ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನೀತಿ: ಚಾಲಕರ ಫಜೀತಿ

ಎರಡು ತಿಂಗಳ ಲಾಕ್‌ಡೌನ್‌: ಒಂದು ತಿಂಗಳ ತೆರಿಗೆ ವಿನಾಯಿತಿ
Last Updated 10 ಜೂನ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಸಂಚಾರಕ್ಕೆ ಏಪ್ರಿಲ್‌ 21ರಿಂದಲೇ ನಿರ್ಬಂಧ ಇದ್ದರೂ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಒಂದು ತಿಂಗಳ ತೆರಿಗೆ ವಿನಾಯಿತಿ ಮಾತ್ರ ಸಿಕ್ಕಿದೆ. ಕೆಲಸ ಇಲ್ಲದೆ ಅತಂತ್ರ ಸ್ಥಿತಿಯಲ್ಲಿರುವ ಚಾಲಕರಿಗೆ ಈಗ ಡೀಸೆಲ್ ದರ ಏರಿಕೆಯ ಬರೆಯೂ ಹೊರೆಯಾಗಿದೆ.

ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಬಸ್‌, ಲಾರಿಗಳು ಸಾರಿಗೆ ಇಲಾಖೆಗೆ ತ್ರೈಮಾಸಿಕವಾಗಿ ತೆರಿಗೆ ಪಾವತಿಸಬೇಕು. ಬಸ್ ಮತ್ತು ಲಾರಿಗಳನ್ನು ಶೆಡ್‌ನಲ್ಲೇ ನಿಲ್ಲಿಸಿಕೊಂಡರೆ ಅನುಪಯುಕ್ತ ಎಂದು ಘೋಷಿಸಿಕೊಂಡು ಅದರ ದಾಖಲೆಗಳನ್ನು ಸಾರಿಗೆ ಇಲಾಖೆಗೆ ಹಸ್ತಾಂತರ ಮಾಡಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇದೆ. ಈ ರೀತಿಯ ಅವಕಾಶ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ ಮಾಲೀಕರಿಗೆ ಇಲ್ಲ. ಮನೆ ಮುಂದೆ ನಿಲ್ಲಿಸಿಕೊಂಡರೂ ತೆರಿಗೆ ಪಾವತಿಸುವುದು ಕಡ್ಡಾಯ.ಈ ನಿಯಮವೇ ತಮಗೆ ಸಂಕಷ್ಟವನ್ನು ತಂದೊಡ್ಡಿದೆ ಎನ್ನುತ್ತಾರೆ ಟ್ಯಾಕ್ಸಿ, ಕ್ಯಾಬ್ ಚಾಲಕರು.

ತೆರಿಗೆ ವಿನಾಯಿತಿ ನೀಡಬೇಕು ಎಂಬ ಮನವಿಯನ್ನು ಸರ್ಕಾರಕ್ಕೆ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ ಸಲ್ಲಿಸಿದೆ. ಆದರೆ, ಸರ್ಕಾರ ಒಂದು ತಿಂಗಳ ತೆರಿಗೆ ವಿನಾಯಿತಿ ನೀಡಿದೆ. ಕರ್ಪ್ಯೂ ಸೇರಿ ಎರಡು ತಿಂಗಳ ಕಾಲ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳು ಮನೆ ಮುಂದೆಯೇ ನಿಂತಿವೆ. ದುಡಿಮೆಯೂ ಇಲ್ಲದೆ ಬದುಕು ನಡೆಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ತೆರಿಗೆ ಪಾವತಿಸುವುದು ಹೇಗೆ ಎಂದು ಟ್ಯಾಕ್ಸಿ ಮಾಲೀಕರು ಪ್ರಶ್ನಿಸುತ್ತಾರೆ.

‘ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿರುವ ಸರ್ಕಾರ ಕನಿಷ್ಠ ತೆರಿಗೆ ವಿನಾಯಿತಿ ನೀಡದಿದ್ದರೆ, ವಾಹನಗಳ ಮಾಲೀಕರು ಎಲ್ಲಿಂದ ಹಣ ತಂದು ತೆರಿಗೆ ಪಾವತಿ ಮಾಡಬೇಕು’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದರೂ ಪ್ರಯಾಣಿಕರ ಸಂಖ್ಯೆಯನ್ನು ನಿರ್ಬಂಧ ವಿಧಿಸಲಾಗಿದೆ. ಇದರ ನಡುವೆ ಡೀಸೆಲ್ ದರ ಏರಿಕೆಯೆ ಬರೆಯೂ ನಮ್ಮನ್ನು ಕಾಡುತ್ತಿದೆ. ಹೊಟ್ಟೆಪಾಡಿಗೂ ಕಷ್ಟಪಡಬೇಕಾದ ಸ್ಥಿತಿಯಲ್ಲಿ ಟ್ಯಾಕ್ಸಿ ಚಾಲಕರಿದ್ದಾರೆ’ ಎಂದರು.

‘ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತಿರುವ ಚಾಲಕರು ಮತ್ತು ಮಾಲೀಕರು ಸಾಲದ ಕಂತು ಪಾವತಿಗೆ ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ. ಕಂತು ಬಾಕಿ ಉಳಿದಷ್ಟು ಹೊರೆಯ ಭಾರ ಹೆಚ್ಚುತ್ತದೆ. ಇದರ ನಡುವೆ, ಡೀಸೆಲ್ ದರ ಏರಿಕೆಯ ಬರೆಯನ್ನೂ ಸರ್ಕಾರ ಎಳೆದಿದೆ. ಈ ಸಂದರ್ಭದಲ್ಲಿ ತೆರಿಗೆ ವಿನಾಯಿತಿಯನ್ನಾದರೂ ಸರ್ಕಾರ ನೀಡಬೇಕು’ ಎಂದು ಟ್ಯಾಕ್ಸಿ ಮತ್ತು ಆಟೋರಿಕ್ಷಾ ಮಾಲೀಕರ ಸಂಘದ ಅಧ್ಯಕ್ಷ ಜವರೇಗೌಡ ಮನವಿ ಮಾಡಿದರು.

ವಿನಾಯಿತಿ ಸಿಕ್ಕರೆ 5 ಲಕ್ಷ ಜನರಿಗೆ ಅನುಕೂಲ

‘ರಾಜ್ಯ ಸರ್ಕಾರ ತೆರಿಗೆ ವಿನಾಯಿತಿಯನ್ನು ಎರಡು ತಿಂಗಳಿಗೆ ವಿಸ್ತರಿಸಿದರೆ ಕನಿಷ್ಠ 5 ಲಕ್ಷ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಮಾಲೀಕರು ಮತ್ತು ಚಾಲಕರಿಗೆ ಅನುಕೂಲ ಆಗಲಿದೆ’ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲಿಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ತಿಳಿಸಿದರು.

‘ವಾಹನಗಳಿಗೆ ತೆರಿಗೆ ವಿನಾಯಿತಿ ಒದಗಿಸಿದರೆ ದೊಡ್ಡ ಮಟ್ಟದ ಆರ್ಥಿಕ ಹೊರೆ ಸರ್ಕಾರಕ್ಕೆ ಆಗುವುದಿಲ್ಲ.ತಿಂಗಳಿಗೆ ₹104 ಕೋಟಿ ತೆರಿಗೆ ಖೋತಾ ಉಂಟಾಗುತ್ತದೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಮೂರು ತಿಂಗಳ ವಿನಾಯಿತಿ ದೊರೆತಿತ್ತು’ ಎಂದು ಹೇಳಿದರು.

‘ತೆರಿಗೆ ವಿನಾಯಿತಿ ನೀಡಿದರೆ ಲಾಕ್‌ಡೌನ್ ಸಡಿಲವಾದ ಕೂಡಲೇ ವಾಹನಗಳು ರಸ್ತೆಗೆ ಇಳಿಯುತ್ತವೆ. ಇಂಧನ ಇನ್ನಿತರ ಚಟುವಟಿಕೆಗಳ ಮೂಲಕ ಸರ್ಕಾರಕ್ಕೆ ₹800 ಕೋಟಿಗೂ ಅಧಿಕ ಪರೋಕ್ಷ ತೆರಿಗೆ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT