ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜುಂಡಪ್ಪ ವರದಿ ಪರಿಷ್ಕರಣೆ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಬೊಮ್ಮಾಯಿ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಸಿ.ಎಂ ಬೊಮ್ಮಾಯಿ ಹೇಳಿಕೆ
Last Updated 17 ಸೆಪ್ಟೆಂಬರ್ 2021, 19:28 IST
ಅಕ್ಷರ ಗಾತ್ರ

ಕಲಬುರ್ಗಿ: ‘ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಮಾನದಂಡದಂತೆ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಈಗ ಹಣ ವಿನಿಯೋಗಿಸಲಾಗುತ್ತಿದೆ. ನೀತಿ ಆಯೋಗ, ವಿಶ್ವಸಂಸ್ಥೆಯ ವರದಿ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕ ಆಧಾರವಾಗಿಟ್ಟುಕೊಂಡು ನಂಜುಂಡಪ್ಪ ವರದಿ ಪರಿಷ್ಕರಿಸಲಾಗುವುದು’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಇಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ನಂಜುಂಡಪ್ಪ ವರದಿ ಸಿದ್ಧಪಡಿಸಿದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಮುಂದಿನ ಐದು ವರ್ಷಗಳ ಅಭಿ ವೃದ್ಧಿಗೆ ಹೊಸ ಮಾನದಂಡ ನಿಗದಿ ಪಡಿಸ
ಲಾಗುವುದು’ ಎಂದರು. ಆದರೆ, ಈ ವರದಿ ಪರಿಷ್ಕರಣೆಗೆ ಹೊಸ ಉನ್ನತಾ ಧಿಕಾರ ಸಮಿತಿ ರಚಿಸಲಾಗುತ್ತದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲಿಲ್ಲ.

’ಕಲ್ಯಾಣ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿದೆ. ಹೀಗಾಗಿ ಈ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆಗಳು ಎಂದು ಗುರುತಿಸಿದೆ. ಈ ಜಿಲ್ಲೆಗಳೂ ಸೇರಿದಂತೆ ಈ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ ನಿವಾರಣೆ ಹಾಗೂ ಸ್ವಯಂ ಉದ್ಯೋಗಕ್ಕೆ ಒತ್ತು ನೀಡುವ ಮೂಲಕಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು‘ ಎಂದರು.

‘ಒಂದು ಕುಟುಂಬ ಚೈತನ್ಯಶೀಲವಾಗಿರಬೇಕು. ಇಂತಹ ಖುಷಿ ಕುಟುಂಬಗಳನ್ನು ಹೆಚ್ಚಿಸಿ ಆ ಮೂಲಕ ಅಭಿವೃದ್ಧಿ ಸೂಚ್ಯಂಕ ಅಳೆಯಬೇಕು ಎಂಬುದು ನಮ್ಮ ಬಯಕೆ. ಯೋಜನಾ ಆಯೋಗದ ಸದಸ್ಯರೊಂದಿಗೆ ಚರ್ಚಿಸಿ ಈ ಬಗ್ಗೆ ಕಾರ್ಯಕ್ರಮ ರೂಪಿಸುತ್ತೇವೆ’ ಎಂದು ಹೇಳಿದರು.

ಉದ್ಯೋಗ ಸೃಷ್ಟಿಗೆ ಒತ್ತು: ‘ಉದ್ಯೋಗ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುತ್ತೇವೆ. ಉದ್ಯಮಿಗಳನ್ನು ಸೆಳೆಯಲುಬಂಡವಾಳ ಹೂಡಿಕೆ ಸಮಾವೇಶ ನಡೆಸುತ್ತೇವೆ. ಉದ್ಯಮಿಗಳು ಎಷ್ಟು ಬಂಡವಾಳ ಹೂಡಿಕೆ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಅವರು ಎಷ್ಟು ಜನರಿಗೆ ಉದ್ಯೋಗ ನೀಡುತ್ತಾರೆ ಎಂಬುದರ ಆಧಾರದ ಮೇಲೆ ಸರ್ಕಾರ ಅವರಿಗೆ ರಿಯಾಯ್ತಿ ನೀಡಲಿದೆ’ ಎಂದು ಪ್ರಕಟಿಸಿದರು.

ಕೆಕೆಆರ್‌ಡಿಬಿಗೆ ₹3 ಸಾವಿರ ಕೋಟಿ ಅನುದಾನದ ಭರವಸೆ

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಉದ್ದೇಶಕ್ಕೆಂದೇ ಸ್ಥಾಪನೆಯಾಗಿರುವ ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಈಗ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ವಿನಿಯೋಗಿಸಿದರೆ ಮುಂದಿನ ಬಜೆಟ್‌ನಲ್ಲಿಅನುದಾನವನ್ನು ₹ 1,500 ಕೋಟಿಯಿಂದ ₹ 3 ಸಾವಿರ ‌
ಕೋಟಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಘೋಷಿಸಿದರು.

‘ರಾಜ್ಯ ಸರ್ಕಾರ ಇಲ್ಲಿಯವರೆಗೆ ₹ 8 ಸಾವಿರ ‌ಕೋಟಿಗೂ ಅಧಿಕ ಮೊತ್ತವನ್ನು ’ಕೆಕೆಆರ್‌ಡಿಬಿ‘ಗೆ ಬಿಡುಗಡೆ ಮಾಡಿದೆ. ಅದರಲ್ಲಿ ₹ 6 ಸಾವಿರ ಕೋಟಿ ಖರ್ಚಾಗಿದೆ. ಇನ್ನೂ 13 ಸಾವಿರ ಕಾಮಗಾರಿಗಳು ಪೂರ್ಣಗೊಳ್ಳಬೇಕಿದ್ದು, ಉಳಿದ ₹ 2 ಸಾವಿರ ಕೋಟಿಯನ್ನು ಬರುವ ಮಾರ್ಚ್‌ನೊಳಗೆ ಖರ್ಚು ಮಾಡಬೇಕು. ಅಂದಾಗ ಮಾತ್ರ ಹೆಚ್ಚುವರಿ ₹ 1,500 ಕೋಟಿಯನ್ನು ಮುಂದಿನ ಬಜೆಟ್‌ನಲ್ಲಿ ನೀಡುತ್ತೇನೆ’ ಎಂದು ಷರತ್ತು ವಿಧಿಸಿದರು.

‘371 (ಜೆ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಚನೆಯಾದ ಕೋಶವನ್ನು ಬೆಂಗಳೂರಿನಿಂದ ಕಲಬುರ್ಗಿಗೆ ಸ್ಥಳಾಂತರಿಸಲಾಗುವುದು. ಇದರಿಂದಾಗಿ ಈ ಭಾಗದಲ್ಲಿ ಖಾಲಿ ಇರುವ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಶ್ರೇಣಿಯ ಹುದ್ದೆಗಳ ನೇಮಕಾತಿಯ ಮೇಲ್ವಿಚಾರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ಈಗ ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮೊದಲ ಆದ್ಯತೆ ನೀಡುತ್ತೇವೆ. ’ಕೆಕೆಆರ್‌ಡಿಬಿ‘ಗೂ ಸಿಬ್ಬಂದಿ ನೇಮಿಸಬೇಕು ಎಂಬ ಬೇಡಿಕೆ ಇದೆ. ಇದೂ ಸೇರಿದಂತೆ ಹೊಸ ಹುದ್ದೆಗಳ ಭರ್ತಿಗೆ ನಂತರ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ನಾನು ಯಾವುದೇ ಹೊಸ ಘೋಷಣೆಗಳನ್ನು ‌ಹೊರಡಿಸುವುದಿಲ್ಲ.‌ ಈಗಾಗಲೇ ಇರುವ ಯೋಜನೆಗಳನ್ನು ‌ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು‌ ಗಮನ ಹರಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT