ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದೆ ನಾಟಿ ಮಾಡಿ, ಬೆಲ್ಲ ಸವಿದ ಶೋಭಾ ಕರಂದ್ಲಾಜೆ

Last Updated 16 ಆಗಸ್ಟ್ 2021, 12:06 IST
ಅಕ್ಷರ ಗಾತ್ರ

ಮಂಡ್ಯ: ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ತಾಲ್ಲೂಕಿನ ಹೊನಗಾನಹಳ್ಳಿಯಲ್ಲಿ ಗದ್ದೆನಾಟಿ ಮಾಡಿ ಗಮನ ಸೆಳೆದರು.

ರೈತ ಮಹಿಳೆಯರ ಜೊತೆ ಗದ್ದೆಗೆ ಇಳಿದ ಶೋಭಾ 5 ನಿಮಿಷಗಳ ಕಾಲ ನಾಟಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಜೊತೆ ಟ್ರ್ಯಾಕ್ಟರ್‌ ಏರಿ ನಾಟಿ ಯಂತ್ರದ ಮೂಲಕವೂ ನಾಟಿ ಮಾಡಿದರು. ನಂತರ ಸಾತನೂರು ಗ್ರಾಮದ ಆಲೆಮನೆಗೆ ತೆರಳಿ ಬೆಲ್ಲ ತಯಾರಾಗುವ ಪ್ರಕ್ರಿಯೆ ವೀಕ್ಷಿಸಿದರು. ಕ್ರಷರ್‌ಗೆ ಕಬ್ಬು ಕೊಟ್ಟರು, ಬೆಲ್ಲದ ರುಚಿ ನೋಡಿದರು.

‘ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ಧೇನೆ. ಬೆಲ್ಲ ತಯಾರಿಕೆಯಲ್ಲಿ ರಾಸಾಯನಿಕ ಬೆರೆಸಬಾರದು, ಕಲಬೆರಕೆ ಮಾಡಬಾರದು ಎಂದು ಸಲಹೆ ನೀಡಿದ್ದೇನೆ’ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ನಿಲುವು ಸ್ಪಷ್ಟ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೇಕೆದಾಟು ಯೋಜನೆಯಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ನ್ಯಾಯಾಧೀಕರಣ ನಿಗದಿ ಮಾಡಿದಷ್ಟು ನೀರನ್ನು ಪ್ರತಿವರ್ಷ ತಮಿಳುನಾಡಿಗೆ ಹರಿಸಲಾಗುತ್ತಿದೆ. ನಮ್ಮಲ್ಲಿ ಕೊರತೆಯಾದಾಗಲೂ ತಪ್ಪದೇ ನೀರು ಹರಿಸಿದ್ದೇವೆ. ಮೇಕೆದಾಟು ಯೋಜನೆ ಜಾರಿಯಾದರೆ ತಮಿಳುನಾಡಿಗೆ ಹರಿಸುವ ನೀರು ಕಡಿಮೆಯಾಗುತ್ತದೆ ಎಂಬ ಅವರ ವಾದದಲ್ಲಿ ಸತ್ಯಾಂಶವಿಲ್ಲ’ ಎಂದು ಹೇಳಿದರು.

‘ನಮ್ಮ ರಾಜ್ಯದ ಯೋಜನೆ ಕೈಗೊಳ್ಳುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಮೇಕೆದಾಟು ಯೋಜನೆಯಿಂದ ನಮಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಇದರಿಂದ ತಮಿಳುನಾಡಿಗೂ ಲಾಭವಾಗುತ್ತದೆ. ಈ ಅಂಶದ ಬಗ್ಗೆ ಅಲ್ಲಿಯ ಸರ್ಕಾರ ಮನಗಾಣಬೇಕು’ ಎಂದರು.

ಪರ್ಯಾಯ ಇಂಧನ: ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ಪೆಟ್ರೋಲ್‌, ಡೀಸೆಲ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಚಿಂತಿಸಲಾಗಿದೆ. ನಮ್ಮಲ್ಲಿ ಹೇರಳವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರ್ಯಾಯ ಇಂಧನ ಸಂಶೋಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ’ ಎಂದರು.

‘ನಮ್ಮ ದೇಶದಲ್ಲಿ ರೈತರು ಹೆಚ್ಚಾಗಿ ಬೆಳೆಯುವ ಕಬ್ಬು, ಗೋಧಿ, ಭತ್ತದಿಂದ ಇಥೆನಾಲ್‌ ಉತ್ಪಾದಿಸಲು ಸಾಧ್ಯವಿದ್ದು ಆ ಮೂಲಕ ಪೆಟ್ರೋಲ್‌, ಡೀಸೆಲ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದರು.

‘ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಳವಾಗಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆಹಾರ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ತೋಟಗಾರಿಕೆ ಬೆಳೆಗಳ ಉತ್ಪಾದನೆ ಪ್ರಮಾಣ 326 ಮಿಲಿಯನ್‌ ಮೆಟ್ರಿಕ್‌ ಟನ್‌ನಷ್ಟಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT