ಮೇಕೆದಾಟು ಯೋಜನೆ: ವಾರಾಂತ್ಯದಲ್ಲಿ ಸಿಎಂ ಸಭೆ: ಬೊಮ್ಮಾಯಿ

ಬೆಂಗಳೂರು: ‘ಮೇಕೆದಾಟು ಅಣೆಕಟ್ಟು ಯೋಜನೆ ಅತಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತಂತೆ ಕಾನೂನು ತಜ್ಞರು ಮತ್ತು ತಾಂತ್ರಿಕ ಪರಿಣಿತರ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾರಾಂತ್ಯದಲ್ಲಿ ಚರ್ಚೆ ನಡೆಸಲಿದ್ದಾರೆ’ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ನಮ್ಮ ರಾಜ್ಯದ ಪಾಲಿಗೆ ಈ ಯೋಜನೆ ಮಹತ್ವದ್ದು. ಯೋಜನೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟಿನಲ್ಲಿ ಮಿಸಲೇನಿಯಸ್ ಅರ್ಜಿ ಮಾತ್ರ ಬಾಕಿ ಇದೆ’ ಎಂದರು.
‘ಯೋಜನೆಯ ಅನುಷ್ಠಾನಕ್ಕೆ ಯಾವ ಯಾವ ಒಪ್ಪಿಗೆ ಪಡೆಯಬೇಕು, ಮುಂದೆ ಯಾವ ರೀತಿ ಹೋಗಬೇಕು ಎಂಬ ಬಗ್ಗೆ ಕಾನೂನು ಪರಿಣಿತರ ಜೊತೆ ಚರ್ಚಿಸಿ, ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದರು
‘ಕಾವೇರಿ ನೀರು ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುವ ಭವಿಷ್ಯದ ಯೋಜನೆ ಮತ್ತು ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಮಾನಾಂತರ ಅಣೆಕಟ್ಟು ಇದಾಗಲಿದೆ’ ಎಂದೂ ಅವರು ಹೇಳಿದರು.
ನಿರ್ಧಾರ ಆಗಿಲ್ಲ: ‘ಮುಂಗಾರು ಅಧಿವೇಶನದ ಬಗ್ಗೆ ಇದುವರೆಗೂ ಯಾವುದೇ ರೀತಿಯ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿಗಳ ಜತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ’ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೊಮ್ಮಾಯಿ, ‘ಕೇಂದ್ರ ಸಚಿವ ಸಂಪುಟದಲ್ಲಿ ಯಾರು ಇರುತ್ತಾರೆ, ಯಾರು ಇರುವುದಿಲ್ಲ ಎಂಬ ಮಾಹಿತಿ ನನ್ನ ಬಳಿ ಇಲ್ಲ. ಆದರೆ , ಕರ್ನಾಟಕಕ್ಕೆ ಒಳ್ಳೆಯ ಪ್ರಾತಿನಿಧ್ಯತೆ ಸಿಗುವ ವಿಶ್ವಾಸ ಇದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.