ಶನಿವಾರ, ಜನವರಿ 16, 2021
19 °C
ಮುಖ್ಯಮಂತ್ರಿ ಯಾವ ಖಾತೆ ಕೊಡುತ್ತಾರೊ ಅದನ್ನು ನಿಭಾಯಿಸುತ್ತೇನೆ: ಮುನಿರತ್ನ

ಮುನಿರತ್ನ, ರಾಜೇಶ್‌ ಗೌಡ ಪ್ರಮಾಣ ವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಗೆ ಆರ್‌.ಆರ್‌. ನಗರ ಕ್ಷೇತ್ರದಿಂದ ಆಯ್ಕೆಯಾದ ಮುನಿರತ್ನ ಮತ್ತು ಶಿರಾದಿಂದ ಆಯ್ಕೆಯಾದ ರಾಜೇಶ್‌ ಗೌಡ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಇದ್ದರು

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆರ್‌.ಆರ್‌. ನಗರ ಕ್ಷೇತ್ರದಲ್ಲಿ 58 ಸಾವಿರ ಮತಗಳಿಂದ ಮುನಿರತ್ನ ಗೆಲುವು ಸಾಧಿಸಿದ್ದರೆ, ಶಿರಾ ಕ್ಷೇತ್ರದಲ್ಲಿ 13 ಸಾವಿರ‌ ಮತಗಳಿಂದ ರಾಜೇಶ್ ಗೌಡ ಜಯಭೇರಿ ಬಾರಿಸಿದ್ದರು.

ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ: ‘ಸಚಿವ ಸ್ಥಾನ ನೀಡುವುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಮ್ಮ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೊ ಅದಕ್ಕೆ ಬದ್ಧವಾಗಿರುತ್ತೇನೆ. ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ’ ಎಂದು ಮುನಿರತ್ನ ಹೇಳಿದರು.

‘ಎಸ್‌ಬಿಎಂ (ಸೋಮಶೇಖರ್‌, ಬಸವರಾಜ್, ಮುನಿರತ್ನ) ಟೀಮ್‌ನಲ್ಲಿ ಯಾವುದೇ ರೀತಿ ಬಿರುಕು ಇಲ್ಲ. ಎಸ್.ಟಿ. ಸೋಮಶೇಖರ್ ನೀಡಿದ್ದ ಹೇಳಿಕೆಯನ್ನು ನಾನು ನೋಡಿಲ್ಲ (ಒಟ್ಟಿಗೆ ಇದ್ದರೆ ಮಂತ್ರಿ ಸ್ಥಾನ ಕೇಳಬಹುದು). ನಾವೆಲ್ಲಾ ಒಂದೇ ಎನ್ನುವ ಹೇಳಿಕೆ ಮಾತ್ರ ನೋಡಿದ್ದೇನೆ. ಮೂವರು ಒಟ್ಟಿಗೆ ರಾಜೀನಾಮೆ ಕೊಟ್ಟಿದ್ದೆವು. ಈಗಲೂ ಒಟ್ಟಿಗೆ ಇದ್ದೇವೆ. ಎಸ್‌ಬಿಎಂ ಲೋಗೊ ಒಂದೆ, ಅದು ಬಿಜೆಪಿ’ ಎಂದರು.

ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಸದ ಡಿ.ಕೆ. ಸುರೇಶ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುನಿರತ್ನ, ‘ಲೋಕಸಭಾ ಚುನಾವಣೆಯಲ್ಲಿ ಅವರು 2.5 ಲಕ್ಷ ಮತಗಳಿಂದ ಗೆದ್ದಾಗ ಇವಿಎಂ ಸಮಸ್ಯೆ ಆಗಲಿಲ್ಲ. ಈಗ ನಾನು ಗೆದ್ದಾಗ ಇವಿಎಂ ಮೇಲೆ ಸಂದೇಹ. ಅವರು ಗೆದ್ದಾಗ ಇದೇ ಅನುಮಾನ ಬಂದಿದ್ದರೆ ಒಪ್ಪಬಹುದಿತ್ತು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು