ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಪ್ರಕರಣ: ನಿಮ್ಹಾನ್ಸ್‌ಗೆ ಸೇರಿಸಲು ಹುನ್ನಾರ’; ವಕೀಲ ಶ್ರೀನಿವಾಸ ಆರೋಪ

ವಿದ್ಯಾರ್ಥಿನಿಯರ ಪರ ವಕೀಲ ಡಿ.ಸಿ. ಶ್ರೀನಿವಾಸ ಆರೋಪ
Last Updated 15 ಸೆಪ್ಟೆಂಬರ್ 2022, 19:07 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಲೈಂಗಿಕ ಕಿರುಕುಳದಿಂದ ನಲುಗಿರುವ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್‌) ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಅವರ ಮಾನಸಿಕ ಸ್ಥಿತಿ ಸರಿ ಇಲ್ಲವೆಂಬಂತೆ ಬಿಂಬಿಸುವ ಹುನ್ನಾರ ಇದಾಗಿದೆ’ ಎಂದು ಸಂತ್ರಸ್ತರ ಪರ ವಕೀಲ ಡಿ.ಸಿ.ಶ್ರೀನಿವಾಸ ಆರೋಪಿಸಿದರು.

ಸಂತ್ರಸ್ತ ವಿದ್ಯಾರ್ಥಿನಿಯರ ಭೇಟಿಗೆ ಗುರುವಾರ ಬಾಲಕಿಯರ ಸರ್ಕಾರಿ ಬಾಲಭವನಕ್ಕೆ ಬಂದಿದ್ದ ಅವರು, ಒಂದೂವರೆ ಗಂಟೆ ಕಾದು ಮಕ್ಕಳ ಕಲ್ಯಾಣ ಸಮಿತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನ್ಯಾಯಾಲಯದ ಅನುಮತಿ ಪಡೆದು ಸೆ.13ರಂದು ಸಂತ್ರಸ್ತ ವಿದ್ಯಾರ್ಥಿನಿಯರ ಹೇಳಿಕೆ ದಾಖಲು ಮಾಡಿಕೊಂಡಿದ್ದೇವೆ. ಅವರ ಮಾನಸಿಕ ಸ್ಥಿತಿ ಚೆನ್ನಾಗಿದ್ದು, ಸರಿಯಾಗಿಯೇ ಸ್ಪಂದಿಸಿದ್ದಾರೆ. ವಕೀಲರು ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಉತ್ಸುಕರಾಗಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿನಿಯರನ್ನು ಭೇಟಿ ಮಾಡಲು ಪಾಲಕರಿಗೆ ಅವಕಾಶ ನೀಡುತ್ತಿಲ್ಲ’ ಎಂದು ದೂರಿದರು.

‘ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮಕ್ಕಳ ಕಲ್ಯಾಣ ಸಮಿತಿ ಆಪ್ತ ಸಮಾಲೋಚನೆಗೆ ಒಳಪಡಿಸಿದೆ. ಒಬ್ಬ ಬಾಲಕಿಗೆ ಕೋಪ ಹೆಚ್ಚಾಗಿದ್ದು, ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಸಮಿತಿ ಹೇಳುತ್ತಿದೆ. ಇದು ಪ್ರಕರಣದ ದಿಕ್ಕು ತಪ್ಪಿಸುವ ಷಡ್ಯಂತ್ರ’ ಎಂದು ದೂರಿದರು.

‘ವಿದ್ಯಾರ್ಥಿನಿಯರಿಗೆ ಊಟದ ವ್ಯವಸ್ಥೆ ಸರಿ ಇಲ್ಲ. ಒಂದೊಂದು ತುತ್ತು ಹಿಂಸೆಪಟ್ಟು ಸೇವಿಸುವಂತಹ ವಾತಾವರಣ ಸೃಷ್ಟಿಸಲಾಗಿದೆ. ವಿದ್ಯಾರ್ಥಿನಿಯರ ಹಿತಾಸಕ್ತಿ ಕಡೆಗಣಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗುವುದು. ನ್ಯಾಯಾಲಯದ ಗಮನಕ್ಕೂ ತರಲಾಗುವುದು’ ಎಂದು ಅವರು ಹೇಳಿದರು.

ಇಬ್ಬರು ಬಾಲಕರು ಕಾಣೆ: ಮುರುಘಾ ಮಠದ ವಿದ್ಯಾರ್ಥಿನಿಲಯದಿಂದ 11 ಹಾಗೂ 13 ವರ್ಷದ ಇಬ್ಬರು ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಇಬ್ಬರು ಸೆ.8ರಂದು ಬೆಳಿಗ್ಗೆ 8.30ಕ್ಕೆ ಶಾಲೆಗೆ ಹೋಗಿದ್ದರು. ಸಂಜೆ ಹಾಸ್ಟೆಲ್‌ಗೆ ವಾಪಸು ಬಂದಿಲ್ಲ. ಅನುಮಾನಗೊಂಡು ಶಾಲೆಯನ್ನು ಸಂಪರ್ಕಿಸಿದ್ದೆವು. ಇಬ್ಬರೂ ತರಗತಿಗೆ ಗೈರಾಗಿರುವ ಮಾಹಿತಿ ತಿಳಿಯಿತು. ಮೂರು ದಿನಗಳು ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿಲ್ಲ’ ಎಂದು ಹಾಸ್ಟೆಲ್‌ ಸಿಬ್ಬಂದಿ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT