ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮ ದೇವಸ್ಥಾನಕ್ಕೆ ಮಳೆ ನೀರು, ಕರಾವಳಿಯಲ್ಲಿ ‘ಯೆಲ್ಲೋ ಅಲರ್ಟ್'

Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ಉಗರಗೋಳ (ಬೆಳಗಾವಿ ಜಿಲ್ಲೆ)/ಕಾರವಾರ: ಇಲ್ಲಿನ ಯಲ್ಲಮ್ಮನ ಗುಡ್ಡದ ಸುತ್ತ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ನೀರು ದೇವಸ್ಥಾನದ ಒಳಗೆ ನುಗ್ಗಿತು.

ಸಂಜೆ 4ರ ಸುಮಾರಿಗೆ ಏಕಾಏಕಿ ಆರಂಭವಾದ ಮಳೆ ಒಂದು ತಾಸು ನಿರಂತರ ಸುರಿಯಿತು. ಸುತ್ತಲಿನ ಗುಡ್ಡಗಳಿಂದ ಹರಿದುಬಂದ ನೀರುಅಲ್ಲಿನ ಎಣ್ಣೆಹೊಂಡ ಸೇರಿತು. ಹೊಂಡ ತುಂಬಿದ ಬಳಿಕ ದೇವಸ್ಥಾನದ ಪ್ರಾಂಗಣಕ್ಕೂ ನುಗ್ಗಿತು ಎಂದು ಭಕ್ತರು ತಿಳಿಸಿದ್ದಾರೆ. ನೀರು ನುಗ್ಗಿದ್ದರಿಂದ ದೇವಸ್ಥಾನದ ಸುತ್ತಲಿನ ಪೂಜಾ ಸಾಮಗ್ರಿಗಳ ಮಳಿಗೆಗಳಿಗೂ ಹಾನಿಯಾಗಿದೆ.

ಬೈಲಹೊಂಗಲ ಸಮೀಪದ ಮುರಗೋಡ ಗ್ರಾಮದ ಸುತ್ತಮುತ್ತ ಗುರುವಾರ ಸಂಜೆ ಭಾರಿ ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಜನರು ಬಸವಳಿದಿದ್ದರು. ಏಕಾಏಕಿ ಸುರಿದ ಮಳೆ ತಂಪೆರೆಯಿತು. ಮಳೆ ಇಲ್ಲದೆ ಬಿತ್ತನೆ ಕಾರ್ಯಕ್ಕೆ ತೊಂದರೆ ಆಗಿತ್ತು. ಈ ಮಳೆ ರೈತರಲ್ಲಿ ತುಸು ನೆಮ್ಮದಿ ತಂದಿದೆ.

ರಭಸದ ಮಳೆ: ಕಾರವಾರ ಜಿಲ್ಲೆ ಹಳಿಯಾಳ ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಸುಮಾರು ಒಂದು ತಾಸು ರಭಸದ ಮಳೆಯಾಯಿತು. ರೈತರು ಮುಂಗಾರು ಅವಧಿಯ ಗೋವಿನ ಜೋಳ ಬಿತ್ತನೆ ಮಾಡಿದ್ದು, ಮಳೆಯಿಂದಾಗಿ ಅನುಕೂಲವಾಗಿದೆ.

ಕರಾವಳಿಯಾದ್ಯಂತ ಒಂದೆರಡು ಸಲ ಸಾಮಾನ್ಯ ಮಳೆಯಾಯಿತು. ದಿನವಿಡೀ ಬಿಸಿಲು, ಮೋಡದ ವಾತಾವರಣವಿತ್ತು. ರಾಜ್ಯದ ಕರಾವಳಿಯಲ್ಲಿ ಜೂನ್ 20ರವರೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಜೋರು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಮಳೆಗಾಗಿ ಪ್ರಾರ್ಥನೆ: ಮುಂಡಗೋಡ ತಾಲ್ಲೂಕಿನ ಉಗ್ಗಿನಕೇರಿ ಗ್ರಾಮಸ್ಥರು ಅಮ್ಮಿನಬಾವಿ ಕೆರೆ ಹತ್ತಿರದ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು. ಬಿತ್ತಿರುವ ಬೀಜಗಳು ಮೊಳಕೆಯೊಡೆದು ಉತ್ತಮ ಫಸಲು ಬರುವಂತೆ ಸಾಮೂಹಿಕ
ವಾಗಿ ಪ್ರಾರ್ಥಿಸಿದರು.

ಮಳೆಗಾಗಿ ವೇದಮೂರ್ತಿ
ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಜೂ.19ರಂದು ಪಟ್ಟಣದ ಹಳೂರು ಓಣಿಯಲ್ಲಿ ಪೂಜೆ ನಡೆಯಲಿದೆ.

ಕಲಬುರಗಿ ವರದಿ: ಕಲಬುರಗಿ ಜಿಲ್ಲೆಯ ಚಿಂಚೋಳಿ, ಬೀದರ್ ಜಿಲ್ಲೆಯ ಚಿಟಗುಪ್ಪ ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ಮತ್ತು ಮುನಿರಾಬಾದ್‌ನಲ್ಲಿ ಗುರುವಾರ ಮಳೆಯಾಯಿತು.

ಸಿದ್ದಾಪುರ: ಬಿರುಸಿನ ಮಳೆ

ಮೈಸೂರು: ಮೈಸೂರು ಭಾಗದ ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲಿ ಗುರುವಾರ ಬಿರುಸಿನ ಮಳೆಯಾಗಿದೆ.

ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲೂ ಉತ್ತಮ ಮಳೆ ಸುರಿಯಿತು. ಸಂಜೆ 5 ಗಂಟೆಗೆ ಆರಂಭವಾದ ಸೋನೆ ಮಳೆ ಬಳಿಕ ಬಿರುಸು ಪಡೆದುಕೊಂಡಿತು.

ಚಾಮರಾಜನಗರ ಜಿಲ್ಲಾ ಕೇಂದ್ರ, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯಿತು. ಚಾಮರಾಜನಗರ, ಯಳಂದೂರು ಸುತ್ತಮುತ್ತ ರಾತ್ರಿ ಅರ್ಧ
ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿದಿದೆ. ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಭಾಗದಲ್ಲೂ ಉತ್ತಮ ಹಾಗೂ, ಕೊಳ್ಳೇಗಾಲ, ಹನೂರು ತಾಲ್ಲೂಕಿ ನಲ್ಲಿ ತುಂತುರು ಮಳೆ ಆಗಿದೆ.

ಮಂಗಳೂರು: ವಿವಿಧೆಡೆ ಮಳೆ

ಮಂಗಳೂರು: ಕರಾವಳಿ ಜಿಲ್ಲೆಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಗುರುವಾರ ಸಾಮಾನ್ಯ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರ, ಪುತ್ತೂರು ಮುಂತಾದೆಡೆ ಹಾಗೂ ಉಡುಪಿ ಜಿಲ್ಲೆಯ ಉಡುಪಿ, ಹೆಬ್ರಿ ಮುಂತಾದ ಭಾಗಗಳಲ್ಲಿ ತುಂತುರು ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಭಾಗದಲ್ಲಿ ಬಿರುಸಾಗಿ ಮಳೆ ಸುರಿದಿದೆ. ಆಲ್ದೂರಿನಲ್ಲಿ ಸುಮಾರು ಅರ್ಧ ತಾಸು ಮಳೆಯಾಗಿದ್ದರಿಂದ ಸಂತೆ ಮಾಳೆ, ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಗಿರಿ ಶ್ರೇಣಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕೊಪ್ಪ ಭಾಗದಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT