರಾಜೀನಾಮೆ ಪಟ್ಟು ಹಿಡಿದಿದ್ದ ಜೆಡಿಎಸ್‌ ಸದಸ್ಯರು 18 ತಿಂಗಳಿಂದ ಸಾಮಾನ್ಯ ಸಭೆಗೆ ಹಾಜರಾಗಿಲ್ಲ. ಕೋರಂ ಕೊರತೆಯಿಂದ 7 ಸಭೆ ಮುಂದೂಡಲ್ಪಟ್ಟಿವೆ. ಬಜೆಟ್‌ ಮಂಡನೆಯಾಗದ ಕಾರಣ ಕ್ರಿಯಾ ಯೋಜನೆಗಳಿಗೆ ಸರ್ಕಾರವೇ ಮಂಜೂರಾತಿ ನೀಡಿದೆ. ಜಿ.ಪಂ ಅವಧಿ ಕೇವಲ 40 ದಿನ ಉಳಿದಿದ್ದು ಅಂತಿಮ ಹಂತದಲ್ಲಿ ಶನಿವಾರ ನಡೆದ ಸಭೆಗೆ ಎಲ್ಲಾ ಸದಸ್ಯರು ಹಾಜರಾಗಿದ್ದರು.

ಸಭೆ ಆರಂಭಗೊಳ್ಳುತ್ತಿದ್ದಂತೆ ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಜೆಡಿಎಸ್‌ ಸದಸ್ಯರು ಅಧ್ಯಕ್ಷರ ವಿರುದ್ಧ ಮುಗಿಬಿದ್ದರು. ಜೆಡಿಎಸ್‌ನಲ್ಲಿ 2 ಗುಂಪುಗಳಿದ್ದು ಇನ್ನೊಂದು ಗುಂಪು ಅಧ್ಯಕ್ಷರ ಬೆಂಬಲಕ್ಕೆ ಬಂತು. ಅಧ್ಯಕ್ಷರನ್ನು ಬೆಂಬಲಿಸುವ ಕಾಂಗ್ರೆಸ್‌ನ ಮತ್ತೊಂದು ಗುಂಪು ಕೂಡ ಅಧ್ಯಕ್ಷರ ಬೆಂಬಲಕ್ಕೆ ಬಂತು.

ಮೂರೂ ಗಂಪುಗಳ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಸಭೆ ಗೊಂದಲದ ಗೂಡಾಯಿತು. ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡರು. ಜಿ.ಪಂ ಸಿಇಒ ಜುಲ್ಫಿಕರ್‌ ಉಲ್ಲಾ ಕೈಮುಗಿದು ಕೇಳಿಕೊಂಡರೂ ಸದಸ್ಯರು ಅದಕ್ಕೆ ಸೊಪ್ಪು ಹಾಕಲಿಲ್ಲ.

‘ನೀವು ಒಂದೂವರೆ ವರ್ಷದಿಂದ ಒಂದೂ ಸಭೆ ನಡೆಸಲಿಲ್ಲ’ ಎಂದು ಜೆಡಿಎಸ್‌ ಸದಸ್ಯರು ಅಧ್ಯಕ್ಷೆ ವಿರುದ್ಧ ಹರಿಹಾಯ್ದರು. ‘ನೀವು ಕೋರಂ ನೀಡಲಿಲ್ಲ’ ಎಂದು ಕಾಂಗ್ರೆಸ್ ಸದಸ್ಯರು ಮುಗಿಬಿದ್ದರು. ಅದಕ್ಕೆ ಜೆಡಿಎಸ್‌ ಸದಸ್ಯರು ‘ಬಿಜೆಪಿ ಸೇರಿರುವ ಅಧ್ಯಕ್ಷೆಗೆ ನೀವು ಬೆಂಬಲ ಕೊಟ್ಟಿದ್ದೀರಿ, ಕೋಮುವಾದಿ ಪಕ್ಷದ ಜೊತೆ ಸೇರಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘18 ತಿಂಗಳಿಂದ್ದ ಜಿ.ಪಂಗೆ ಎಳ್ಳುನೀರು ಬಿಟ್ಟಿದ್ದೀರಿ’ ಎಂದು ಪಕ್ಷೇತರ ಸದಸ್ಯ ಎನ್‌.ಶಿವಣ್ಣ ಸಭಾತ್ಯಾಗ ಮಾಡಿದರು. ‘ಅಧ್ಯಕ್ಷರು ಕಡಿಮೆ ಅನುದಾನ ನೀಡಿದ್ದಾರೆ’ ಎಂದು ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಕಣ್ಣೀರಿಟ್ಟರು.

ಪ್ರತಿಧ್ವನಿಸಿದ ಪ್ರಜಾವಾಣಿ ವರದಿ

ಶನಿವಾರ ಪ್ರಜಾವಾಣಿಯಲ್ಲಿ ‘ಜಿ.ಪಂ ಸದಸ್ಯರನ್ನು ಸೋಲಿಸಿ ಅಭಿಯಾನ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವರದಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಜೆಡಿಎಸ್‌ ಸದಸ್ಯ ಬೋರಯ್ಯ ವರದಿ ಪ್ರಸ್ತಾಪಿಸಿ ‘ಸಭೆ ನಡೆಸಲು ವಿಫಲವಾಗಿರುವ ಜಿ.ಪಂ ಸದಸ್ಯರ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ಈಗಿನ ಸದಸ್ಯರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸುವ ಆಂದೋಲನ ನಡೆಸಲು ಜನರು ಮುಂದಾಗಿದ್ದಾರೆ. ಪ್ರಜಾವಾಣಿಯ ವರದಿ ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು. ವಿರೋಧ ಪಕ್ಷದ ನಾಯಕ ರಾಜೀವ್‌ ಕೂಡ ವರದಿ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT