ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಸ್ಫೋಟ: ಫೋನ್ ತರಬೇತಿಗೂ ನಕಲಿ ವಿಳಾಸ ನೀಡಿದ್ದ ಶಾರಿಕ್‌!

Last Updated 23 ನವೆಂಬರ್ 2022, 2:31 IST
ಅಕ್ಷರ ಗಾತ್ರ

ಮೈಸೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಆರೋಪದಲ್ಲಿ ಬಂಧಿತನಾಗಿರುವ ಶಾರಿಕ್‌, ಬಾಡಿಗೆ ಮನೆ ಪಡೆಯಲು ನೀಡಿದ್ದ ನಕಲಿ ಆಧಾರ್‌ ಕಾರ್ಡ್‌ನ ವಿಳಾಸವನ್ನೇ ನೀಡಿ ಮೊಬೈಲ್‌ ತರಬೇತಿ ಪ‍ಡೆಯಲು ಸೇರಿಕೊಂಡಿದ್ದ.

‘ಇಲ್ಲಿನ ಅಗ್ರಹಾರದಲ್ಲಿರುವ ಎಸ್‌ಎಂಎಂ ಮೊಬೈಲ್‌ ಫೋನ್ ತರಬೇತಿ ಕೇಂದ್ರಕ್ಕೆ ಸೇರುವ ಮುನ್ನ, ಹುಬ್ಬಳ್ಳಿ ಮೂಲದ ಪ್ರೇಮರಾಜ್‌ ಅವರ ನಕಲಿ ಆಧಾರ್‌ ಕಾರ್ಡ್‌ ನೀಡಿದ್ದ’ ಎಂದು ಸಂಸ್ಥೆಯ ಮುಖ್ಯಸ್ಥ ಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಾರ್ಡ್‌ನಲ್ಲಿ ಶಾರಿಕ್‌ ಫೋಟೊ ಇದ್ದಿದ್ದರಿಂದ ಅನುಮಾನ ಬಂದಿರಲಿಲ್ಲ. ಕಾಲ್‌ಸೆಂಟರ್‌ನಲ್ಲಿ ಕೆಲಸ ಸಿಕ್ಕಿದ್ದು, 15 ದಿನಗಳ ನಂತರ ಕೆಲಸಕ್ಕೆ ಸೇರುವುದಾಗಿ, ಮನೆಯಲ್ಲಿ ಕೂರಲು ಬೇಸರವಾಗಿ ಕೋರ್ಸ್‌ ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದ’ ಎಂದರು.

‘ತರಬೇತಿಗಾಗಿಯೇ 10 ಮೊಬೈಲ್‌ ಫೋನ್‌ ಖರೀದಿಸಿದ್ದ ಆತ ತರಗತಿಗೆ ಆಗಾಗ ಗೈರಾಗುತ್ತಿದ್ದ. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದ. ತನ್ನ ವಾಟ್ಸ್‌ಆ್ಯಪ್‌ ಡಿ.ಪಿಯಲ್ಲೂ ಶಿವನ ಚಿತ್ರ ಹಾಕಿಕೊಂಡಿದ್ದರಿಂದ ಮುಸ್ಲಿಂ ಎಂಬ ಅನುಮಾನವೂ ಬಂದಿರಲಿಲ್ಲ’ ಎಂದರು.

ತಮಿಳುನಾಡು ತಂಡದ ಭೇಟಿ: ಕೊಯ ಮತ್ತೂರಿನಲ್ಲಿ ಅಕ್ಟೋಬರ್‌ನಲ್ಲಿ ನಡೆದ ಸ್ಫೋಟಕ್ಕೂ ಮಂಗಳೂರಿನಲ್ಲಿ ನಡೆದ ಸ್ಫೋಟಕ್ಕೆ ಸಂಬಂಧವಿದೆಯೇ ಎಂಬುದರ ಕುರಿತು ಮಾಹಿತಿ ಕಲೆಹಾಕುವ ಸಂಬಂಧ ತಮಿಳುನಾಡಿನ ಡಿಐಜಿ ನೇತೃತ್ವದ ತಂಡವೊಂದು ಸೋಮವಾರ ರಾತ್ರಿ ಮೈಸೂರಿಗೆ ಬಂದು ಮಾಹಿತಿ ಕಲೆಹಾಕಿದೆ.

ತಂಡವು ಲೋಕನಾಯಕನಗರದಲ್ಲಿರುವ ಮನೆಗೆ ಭೇಟಿ ನೀಡಿ, ಪೊಲೀಸರು ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳನ್ನು ಪರಿಶೀಲಿಸಿತು. ‘ಆದರೆ, ಎರಡೂ ಸ್ಫೋಟಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಮಾಲೀಕ ವಶಕ್ಕೆ: ಆರೋಪಿಗೆ ಮನೆ ಬಾಡಿಗೆಗೆ ನೀಡಿದ್ದ ಮೋಹನ್‌ ಕುಮಾರ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಬೇರೆಯವರಿಂದ ಕೊಠಡಿಗೆ ಮಾಸಿಕ ₹ 500 ಬಾಡಿಗೆ ಪಡೆಯುತ್ತಿದ್ದ ಮಾಲೀಕ, ₹ 1800 ನೀಡಲು ಒಪ್ಪಿದ ಆರೋಪಿಯ ಪೂರ್ವಾ ಪರ ವಿಚಾರಿಸಿರಲಿಲ್ಲ’ ಎಂದಿದ್ದಾರೆ.

ಪರಿಶೀಲನೆ ತೀವ್ರ

ಶಂಕಿತ ಆರೋಪಿ ಮೈಸೂರಿನಲ್ಲಿಯೇ ಬಾಂಬ್‌ ತಯಾರಿಸುತ್ತಿದ್ದ ಅಂಶ ಖಚಿತಪಡುತ್ತಿದ್ದಂತೆಯೇ, ಪೊಲೀಸರು ನಗರದಲ್ಲಿ ನಾಕಾಬಂಧಿ ಹೆಚ್ಚಿಸಿದ್ದಾರೆ. ಭಾನುವಾರ ರಾತ್ರಿಯಿಂದಲೇ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ವಾಹನ, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT