ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿಸಮನಾಗಿ ಕುಳಿತಿದ್ದ ದಲಿತ ಯುವಕನ ಹತ್ಯೆ: ಸಿದ್ದರಾಮಯ್ಯ, ಪ್ರಿಯಾಂಕ್ ಆಕ್ರೋಶ

Last Updated 28 ಆಗಸ್ಟ್ 2020, 10:53 IST
ಅಕ್ಷರ ಗಾತ್ರ

ಬೆಂಗಳೂರು:‘ದೇವಸ್ಥಾನದ ಕಟ್ಟೆ ಮೇಲೆ ತಮಗೆ ಸರಿಸಮನಾಗಿ ಕುಳಿತಿದ್ದಾನೆ’ ಎಂಬ ಕಾರಣಕ್ಕೆ ಪರಿಶಿಷ್ಟ ಜಾತಿಯ ಯುವಕ ಅನಿಲ ಇಂಗಳಗಿ (28) ಎಂಬಾತನನ್ನು ವಿಜಯಪುರ ಜಿಲ್ಲೆಯ ಬೂದಿಗಾಳ ಪಿ.ಎಚ್‌. ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು.

ಈ ಸಂಬಂಧ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಅವರುಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು,ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಅವರು, ‘ವಿಜಯಪುರದ ಸಿಂದಗಿಯಲ್ಲಿ‌ ನಡೆದಿರುವ ದಲಿತ ಯುವಕನ ಹತ್ಯೆ ಹೇಯವಾದುದು ಮತ್ತು ಮನುಷ್ಯರೆಲ್ಲರೂ ತಲೆತಗ್ಗಿಸುವಂತಹದ್ದು. ಮುಖ್ಯಮಂತ್ರಿ ಅವರು ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಚಾಲನೆ ನೀಡಬೇಕು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರೆ ಮುಖವಾಡ ಬಯಲು ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ’

‘ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ, ಮೀಸಲಾತಿಯನ್ನು ವಿರೋಧಿಸುವ,‌ ದಲಿತರನ್ನು ಕೀಳಾಗಿ ಕಾಣುವ ನಾಯಕರಿಗೆ ಬಿಜೆಪಿ ಪಕ್ಷ ನೀಡುತ್ತಿರುವ ಬೆಂಬಲವೇ ಇಂತಹ ಕೊಲೆಗಡುಕರು ನಿರ್ಭಯವಾಗಿ ಈ ರೀತಿಯ ದುಷ್ಕೃತ್ಯಕ್ಕೆ ಇಳಿಯಲು ಕಾರಣ. ಬಾಯಲ್ಲಿ ಸಮಾನತೆಯ ಮಂತ್ರ, ಆಚರಣೆಯಲ್ಲಿ ಅಸಮಾನತೆಯ ಕುತಂತ್ರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ, ‘ದೇವಸ್ಥಾನದ ಕಟ್ಟೆಯ ಮೇಲೆ ತಮ್ಮ ಸರಿಸಮನಾಗಿ ಪರಿಶಿಷ್ಟ ಜಾತಿಯ ಯುವಕನೋರ್ವ ಕುಳಿತಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆಯಾಗಿರುವ ವಿಚಾರ ಇಡೀ ಮಾನವ ಸಮಾಜವೇ ತಲೆತಗ್ಗಿಸುವಂತದ್ದು. ಇಡೀ ಜಗತ್ತಿಗೇ ಸಮಾನತೆ ಹಾಗೂ ವಿಶ್ವಮಾನವ ಸಂದೇಶ ಸಾರಿದ ಬಸವಣ್ಣ ಮತ್ತು ಕುವೆಂಪು ಅವರು ಜನ್ಮತಾಳಿದ ಈ ನಾಡಿನಲ್ಲಿ ಅಸ್ಪೃಶ್ಯತೆ ವಿಚಾರವಾಗಿ ನಡೆದ ಹತ್ಯೆಯು ಖಂಡನೀಯ’

‘ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದ ಈ ಘಟನೆಯ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ’ ಎಂದು ತಿಳಿಸಿದ್ದಾರೆ. ಜೊತೆಗೆ ಬಸವಣ್ಣನ ವಚನವನ್ನು ಉಲ್ಲೇಖಿಸಿ ಸಮಾನತೆಯ ಸಂದೇಶ ಸಾರಿದ್ದಾರೆ.

ಬೂದಿಗಾಳ ಪಿ.ಎಚ್‌. ಗ್ರಾಮದಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆಕೆಲವು ದಿನಗಳ ಹಿಂದೆ ಅನಿಲ ಇಂಗಳಗಿ ತಮಗೆ ಸರಿಸಮನಾಗಿ ಕುಳಿತಿದ್ದಕ್ಕೆ ಅದೇ ಗ್ರಾಮದ ಮೇಲ್ಜಾತಿಯ ಸಿದ್ದು ಸುಭಾಸ ಬಿರಾದಾರ ಎಂಬುವವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಜಾತಿಯ ಹೆಸರಲ್ಲಿ ಹೀಯಾಳಿಸಿದ್ದರು.

ಇದೇ ಕಾರಣಕ್ಕೆ ಆರೋಪಿ ಸಿದ್ದು, ಬುಧವಾರ ತನ್ನ ಸಂಬಂಧಿ ಸಂತೋಷ ಎಂಬಾತನ ಜತೆಗೂಡಿ ಅನಿಲ ಇಂಗಳಗಿ ಕಣ್ಣಿಗೆ ಕಾರದ ಪುಡಿ ಎರಚಿ, ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT